Advertisement

ನೆನಪಿನ ಬುತ್ತಿ ಹೊತ್ತು ತರುವ ಆಟೋಗ್ರಾಫ್

03:45 AM Apr 18, 2017 | Harsha Rao |

ಇತ್ತೀಚಿಗೆ ಮನೆಯ ನನ್ನ ಕೋಣೆ ಕ್ಲೀನ್‌ ಮಾಡುವಾಗ ಮೂಲೇಲಿ ಭದ್ರವಾಗಿ ಅವಿತು ಕೂತಿದ್ದ ಹಳೆಯ ಬಣ್ಣದ ಪುಸ್ತಕವೊಂದು ಸಿಕ್ಕಿತು. ತೆರೆದು ನೋಡಿದೆ ಅಷ್ಟೆ. ಅದರಲ್ಲಿನ ಮುದ್ದು ಮುದ್ದು ಬರಹಗಳು ನನ್ನನ್ನು ಇಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ದವು. ಜಾತ್ರೇಲಿ ಗೊಂಬೆಗಳನ್ನು ನೋಡಿದ ಮಗುವೊಂದು ತನಗಾದ ಖುಷಿಯನ್ನು ವ್ಯಕ್ತಪಡಿಸಲಾಗದೇ ಬೆರಗುಗಣ್ಣಿನಿಂದ ಕಣ್ಣನ್ನು ಮಿಟುಕಿಸದೆ ನೋಡುತ್ತಾ ನಿಂತ ಹಾಗೆ, ಆ ಪುಸ್ತಕವನ್ನು ನಾನು ಬೆರಗುಗಣ್ಣಿನಿಂದ ನೋಡುತ್ತಾ ನಿಂತುಬಿಟ್ಟಿದ್ದೆ. ಅದೆಷ್ಟು ದಿನಗಳಾಗಿದ್ದವು ಅದನ್ನು ನೋಡದೆ, ಮುಟ್ಟದೆ! ಅದೇ ಸ್ನೇಹಿತರೆ… ಹಿಂದೆ ಶಾಲೆ ಬಿಡುವಾಗ, ಕಾಲೇಜು ಬಿಡುವಾಗ ಗೆಳೆಯ ಗೆಳತಿಯರಿಂದ ನಾಲ್ಕು ಸಾಲುಗಳನ್ನು ಬರೆಸಿಕೊಂಡಿದ್ದ ಆಟೋಗ್ರಾಫ್ ಪುಸ್ತಕ.

Advertisement

ನನ್ನ ಜೀವನದ ಹಾದಿಯಲ್ಲಿ ಕೆಲಕಾಲ ಜೊತೆಯಲ್ಲಿ ಹೆಜ್ಜೆಯಿಟ್ಟವರ ನೆನಪನ್ನು ಮನಸಿನಾಳದಿಂದ ಹೊರಗೆಳೆದದ್ದು ಇದೇ ಪುಸ್ತಕ. ಅದರಲ್ಲಿ ಕೆಲವರು ಪ್ರೀತಿಯಿಂದ, ಹಲವರು ತುಂಟತನದಿಂದ, ಇನ್ನೂ ಕೆಲವರು ಹಠದಿಂದ ಏನೇನೆಲ್ಲಾ ಬರೆದಿದ್ದ ದೊಡ್ಡ ಸಾಲುಗಳು ಹಾಗೂ ದಡ್ಡ ಸಾಲುಗಳನ್ನು ನೋಡುತ್ತಿದ್ದರೆ ತುಟಿಯಂಚಿನಲ್ಲಿ ಹಾಗೆಯೇ ನಗುವರಳಿತು. ಮನದ ಮೂಲೇಲಿ ಅಡಗಿದ್ದ ನೆನಪುಗಳು ಒಮ್ಮೆಲೆ ಗರಿ ಬಿಚ್ಚಿ ಕುಣಿಯಲಾರಂಭಿಸಿದವು. “ಮನದಲ್ಲಿ ಮಾತೊಂದು ಅಡಗಿದೆ, ಅಮ್ಮ ಕಲಿಸಿದ ಹಾಡು ಇದೆ, ಆ ಹಾಡಿನಲಿ ನಮ್ಮ ಗೆಳೆತನವಿದೆ’ ಎಂದು ಚೆಂದದ ಬಣ್ಣದ ಅಕ್ಷರಗಳಲ್ಲಿ ಬರೆದಿದ್ದ ಗೆಳೆಯನ ಆಟೋಗ್ರಾಫ್. “ಈ ಹೃದಯ ಬಯಸುವುದು ಪ್ರೀತಿಸುವ ಹೃದಯವನ್ನು’ ಎಂದು ಬರೆದಿದ್ದ ಗೆಳತಿಯ ಸಾಲುಗಳು. ಕಾಲೇಜಿನ ಹಳೆಯ ನೆನಪುಗಳನ್ನು ಕಣ್ಣ ಮುಂದೆ ತರಿಸಿತ್ತು. “ಸಮಯ ಸರಿಯಬಹುದು, ಜಗತ್ತಿನಲ್ಲಿ ಎಲ್ಲವೂ ಬದಲಾಗಬಹುದು, ಆದರೆ, ನಮ್ಮ ಸ್ನೇಹ ಶಾಶ್ವತ’ ಎಂದು ಬರೆದಿದ್ದ ಗೆಳತಿ, ನಮ್ಮ ಗೆಳೆತನ ನಮ್ಮಿಬ್ಬರ ಕೊನೆಯುಸಿರು ಇರುವವರೆಗೆ ಎಂದಿದ್ದ ಗೆಳೆಯ ಇದೀಗ ಎಲ್ಲಿದ್ದಾನೋ ಗೊತ್ತಿಲ್ಲ. ನೋಡುವ ಆಸೆಯಾಗುತ್ತಿದೆ. ಈ ರೀತಿಯಾಗಿ ಮನಸಿಗೆ ಅನಿಸಿದ್ದನ್ನು ನೇರವಾಗಿ, ವ್ಯಂಗ್ಯವಾಗಿ, ತಮಾಷೆಯಾಗಿ ಬರೆದುಕೊಟ್ಟ ಅದೆಷ್ಟೋ ಜನ ಒಮ್ಮೆ ಕಣ್ಣ ಮುಂದೆ ಬಂದು ಹೋದರು.

ಕಾಲೇಜು ದಿನಗಳಲ್ಲಿ ಆಟೋಗ್ರಾಫ್ ಪುಸ್ತಕವನ್ನು ಸ್ನೇಹಿತರಿಂದ ತುಂಬಿಸುವ ಕೆಲಸ ತುಂಬಾ ಖುಷಿ ಕೊಡುತ್ತಿತ್ತು. ಮಾರ್ಚ್‌ ಏಪ್ರಿಲ್‌ ಬಂತೆಂದರೆ ಡೈರಿ ಪುಸ್ತಕವೊಂದನ್ನು ತೆಗೆದುಕೊಂಡು ಅದರ ಮುಖಪುಟದಲ್ಲಿ ಚಂದದ ಅಕ್ಷರ ಬರೆಯುವವರ ಕೈಲಿ ನಮ್ಮ ಹೆಸರನ್ನು ಕಲರ್‌ಫ‌ುಲ್‌ ಆಗಿ ಬರೆಸೋದು. ಮನಸ್ಸಿಗೆ ಹತ್ತಿರವಾದ ನಾಲ್ಕೈದು ಮಂದಿ ಸ್ನೇಹಿತರು ತಮ್ಮ ವಿಶಿಷ್ಟ ಅನುಭವಾಮೃತ ಬರೆಯಲು ನಾಲ್ಕೈದು ಪುಟಗಳನ್ನು ಮೀಸಲಿಡುವುದು. ಫ್ರೀ ಮಾಡಿಕೊಂಡು ಆಟೋಗ್ರಾಫ್ ಪುಸ್ತಕ ತೆಗೆದುಕೊಂಡು ಅದಕ್ಕೆ ಬಣ್ಣ ಬಣ್ಣದ ಸ್ಟಿಕ್ಕರ್ ಅಂಟಿಸಿ, ಕವನಗಳ ಸಾಲುಗಳನ್ನು ಬರೆಯುವುದು ಬಹಳ ಖುಷಿ ಕೊಡುತ್ತಿತ್ತು. ಇನ್ನು ಕ್ಲಾಸಿನಲ್ಲಿ ಗೆಳತಿಯರು ಇದ್ದರೂ ಕೂಡ ಮಾತನಾಡುತ್ತಿದ್ದುದು ಕಡಿಮೆ. ಅದ್ಹೇಗೋ ಕಷ್ಟಪಟ್ಟು ಆಟೋಗ್ರಾಫ್ ಪುಸ್ತಕ ಕೊಟ್ಟರೆ, ನಾಲ್ಕೈದು ಹುಡುಗಿಯರು ಸೇರಿ ಬರೆದ ಆಟೋಗ್ರಾಫ್ ನೀಡುತ್ತಿದ್ದರು. ಅವರೇನು ಬರೆದಿದ್ದಾರೆ ಎಂದು ಓದುವ ಕುತೂಹಲ. “ಡಿಯರ್‌ ಫ್ರೆಂಡ್‌…’ ಅಂತ ಯಾರಾದ್ರೂ ಬರೆದಿದ್ದರಂತೂ ಆಕೆ ತುಂಬಾ ಬೋಲ್ಡ್‌ ಅಂತ ಅರ್ಥ ಮಾಡಿಕೊಳ್ಳುತ್ತಿದ್ದೆವು. 

ಒಟ್ಟಿನಲ್ಲಿ ಸುಮಾರು ಎರಡು ತಿಂಗಳ ಕಾಲ ಸತತವಾಗಿ ಎಲ್ಲರಿಂದಲೂ ಬರೆಸಿ, ಮನದ ಮೂಲೇಲಿ ಅಡಗಿದ್ದ ಭಾವನೆಗಳ ಬರಹಗಳ ಭಾರವಾದ ಪುಸ್ತಕದೊಂದಿಗೆ ಕಾಲೇಜಿನಿಂದ ಹೊರಬಂದಾಗ ಮತ್ತೆ ಅವರು ಬದುಕಿನಲ್ಲಿ ಸಿಗುತ್ತಾರೆಂಬ ಯಾವ ಗ್ಯಾರಂಟಿಯೂ ಇರಲಿಲ್ಲ. ಈಗ ಕುಳಿತು ಆ ಆಟೋಗ್ರಾಫ್ ಪುಸ್ತಕ ಓದುವಾಗ ಆ ದಿನಗಳ ನೆನಪಾಗುತ್ತವೆ. ಹಳೆಯ ಸಿನಿಮಾ ರೀಲಿನ ಹಾಗೆ. ಎಲ್ಲರ ಮುಖ ನೆನಪಿಗೆ ಬರುತ್ತದೆ.

ಆದರೆ ಈ ಆಟೋಗ್ರಾಫ್ ಪುಸ್ತಕದ ಸುಖ ಬಹುಶಃ ಇಂದು ಕಾಲೇಜು ಬಿಡುವ ಮಂದಿಗೆ ಸಿಗಲಾರದು ಅನಿಸುತ್ತದೆ. ಏಕೆಂದರೆ ಈ ಡಿಜಿಟಲ್‌ ಜಗತ್ತಿನಲ್ಲಿ ಕೈ ಬೆರಳುಗಳ ತುದಿಯಲ್ಲೇ ಸಿಗುವ ವಾಟ್ಸಾಪ್‌, ಫೇಸ್‌ಬುಕ್‌, ಮೆಸೆಂಜರ್‌ ಅಂತೆಲ್ಲಾ ಸೋಶಿಯಲ್‌ ಮೀಡಿಯಾಗಳಲ್ಲಿ ಕಳುಹಿಸಿದ ಮೆಸೇಜ್‌ಗೆ ಉತ್ತರ ಕೊಡಲು ಪುರುಸೊತ್ತಿಲ್ಲದ ಮೇಲೆ ಇವಕ್ಕೆಲ್ಲಾ ಎಲ್ಲಿ ಸಮಯ ಸಿಗುತ್ತದೆ ಅಲ್ವಾ? ಈ ಎಲ್ಲಾ ಜಾಲತಾಣಗಳೂ ನಾವು ದೂರದಲ್ಲಿದ್ದರೂ ಹತ್ತಿರದಲ್ಲಿದ್ದೇವೆ ಎಂಬ ಭಾವನೆಯನ್ನು ಮೂಡಿಸಿ ಮುದ ನೀಡಿ ಗೆಳೆತನದ ಭರವಸೆಗೂ ಸಹಕಾರಿಯಾಗುತ್ತವೆ. ಆದರೆ. ಈ ಪುಟ್ಟ ಪುಸ್ತಕ ಮುಂದೊಂದು ದಿನ ಓದಿದಾಗ ಸಿಗುವ ಆನಂದವನ್ನು ಸೋಷಿಯಲ್‌ ಮೀಡಿಯಾಗಳು ಕೊಡಬಲ್ಲುದೇ?

Advertisement

ನಿಮ್ಮಲ್ಲೂ ಇಂಥ ಆಟೋಗ್ರಾಫ್ ಪುಸ್ತಕ ಇದ್ದರೆ ತೆಗೆದು ಧೂಳು ಕೊಡವಿ ಒಮ್ಮೆ ಓದಿ ರಿಲ್ಯಾಕ್ಸ್‌ ಆಗಿ. ಅದು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಒಂದು ಸಾಧನ ಕೂಡಾ ಹೌದು!! ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬಂದು ಹೋಗುತ್ತಾರೆ. ಹತ್ತಿರವಿದ್ದೂ ದೂರವಿರುವ, ದೂರವಿದ್ದೂ ಹತ್ತಿರವಿದ್ದಂತೆ ತೋರುವ ಈ ಜೀವನದ ವೈಶಿಷ್ಟ್ಯಅರ್ಥವಾಗುವುದು ಮಾತ್ರ ಹಳೆಯ ಗೆಳೆಯ ಗೆಳತಿಯರನ್ನು ಒಡಲಲ್ಲಿ ಹಿಡಿದಿಟ್ಟುಕೊಂಡಿರುವ ಈ ಆಟೋಗ್ರಾಫ್ ಪುಸ್ತಕದಿಂದ.

– ಲಕ್ಷ್ಮಿಕಾಂತ್ ಎಲ್‌.ವಿ., ತುಮಕೂರು 

Advertisement

Udayavani is now on Telegram. Click here to join our channel and stay updated with the latest news.

Next