ಬೆಂಗಳೂರು: ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬಂದಿ ವರ್ಗಾವಣೆಗೆ ಎ.11ರಿಂದ ಮೇ 31ರ ವರೆಗೆ ವೇಳಾಪಟ್ಟಿ ನಿಗದಿ ಮಾಡಿದೆ.
ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರು ವರ್ಗಾವಣೆಗೆ ಅರ್ಹರಾಗಿರುತ್ತಾರೆ. ಕಲ್ಯಾಣ ಕರ್ನಾಟಕ ಭಾಗದಿಂದ ಬೇರೆ ವಲಯಕ್ಕೆ ವರ್ಗಾವಣೆ ಬಯಸುವವರು ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು ಎಂದು ತಿಳಿಸಿದೆ.
ರಾಜ್ಯದ ಹಲವಾರು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಭಾರವಿಲ್ಲದ ಶಿಕ್ಷಕರನ್ನು ಅವಶ್ಯವಿರುವೆಡೆ ತಮ್ಮದೇ ಶಾಲೆಗಳಿಗೆ ವರ್ಗಾವಣೆ ಮೂಲಕ ಮರು ಹೊಂದಾಣಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇನ್ನು ಒಂದು ಸಂಸ್ಥೆಯಿಂದ ಮತ್ತೂಂದು ಸಂಸ್ಥೆಗೆ ಕೋರಿಕೆ ಮೇರೆಗೆ ವರ್ಗಾವಣೆ ಮಾಡುವ ವೇಳೆ ಎರಡೂ ಆಡಳಿತ ಮಂಡಳಿಗಳು ಪರಸ್ಪರ ಲಿಖೀತ ಒಪ್ಪಿಗೆ ಮಾಡಿಕೊಳ್ಳಬೇಕು. ವರ್ಗಾವಣೆ ವೇಳೆ ಶಿಕ್ಷಣ ಸಂಸ್ಥೆಗಳು ನೀಡುವ ದಾಖಲೆಗಳನ್ನು ಅವಲಂಬಿಸದೆ ಕಡ್ಡಾಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪ ನಿರ್ದೇಶಕರು ಖಚಿತಪಡಿಸಿಕೊಳ್ಳಬೇಕು. ವರ್ಗಾವಣೆ ಅನುಮೋದನೆಯಾಗುವ ತನಕ ಮತ್ತು ಇಲಾಖೆ ಆದೇಶ ಹೊರಡಿಸುವವರೆಗ ವರ್ಗಾವಣೆಗಳನ್ನು ಜಾರಿಗೊಳಿಸದಂತೆ ಪ್ರೌಢಶಿಕ್ಷಣ ನಿರ್ದೇಶಕರು ಸೂಚಿಸಲಾಗಿದೆ.
ವೇಳಾಪಟ್ಟಿ:
ಎ.11: ಖಾಸಗಿ ಅನುದಾನಿತ ಶಾಲಾ ಆಡಳಿತ ಮಂಡಳಿಯು ಮರು ಹೊಂದಾಣಿಕೆ ಮತ್ತು ವರ್ಗಾವಣೆ ಪ್ರಸ್ತಾವನೆಗಳನ್ನು ಬಿಇಒಗಳಿಗೆ ಸಲ್ಲಿಸಬೇಕು.
ಎ.16: ಬಿಇಒಗಳು ಶಾಲೆಗಳಿಂದ ಬಂದಂತಹ ಪ್ರಸ್ತಾವನೆಗಳನ್ನು ಪರಿಶೀಲಿಸಿ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಬೇಕು.
ಎ.26: ಬಿಇಒ, ಡಿಡಿಪಿಐಗಳು ದೃಢೀಕರಿಸಿದ ಪ್ರಸ್ತಾವೆಗಳನ್ನು ಆಯುಕ್ತರ ಕಚೇರಿಗೆ ಸಲ್ಲಿಸಬೇಕು.
ಮೇ 31: ಪ್ರಸ್ತಾವನೆಗಳನ್ನು ಪರಿಶೀಲಿಸಿ ವರ್ಗಾವಣೆಗೆ ಅನುಮೋದನೆ ನೀಡಲಾಗುತ್ತದೆ.