ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿವಿಯ ಪ್ರಭಾರಿ ಕುಲಪತಿ, ಸಿಬ್ಬಂದಿ ವರ್ಗಾವಣೆ ವಿಷಯದಲ್ಲಿ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಯ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಮಂಗಳವಾರ ಪ್ರತಿಭಟನೆ ನಡೆಸಿದರು.
ತೋಟಗಾರಿಕೆ ವಿವಿಯ ಹಂಗಾಮಿ ಕುಲಪತಿ ಡಾ|ಎಚ್.ಬಿ. ಲಿಂಗಯ್ಯ ಅವರು ಸಿಬ್ಬಂದಿ ವರ್ಗಾವಣೆಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹಂಗಾಮಿ ಕುಲಪತಿ ಆಗಿರುವ ಅವರು ಯಾವುದೇ ವರ್ಗಾವಣೆಗೆ ಅಧಿಕಾರವೂ ಹೊಂದಿಲ್ಲ. ಈ ಕುರಿತು ಸರ್ಕಾರದ ಸ್ಪಷ್ಟ ನಿರ್ದೇಶನವಿದೆ. ಆದರೂ, ಹಂಗಾಮಿ ಕುಲಪತಿಗಳು ತಮಗೆ ಬೇಕಾದ ಸಿಬ್ಬಂದಿಯನ್ನು, ಬೇಕಾದಂತೆ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಹೋರಾಟ ನಿರತ ಸಿಬ್ಬಂದಿ ಆರೋಪಿಸಿದರು.
ವಿವಿಯ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಎಲ್. ಜಗದೀಶ ಮಾತನಾಡಿ, ಸರ್ಕಾರದ ನಿಯಮದಂತೆ ಒಂದು ವಾರದ ಹಿಂದೆಯೇ ವರ್ಗಾವಣೆ ಮಾಡುವಂತೆ ಎಲ್ಲ ಸಿಬ್ಬಂದಿ ಮೂಲಕ ಮನವಿ ಮಾಡಿದ್ದೇವು. ಆದರೆ, ವರ್ಗಾವಣೆಗೆ ಅವಕಾಶವಿಲ್ಲ ಎಂದು ಕುಲಪತಿಗಳು ಹೇಳಿದ್ದರು. ಈಗ ಜು. 28ರಂದು ಓರ್ವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ವರ್ಗ ಮಾಡಿದ್ದಾರೆ. ಇದು ಪಕ್ಷಪಾತಿ ಧೋರಣೆಯಾಗಿದೆ ಎಂದು ದೂರಿದರು. ಈ ನಿಯಮ ಬಾಹಿರ ವರ್ಗಾವಣೆಯನ್ನು ತಕ್ಷಣ ತಡೆ ಹಿಡಿಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಬೆಂಗಳೂರಿನಿಂದಲೇ ನಿರ್ವಹಣೆ ? : ವಿವಿಯ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷ ರಾಜಶೇಖರ ಬಡಿಗೇರ ಮಾತನಾಡಿ, ಕಳೆದ 2ರಿಂದ 3 ವರ್ಷಗಳ ಅವಧಿ ಯಲ್ಲಿ ಯಾವುದೇ ಶಿಕ್ಷಕೇತರ ಸಿಬ್ಬಂದಿ ವರ್ಗಾವಣೆಯಾಗಿಲ್ಲ. ಈವರೆಗೆ 7 ಜನ ಉಪ ಕುಲಪತಿಗಳನ್ನು ಕಂಡ ನಾವು, ಸದ್ಯದ ಹಂಗಾಮಿ ಉಪ ಕುಲಪತಿಗಳಿಂದ ವಿಚಿತ್ರ ಆಡಳಿತ ಅನುಭವ ಪಡೆಯುತ್ತಿದ್ದೇವೆ. ನಾವೆಲ್ಲ ಹಲವಾರು ವರ್ಷಗಳಿಂದ ವರ್ಗಾವಣೆಗೆ ಮನವಿ ಮಾಡಿದರೂ ಆಗಿಲ್ಲ. ಆದರೆ, ಈಗ ಏಕಾಏಕಿ ವರ್ಗ ಮಾಡಲಾಗುತ್ತಿದೆ. ತೋಟಗಾರಿಕೆ ವಿವಿಯ ಕೇಂದ್ರ ಕಚೇರಿ ಬಾಗಲಕೋಟೆಯಲ್ಲಿದ್ದರೂ, ಅದರ ನಿರ್ವಹಣೆ ಮಾತ್ರ ಬೆಂಗಳೂರಿನಿಂದ ಆಗುತ್ತಿದೆ ಎಂದು ಆರೋಪಿಸಿದರು. ಬಳಿಕ ನೂತನ ಉಪಕುಲಪತಿ ಕೆ.ಎಂ.ಇಂದಿರೇಶ, ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಮನವಿ ಆಲಿಸಿ, ಪ್ರತಿಭಟನೆ ಹಿಂಪಡೆಯಲು ಮನವಿ ಮಾಡಿದರು.
ವಿವಿಯ ಪ್ರಾಧ್ಯಾಪಕರಾದ ಡಾ|ಪ್ರಸನ್ನ, ಡಾ|ಗೋಳಗಿ, ಡಾ|ಶಿವಯೋಗಿ ರ್ಯಾವಲದ, ಡಾ|ತಮದಡ್ಡಿ, ಡಾ|ಕೆರೂಟಗಿ, ಶಿಕ್ಷಕೇತರ ಸಿಬ್ಬಂದಿಗಳಾದ ರವೀಂದ್ರ ಪೂಜಾರ, ಬಿ.ಎಸ್. ಮಲ್ಲಿಗವಾಡ, ಜಿ.ಎಸ್. ಕೆಂಗಾಪುರ, ರವಿಶಂಕರ, ಎಸ್.ಬಿ. ಸುರಕೋಡ, ರೂಪಾ ಹಾವರಗಿ, ಎಸ್.ಬಿ. ಕಬ್ಬೇರಹಳ್ಳಿ, ಎಚ್.ಆರ್. ಚಿನ್ನಣ್ಣವರ ಮುಂತಾದವರು ಪಾಲ್ಗೊಂಡಿದ್ದರು.