Advertisement

ಮತಗಟ್ಟೆಯತ್ತ ಸಿಬ್ಬಂದಿ ಹೆಜ್ಜೆ

04:27 PM May 12, 2018 | |

ಚಿತ್ರದುರ್ಗ: ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ನಗರದ ಮಸ್ಟರಿಂಗ್‌ ಕೇಂದ್ರದಲ್ಲಿ ಮಸ್ಟರಿಂಗ್‌ ಕಾರ್ಯ ಶುಕ್ರವಾರ ನಡೆಯಿತು.

Advertisement

ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬೇಕಾದ
ಪರಿಕರಗಳನ್ನು ಮಸ್ಟರಿಂಗ್‌ ಸ್ಥಳದಲ್ಲಿ ಹಂಚಿಕೆ ಮಾಡಲಾಯಿತು. ಮತಯಂತ್ರ, ವಿವಿ ಪ್ಯಾಟ್‌, ಬ್ಯಾಲೆಟ್‌ ನಮೂನೆ, ಕಂಟ್ರೋಲ್‌ ಯೂನಿಟ್‌, ಪೆನ್‌, ಪ್ಯಾಡ್‌, ಮತ ಹಾಕುವ ಅಂಕಣಗಳು, ಕಾರ್ಡ್‌ಬೋರ್ಡ್‌, ವಿಳಾಸ ಪಟ್ಟಿಗಳು,
ಮತದಾರರ ರಿಜಿಸ್ಟರ್‌, ಅಳಿಸಲಾಗದ ಶಾಯಿ, ಮತದಾರರ ಚೀಟಿಗಳು, ಮತಗಟ್ಟೆ ಗುರುತಿರುವ ರಬ್ಬರ್‌ ಮೊಹರು, ಟ್ಯಾಗ್‌, ರಬ್ಬರ್‌ ಸ್ಟಾಂಪ್‌, ಲೋಹದ ಮೊಹರು, ಸ್ಟಾಂಪ್‌ ಪ್ಯಾಡ್‌ ಸೇರಿದಂತೆ ಸುಮಾರು 93 ಉಪಕರಣ ಸೇರಿದಂತೆ ಮತದಾನಕ್ಕೆ ಅಗತ್ಯವಾಗಿ ಬೇಕಾಗಿರುವ ಅಗತ್ಯ ಪರಿಕರಗಳನ್ನು ಪಡೆದುಕೊಂಡ ಚುನಾವಣಾ ಸಿಬ್ಬಂದಿ ತಮಗೆ ನಿಗಪಡಿಸಿರುವ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸಿದರು. 

ಮತಗಟ್ಟೆ ಕೇಂದ್ರಕ್ಕೆ ತೆರಳುವ ಮುನ್ನ ತಮಗೆ ನೀಡಲಾದ ಬ್ಯಾಲೆಟ್‌ ಯೂನಿಟ್‌ ಸೇರಿದಂತೆ ಮತ್ತಿತರ ಪರಿಕರಗಳನ್ನು ಪರಿಶೀಲಿಸಿಕೊಂಡರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಮಸ್ಟರಿಂಗ್‌ ಸ್ಥಳಕ್ಕೆ ಚುನಾವಣಾ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು ಬೆಳಿಗ್ಗೆ 6 ಗಂಟೆಗೆ ಆಗಮಿಸಿದ್ದರು. ಇಡೀ ಜಿಲ್ಲೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗಾಗಿ ಪ್ರತಿ ಮತ ಕ್ಷೇತ್ರ ತಂಡಕ್ಕೆ ತಲಾ ಎರಡು ಬ್ಯಾಲೆಟ್‌ ಯೂನಿಟ್‌ಗಳನ್ನು ವಿತರಿಸಲಾಯಿತು. 

ಚಿತ್ರದುರ್ಗ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಿಂದ 70 ವಾಹನಗಳು, ಮೊಳಕಾಲ್ಮೂರು ಸರ್ಕಾರಿ
ಪದವಿಪೂರ್ವ ಕಾಲೇಜು ಆವರಣದಿಂದ 54 ವಾಹನಗಳು, ಚಳ್ಳಕೆರೆ ಎಚ್‌ಪಿಪಿಸಿ ಪ್ರಥಮದರ್ಜೆ ಕಾಲೇಜು ಆವರಣದಿಂದ 53 ವಾಹನಗಳು, ಹಿರಿಯೂರು ಸೆಂಟ್‌ ಆನ್ಸ್‌ ಪ್ರೌಢಶಾಲೆ ಆವರಣದಿಂದ 49 ವಾಹನಗಳು, ಹೊಸದುರ್ಗದ ಶ್ರೀಮತಿ ತಾಯಮ್ಮ ಎಡೆತೊರೆ ಸದ್ದಿವಾಲ್‌ ಲಿಂಗಯ್ಯ ಪದವಿಪೂರ್ವ ಕಾಲೇಜು ಆವರಣದಿಂದ 45 ವಾಹನಗಳು ಹಾಗೂ ಹೊಳಲ್ಕೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಿಂದ 53 ವಾಹನಗಳನ್ನು ಚುನಾವಣಾ ಕಾರ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿದೆ  ವಿಧಾನಸಭೆ, ಲೋಕಸಭೆ ಸೇರಿದಂತೆ ನಾಲ್ಕು ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಮೊದಲ ಚುನಾವಣೆಯಲ್ಲಿ ನನಗೂ ಭಯ, ಆತಂಕ ಇತ್ತು. ಆದರೆ ಈಗ ಅಂತಹ ಯಾವುದೇ ಆತಂಕವಿಲ್ಲ.
  ಬಿ.ಎಸ್‌. ನಿರ್ಮಲಾ, ಮತಗಟ್ಟೆ ಅಧಿಕಾರಿ. 

ವೃತ್ತಿ ಜೀವನದಲ್ಲಿ ಇದೇ ಮೊದಲ ಸಲ ಚುನಾವಣಾ ಕಾರ್ಯವನ್ನು ನಿರ್ವಹಿಸುತ್ತಿದ್ದೇವೆ. ಒಂದು ರೀತಿ
ಭಯ ಇದ್ದರೂ ಖುಷಿಯಾಗುತ್ತಿದೆ. ಚುನಾವಣಾ ಆಯೋಗ ಎಲ್ಲ ರೀತಿಯ ತರಬೇತಿ ನೀಡಿದೆ. ಸಂತೋಷದಿಂದಲೇ ಚುನಾವಣಾ ಕಾರ್ಯಕ್ಕೆ ತೆರಳುತ್ತಿದ್ದೇವೆ. 
 ಮಂಗಳಮ್ಮ ಹಾಗೂ ಸುಕನ್ಯಾ, ಮತಗಟ್ಟೆ ಸಿಬ್ಬಂದಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next