Advertisement

ಪಶು ಚಿಕಿತ್ಸಾಲಯಗಳಲ್ಲಿ ಸಿಬ್ಬಂದಿ ಕೊರತೆ

11:39 AM Mar 09, 2019 | Team Udayavani |

ಹಟ್ಟಿಚಿನ್ನದಗಣಿ: ಗುರುಗುಂಟಾ, ಗೆಜ್ಜಲಗಟ್ಟಾ, ಆನ್ವರಿಗಳಲ್ಲಿ 3 ಪಶು ಚಿಕಿತ್ಸಾಲಯಗಳಿದ್ದು, ಅಗತ್ಯ ಸಿಬ್ಬಂದಿ ಇಲ್ಲದೇ ಸೂಕ್ತ ಚಿಕಿತ್ಸೆ ದೊರೆಯದೇ ರಾಸುಗಳು ಮೃತಪಡುತ್ತಿವೆ.

Advertisement

ಒಂದು ಚಿಕಿತ್ಸಾಲಯಕ್ಕೆ 3 ಸಿಬ್ಬಂದಿ ನೇಮಕ ಮಾಡಲಾಗಿದೆ. ಆದರೆ ಒಂದು ಕೇಂದ್ರ ಸರಾಸರಿ ಸುಮಾರು 51 ಹಳ್ಳಿಗಳ ಜಾನುವಾರುಗಳಿಗೆ ಸೇವೆ ಒದಗಿಸಬೇಕಿದೆ. ಕೇಂದ್ರಕ್ಕೆ ಬಂದು ಹೋಗುವ ರಾಸುಗಳಿಗೆ ಚಿಕಿತ್ಸೆ ನೀಡುತ್ತ ಕುಳಿತರೆ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಸೇವೆ ಒದಗಿಸಲು ಆಗುತ್ತಿಲ್ಲ. ಹಳ್ಳಿಗಳಿಗೆ ಭೇಟಿ ನೀಡಿ ಚಿಕಿತ್ಸೆಗೆ ಹೋಗಬೇಕಾದರೆ ಕೇಂದ್ರಕ್ಕೆ ಬೀಗ ಜಡಿದೇ ಹೋಗುವ ಅನಿವಾರ್ಯತೆ ಇದೆ. ಗುರುಗುಂಟಾ ವ್ಯಾಪ್ತಿಯಲ್ಲಿ ಕನಿಷ್ಠ 6 ಪಶು ಚಿಕಿತ್ಸಾಲಯಗಳಿರಬೇಕು. ಆದರೆ ಇರುವ ಒಂದು ಕೇಂದ್ರದಲ್ಲಿರುವ ಮೂರು ಜನ ಸಿಬ್ಬಂದಿಯಿಂದ 70 ಹಳ್ಳಿ ಹಾಗೂ 180ಕ್ಕೂ ಹೆಚ್ಚು ದೊಡ್ಡಿಗಳ ಪಶುಗಳಿಗೆ ಸೇವೆ ಒದಗಿಸುವಲ್ಲಿ ಇಲಾಖೆ ಹಿಂದೆ ಬಿದ್ದಿದೆ. 

ಪುಂಡ ಪೋಕರಿಗಳ ಹಾವಳಿ: ಇನ್ನು ಗೆಜ್ಜಲಗಟ್ಟಾ ಪಶು ಚಿಕಿತ್ಸಾಲಯವಂತೂ ಗುಟ್ಕಾ, ಮದ್ಯಪಾನ ಕೇಂದ್ರವಾಗಿ ಮಾರ್ಪಟ್ಟಿದೆ. ಹಳ್ಳಿಗಳಿಗೆ ಚಿಕಿತ್ಸೆಗೆ ಸಿಬ್ಬಂದಿ ಹೋಗುವುದನ್ನೇ ಪುಂಡ ಪೋಕರಿಗಳು ಕಾದು ಕುಳಿತು, ನಂತರ ತಮ್ಮ ಚಟುವಟಿಕೆ ಆರಂಭಿಸುತ್ತಿದ್ದಾರೆ. ಪುಂಡರ ಹಾವಳಿಗೆ ಇಲಾಖೆ ಸುಮ್ಮನೆ ಕುಳಿತಿರುವುದು ವಿಪರ್ಯಾಸ.

ನಾವೇನು ಮಾಡೋಣ?: ಆನ್ವರಿ ಕೇಂದ್ರ ತೆಗೆಯುವುದೇ ಅಪರೂಪ. ಯಾವಾಗಲೂ ಮುಚ್ಚಿದಂತೆಯೇ ಇರುತ್ತದೆ. ಸಿಬ್ಬಂದಿ ವಿಚಾರಿಸಿದರೆ ಸಿಬ್ಬಂದಿ ಕೊರತೆಯಿದೆ. ನಾವು ಅಗತ್ಯ ಚಿಕಿತ್ಸೆ ನೀಡುತ್ತಿದ್ದೇವೆ. ಇರುವ 3 ಸಿಬ್ಬಂದಿ ಏನು ಮಾಡೋದು ಹೇಳಿ ಎಂದು ಪ್ರಶ್ನಿಸುತ್ತಾರೆ. ಇನ್ನು ಹಟ್ಟಿ ವಿಚಾರಕ್ಕೆ ಬಂದರೆ ಪಪಂ ಒಂದು ತಾಲೂಕಾಗುವ ಎಲ್ಲ ಅರ್ಹತೆ ಹೊಂದಿದ್ದು, ಜಿಲ್ಲೆಯಲ್ಲಿಯೇ ಜನಸಂಖ್ಯೆಯಲ್ಲಿ 4ನೇ ಸ್ಥಾನ ಹೊಂದಿದ ಪ್ರದೇಶದಲ್ಲಿ ಒಂದೇ ಒಂದು ಪಶು ಚಿಕಿತ್ಸಾ ಕೇಂದ್ರವಿಲ್ಲದಿರುವುದು ನೋವಿನ ಸಂಗತಿ. 

ಸಚಿವರ ನಡೆಗೆ ಬೇಸರ: ಪಶು ಸಂಗೋಪನಾ ಸಚಿವರು ಅಗತ್ಯ ಸಿಬ್ಬಂದಿ ನೇಮಕ ಮಾಡಿ ಅನುಕೂಲ ಕಲ್ಪಿಸುವುದು ಬಿಟ್ಟು, ಪಶು, ಮತ್ಸ್ಯಮೇಳ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪಶು ಸಂಗೋಪನಾ ಡಿಪ್ಲೋಮಾ ಪದವೀಧರರ ಸಂಘದ ರಾಜ್ಯಾಧ್ಯಕ್ಷ ಅಶ್ವಕ್‌ ಭಾಗವಾನ, ಜಿಲ್ಲಾಧ್ಯಕ್ಷ ಸೈಯದ್‌ ಖಾದ್ರಿ ಖಾರವಾಗಿ ಪ್ರಶ್ನಿಸುತ್ತಾರೆ.

Advertisement

ಡಿಪ್ಲೋಮಾ ಪದವೀಧರರ ಹುದ್ದೆಗಳ ಭರ್ತಿಗೆ ನಾವು ಪಶು ಸಚಿವರ ಆದಿಯಾಗಿ ಮುಖ್ಯಮಂತ್ರಿವರೆಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಶೀಘ್ರ ಹುದ್ದೆ ಭರ್ತಿಗೆ ಒತ್ತಾಯಿಸಿ ನಮ್ಮ ಸಂಘಟನೆ ವತಿಯಿಂದ ಪಶು ಇಲಾಖೆ ಸಚಿವರ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
   ಸೈಯದ್‌ ಖಾದ್ರಿ, ಪಶು ಸಂಗೋಪನಾ ಡಿಪ್ಲೋಮಾ ಪದವೀಧರ ಸಂಘದ ಜಿಲ್ಲಾಧ್ಯಕ್ಷ

ಖಾಲಿ ಹುದ್ದೆ ಭರ್ತಿ ಮಾಡಿಕೊಂಡರೆ ಸೇವೆ ಒದಗಿಸಬಹುದು. ಜಿಲ್ಲಾ ಉಪನಿರ್ದೇಶಕರು ಈ ಕುರಿತು ತೀರ್ಮಾನ ಕೈಗೊಳ್ಳಬೇಕಿದೆ. 
   ರಾಚಪ್ಪ, ಲಿಂಗಸುಗೂರು ಪಶು ಇಲಾಖೆ ಸಹಾಯಕ ನಿರ್ದೇಶಕ  

„ಅಮರೇಶ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next