ಆನೇಕಲ್: ಹುಟ್ಟಿದ ಮೊದಲ ದಿನದಿಂದಲೇ ತಾಯಿಯಿಂದ ತಿರಸ್ಕೃತಗೊಂಡ ಹುಲಿಮರಿಯನ್ನು ಕಳೆದ 7 ತಿಂಗಳಿಂದ ಆರೈಕೆ ಮಾಡುವ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಾಧಿ ಕಾರಿಗಳು ಹಾಗೂ ಸಿಬ್ಬಂದಿ ಆಸರೆಯಾಗಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಸ್ಪತ್ರೆ ಯಲ್ಲಿ ಬೆಳೆಯುತ್ತಿರುವ ಏಳು ತಿಂಗಳ ಹುಲಿಮರಿ, ಹುಟ್ಟಿದ ದಿನವೇ ತಾಯಿಯಿಂದ ಬೇರ್ಪಡುತ್ತಿದ್ದಂತೆ ದೃಷ್ಟಿಯನ್ನೂ ಕಳೆದುಕೊಂಡಿತ್ತು. ತಾಯಿಯ ಹಾಲಿಲ್ಲದೆ, ಕಣ್ಣಿನ ದೃಷ್ಟಿಯೂ ಸರಿಯಿಲ್ಲದೆ ಬೆಳೆಯುತ್ತಿ ರುವ ಕಂದಮ್ಮನನ್ನು ವೈದ್ಯರು ಹಾಗೂ ಸಿಬ್ಬಂದಿ ಪ್ರತಿದಿನ ಆರೈಕೆ ಮಾಡುತ್ತಿದ್ದು, ನಿತ್ಯ ಮೇಕೆ ಹಾಲನ್ನು ಬಾಟಲ್ ಮೂಲಕ ಕುಡಿಸಿ ಪೋಷಿಸುತ್ತಿದ್ದಾರೆ.
ಉದ್ಯಾನವನದಲ್ಲಿನ ಅನುಷ್ಕಾ ಹಾಗೂ ಮಿಥುನ್ ಹುಲಿಗಳಿಗೆ 2022ರ ಮಾರ್ಚ್ 25 ರಂದು ಜನಿಸಿದ ದಿನವೇ ತಾಯಿ ತನ್ನ ಮರಿಯನ್ನು ಹತ್ತಿರಕ್ಕೂ ಸೇರಿಸಿರಲಿಲ್ಲ. ಬಳಿಕ ಹುಲಿಮರಿಯನ್ನು ಉದ್ಯಾನವನದಲ್ಲಿರುವ ಮೃಗಾಲಯದ ಆಸ್ಪತ್ರೆಗೆ ತಂದು ಆರೈಕೆ ಮಾಡಲಾರಂಭಿಸಿದರು. ವೈದ್ಯರು ಮೊದಲು ಕಣ್ಣಿನ ಪೊರೆ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಆರೈಕೆ ಮಾಡಿದ ಪರಿಣಾಮ ಮೂರು ತಿಂಗಳಿಂದೀಚೆಗೆ ಹುಲಿಮರಿಗೆ ದೃಷ್ಟಿ ಸರಿಯಾಗಿದೆ. ಇವಳ ಓಡಾಟ, ತುಂಟಾಟ, ಕುಣಿದಾಟ ಸಿಬ್ಬಂದಿಯ ಸಂಭ್ರಮಕ್ಕೆ ಕಾರಣವಾಗಿದೆ.
ವೈದ್ಯಾಧಿಕಾರಿ ಡಾ. ಉಮಾಶಂಕರ್ ನೇತೃತ್ವದಲ್ಲಿ ಡಾ.ಮಂಜುನಾಥ್, ಡಾ.ವಿಜಯ್, ಡಾ.ವಿಶಾಕ್ ತಂಡ ಪ್ರತಿದಿನ ಹುಲಿಮರಿಯನ್ನು ಕಾಳಜಿಯಿಂದ ಆರೈಕೆ ಮಾಡುತ್ತಿದ್ದಾರೆ. ಹಗಲಿನಲ್ಲಿ ಸಾವಿತ್ರಮ್ಮ, ಶಿವಕುಮಾರ್, ರಾತ್ರಿ ಸಮಯದಲ್ಲಿ ಮಹಾದೇವ, ರಾಜು, ಬಸಯ್ಯ ಅವರನ್ನು ಹುಲಿಮರಿಗೆ ಆಹಾರ ನೀಡಲು ನೇಮಿಸಲಾಗಿದೆ. ಬದುಕುವುದೇ ಅಸಾಧ್ಯ ಎಂಬಂತಿದ್ದ ಹುಲಿಮರಿ ಈಗ ಆರೋಗ್ಯವಾಗಿ ಬೆಳೆಯುತ್ತಿದ್ದು ಸಿಬ್ಬಂದಿ ಪ್ರೀತಿಗೆ ಪಾತ್ರವಾಗಿದೆ.
ತಾಯಿಯಿಂದ ಬೇರ್ಪಟ್ಟಾಗ ಮರಿಗೆ ಕಣ್ಣಿನ ದೃಷ್ಟಿ ಸರಿಯಿರಲಿಲ್ಲ. ಎರಡೂ ಕಿಡ್ನಿ ವೈಫಲ್ಯದಿಂದ ಮರಿ ಬಳಲುತ್ತಿತ್ತು. ನಿರಂತರ ಚಿಕಿತ್ಸೆ ಮೂಲಕ ಆರೈಕೆ ಮಾಡಲಾಗುತ್ತಿದೆ. ಆದರೆ ಕಿಡ್ನಿಯಲ್ಲಿರುವ ಕೆಲವು ರಂಧ್ರಗಳಿಂದ ತೊಂದರೆಯಾಗುವ ಸಾಧ್ಯತೆ ಇದ್ದು ಹೆಚ್ಚಿನ ಮುತುವರ್ಜಿಯಿಂದ ಸಲಹಲಾಗುತ್ತಿದೆ.
-ಡಾ.ಉಮಾಶಂಕರ್, ವೈದ್ಯಾಧಿಕಾರಿ, ಬನ್ನೇರುಘಟ್ಟ ಜೈವಿಕ ಉದ್ಯಾನವನ
15 ವರ್ಷದ ಅನುಷ್ಕಾ ಎರಡು ಬಾರಿ ಮರಿ ಹಾಕಿದೆ. ಆದರೆ ಮರಿಗಳನ್ನು ದೂರ ಇಡುತ್ತಿದ್ದು, ಇದರಿಂದಾಗಿ ಆರೈಕೆ ಮಾಡಬೇಕಾಯಿತು. ಸದ್ಯ 7 ತಿಂಗಳ ಮರಿ ಮುದ್ದಾಗಿ ಬೆಳೆಯುತ್ತಿದ್ದು, ಅದರ ಪಾಲನೆಯನ್ನು ಸಿಬ್ಬಂದಿ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ
. -ಡಾ.ವಿಜಯ್, ಬನ್ನೇರುಘಟ್ಟ ಜೈವಿಕ ಉದ್ಯಾನವನ
ಪ್ರತಿದಿನ ಬೆಳಗ್ಗೆ ಮಧ್ಯಾಹ್ನ, ಸಂಜೆ, ರಾತ್ರಿ ಸಮಯದಲ್ಲಿ ಬಾಟಲ್ ಮೂಲಕ ಮೇಕೆ ಹಾಲು ಕುಡಿಸುತ್ತೇವೆ. ಈ ಸಂದರ್ಭದಲ್ಲಿ ನಮ್ಮ ಮನೆಯ ಮಕ್ಕಳಂತೆ ಮರಿ ಕೂಡ ಆಟವಾಡುತ್ತಾ, ಹಾಲು ಕುಡಿಯುತ್ತಾಳೆ.
-ಸಾವಿತ್ರಮ್ಮ, ಉದ್ಯಾನವನದ ಸಿಬ್ಬಂದಿ
-ಮಂಜುನಾಥ್ ಎನ್.ಬನ್ನೇರುಘಟ್ಟ