Advertisement

ಗಣರಾಜ್ಯೋತ್ಸವದಂದು ಕ್ರೀಡಾಂಗಣ ಉದ್ಘಾಟನೆ

09:48 PM Jan 20, 2020 | Lakshmi GovindaRaj |

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿರುವ ಕ್ರೀಡಾಂಗಣ ನವೀಕರಣಗೊಂಡಿದೆ. ಜನವರಿ 26ರ ಗಣರಾಜ್ಯೋತ್ಸವ ಆಚರಣೆಯ ದಿನದಂದೇ ಉದ್ಘಾಟನೆ ಮಾಡಲಾಗುವುದು ಎಂದು ಮಾಜಿ ಸಚಿವ ಹಾಗೂ ಶಾಸಕ ಎನ್‌.ಮಹೇಶ್‌ ಹೇಳಿದರು.

Advertisement

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 71ನೇ ಗಣರಾಜ್ಯೋತ್ಸವ ಮತ್ತು ಮಡಿವಾಳ ಮಾಚಿ ದೇವರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಮೊಟ್ಟ ಮೊದಲನೇಯ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಫ‌ುಲೆ ಅವರ ಹೆಸರನ್ನು ನವೀಕರಣಗೊಂಡಿರುವ ಕ್ರೀಡಾಂಗಣಕ್ಕೆ ಇಡಲಾಗಿದೆ ಎಂದರು.

ಸರ್ಕಾರದ ತೀರ್ಮಾನಕ್ಕೆ ಸ್ವಾಗತ: ಕಳೆದ 1848ರಲ್ಲಿ ಸಾವಿತ್ರಿ ಬಾಫ‌ುಲೆ ಅವರು ಮಹಿಳೆಯರು ಶಾಲೆಗೆ ಹೋಗುವಂತೆ ಹೋರಾಟ ಮಾಡಿದರು. ಈ ಮಹಿಳೆಯ ಜಯಂತಿಯನ್ನು ಆಚರಣೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿರುವುದನ್ನು ಸ್ವಾಗತಿಸುತ್ತೇವೆ. ಗಣರಾಜ್ಯೋತ್ಸವ ಆಚರಣೆಯ ದಿನದಂದು ಸಂವಿಧಾನದ ಆಚರಣೆ ದಿನವಾಗಿದೆ. ಇದನ್ನು ಮಹತ್ವ ಪೂರ್ಣವಾಗಿ ಆಚರಣೆ ಮಾಡಬೇಕಾದ್ದು, ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ನೀಡುವ ಬಹುಮಾನದ ಮೇಲೆ ಸಂವಿಧಾನ ಪೀಠಿಕೆ ಮುದ್ರಣ ಮಾಡಿರುವ ಪ್ರಶಸ್ತಿ ನೀಡಿ, ಹಬ್ಬಗಳನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಆಚರಣೆ ಮಾಡಬೇಕು ಎಂದು ತಿಳಿಸಿದರು.

ಭಾಷಣಕ್ಕೆ ಸರ್ಕಾರಿ ನೌಕರರನ್ನು ಆಯ್ಕೆ ಮಾಡಿ: ಗಣರಾಜ್ಯೋತ್ಸವ ಆಚರಣೆಯ ವೇಳೆ ವಿಶೇಷ ಭಾಷಣಕಾರರನ್ನಾಗಿ ಸರ್ಕಾರಿ ಸೇವೆಯಲ್ಲಿ ಇರುವವರಿಂದಲೇ ವಿಶೇಷ ಭಾಷಣ ಮಾಡಿಸಬೇಕು. ಏಕೆಂದರೆ ಖಾಸಗಿ ವ್ಯಕ್ತಿಗಳಿಗೆ ಭಾಷಣ ನೀಡಿದಾಗ, ರಾಷ್ಟ್ರವಿಡಿ ಮುಗಿಲೆದ್ದಿರುವ ಸಿಎಎ ಮತ್ತು ಎನ್‌ಆರ್‌ಸಿ ವಿಷಯಗಳನ್ನು ಪ್ರಸ್ತಾಪಿಸಿ, ಸಭೆ ಗೊಂದಲವಾಗಬಾರದು, ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಉತ್ತಮ ರೀತಿಯಲ್ಲಿ ಭಾಷಣ ಮಾಡುವ ಸರ್ಕಾರಿ ನೌಕರರನ್ನು ಆಯ್ಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

Advertisement

ಶಾಲೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ: ಜ.26ರಂದು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಪಟ್ಟಣದ ನ್ಯಾಷನಲ್‌ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಪ್ರಗತಿಪರ ಸಂಘಟನೆಯ ಮುಖಂಡರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಮಡಿವಾಳ ಮಾಚಿ ದೇವರ ಜಯಂತಿ: ಪಟ್ಟಣದ ಗುರುಭವನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಡಿವಾಳ ಮಾಚಿ ದೇವರ ಜಯಂತಿಯನ್ನು ಫೆ.1ರ ಬೆಳಗ್ಗೆ 11 ಗಂಟೆಗೆ ಆಯೋಜನೆ ಮಾಡಲಾಗಿದೆ. ಅಧಿಕಾರಿಗಳು ಪ್ರತಿಯೊಬ್ಬರು ಕಡ್ಡಾಯವಾಗಿ ಭಾಗವಹಿಸಿ, ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಬೇಕಾಗಿದೆ ಎಂದು ಹೇಳಿದರು.

ಮಡಿವಾಳ ಮಾಚಿ ದೇವರ ಭಾವಚಿತ್ರವುಳ್ಳ ಮೆರವಣಿಗೆ ಪಟ್ಟಣದ ರಾಮ ಮಂದಿರದಿಂದ ಹೊರಟು ಪ್ರಮುಖ ರಸ್ತೆಯ ಮೂಲಕ ತೆರಳಿ, ಗುರುಭವನದಲ್ಲಿ ಬಂದು ಸೇರಿಲಿದೆ ಎಂದು ಹೇಳಿದ ಶಾಸಕರು, ಮಡಿವಾಳ ಮಾಚಿ ದೇವರು ನಡೆದು ಬಂದ ದಾರಿಯ ಬಗ್ಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದರು.

ಸಭೆಯಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷ ರಾಜೇಂದ್ರ, ಉಪಾಧ್ಯಕ್ಷೆ ಲತಾ, ಜಿಪಂ ಸದಸ್ಯ ನಾಗರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ ಕುಮಾರ್‌, ತಹಶೀಲ್ದಾರ್‌ ಕೆ. ಕುನಾಲ್‌, ಇಒ ಶಶಿಧರ್‌, ಬಿಇಒ ಚಂದ್ರಪಾಟೀಲ್‌ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಗತಿಪರ ಸಂಘಟನೆಯ ಮುಖಂಡರು ಹಾಜರಿದ್ದರು.

ಕಾನೂನಿನ ಅರಿವು ಪ್ರಜೆಗಳಿಗೆ ಬರುವವರೆಗೆ ದೇಶ ಅಭಿವೃದ್ಧಿ ಅಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚಿಸಿರುವಂತೆ 2020 ನ.26ರ ವರೆಗೆ ಇಡೀ ವರ್ಷ ಕಾನೂನು ಅರಿವು ಕಾರ್ಯಕ್ರಮ ಆಚರಣೆಗೆ ಆದೇಶ ಹೊರಡಿಸಲಾಗಿದೆ. ಈ ವರ್ಷ 71ನೇ ಗಣರಾಜ್ಯೋತ್ಸವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುವುದು ಎಲ್ಲರ ಕರ್ತವ್ಯ.
-ಎನ್‌.ಮಹೇಶ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next