Advertisement

ಇನ್ನೂ ಮುಗಿಯದ ಕ್ರೀಡಾಂಗಣ ಅಭಿವೃದ್ಧಿ

04:29 PM Aug 07, 2023 | Team Udayavani |

ಮಂಡ್ಯ: ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ 11 ತಿಂಗಳು ಕಳೆಯುತ್ತಾ ಬಂದರೂ ಕಾಮಗಾರಿ ಮುಗಿದಿಲ್ಲ. ಇದರಿಂದ ಈ ಬಾರಿಯೂ ಸ್ವಾತಂತ್ರ್ಯ ದಿನಾಚರಣೆಯನ್ನು ಪೊಲೀಸ್‌ ಡಿಎಆರ್‌ ಮೈದಾನದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

Advertisement

ಸರ್ಕಾರ ಕ್ರೀಡಾಂಗಣ ಮೇಲ್ದರ್ಜೆಗೇರಿಸುವ ಹಿನ್ನೆಲೆ ಯಲ್ಲಿ 10 ಕೋಟಿ ರೂ. ಅನುದಾನ ನೀಡಿ 11 ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ನೀಡಲಾಗಿತ್ತು. ಕಳೆದ ಜು.31ಕ್ಕೆ ಕಾಮಗಾರಿ ಪೂರ್ಣ ಗೊಳ್ಳಬೇಕಿತ್ತು. ಆದರೆ ಇದುವರೆಗೂ 5 ಕೋಟಿ ರೂ. ವೆಚ್ಚದ ಶೇ.75ರಷ್ಟು ಕಾಮಗಾರಿ ಮಾತ್ರ ಮುಗಿದಿದ್ದು, ಇನ್ನೂ 4.75 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ.

ಟೆನ್ಸಿಲ್‌ ರೂಫಿಂಗ್‌ ಕಾಮಗಾರಿ: ಕ್ರೀಡಾಂಗ ಣವನ್ನು ಅಭಿವೃದ್ಧಿಪಡಿಸಲು ನಾಲ್ಕು ಕಾಮ ಗಾರಿಗಳಿಗೆ ಅನು ಮೋದನೆ ನೀಡಲಾಗಿದೆ. ಟೆನ್ಸಿಲ್‌ ರೂಫಿಂಗ್‌, 400 ಮೀಟರ್‌ ಮಡ್‌ ಟ್ರ್ಯಾಕ್‌, ಮಳೆ ಬಂದಾಗ ಕೆರೆಯಂತಾಗುವ ಕ್ರೀಡಾಂಗಣಕ್ಕೆ 10 ಕಡೆ ಯುಜಿಡಿ ನಿರ್ಮಾಣ ಹಾಗೂ ಮಣ್ಣಿನಿಂದ ಮೈದಾನ ಫಿಟ್ಟಿಂಗ್‌ ಮಾಡುವ ಕಾಮಗಾರಿ ಕೈಗೊಳ್ಳಲಾಗಿದೆ. ಅದರಂತೆ ಈಗಾಗಲೇ ಟೆನ್ಸಿಲ್‌ ರೂಫಿಂಗ್‌ ಅಳವಡಿಸಲಾಗಿದೆ. 400 ಮೀಟರ್‌ ಮಡ್‌ ಟ್ರ್ಯಾಕ್‌ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನುಳಿದ  ಕಾಮಗಾರಿ ನಡೆಯಬೇಕಿದೆ.

ಅಕ್ಟೋಬರ್‌ಗೆ ಕಾಮಗಾರಿ ಮುಗಿಯುವ ಸಾಧ್ಯತೆ:

ಈಗಾಗಲೇ ಗುತ್ತಿಗೆದಾರರಿಗೆ ನೀಡಿರುವ ಅವಧಿ ಪೂರ್ಣಗೊಂಡಿದೆ. ಇನ್ನೂ ಮೂರು ತಿಂಗಳು ಕಾಮಗಾರಿ ನಡೆಯಲಿದ್ದು, ಅಕ್ಟೋಬರ್‌ಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ನವೆಂಬರ್‌ ತಿಂಗಳ ಕನ್ನಡ ರಾಜ್ಯೋತ್ಸವ ಆಚರಣೆಗೆ ಮೈದಾನ ಲಭ್ಯವಾಗಲಿದೆ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್‌ ತಿಳಿಸಿದರು.

Advertisement

ಅಭಿವೃದ್ಧಿಗೆ ಸಂಬಂಧಿ ಸಿದಂತೆ ಚರ್ಚೆ ಇಂದು:

ಸರ್‌ಎಂವಿ ಕ್ರೀಡಾಂಗಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಆ.7ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾಂಗಣ ಉಸ್ತುವಾರಿ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಕಾಮಗಾರಿ, ಅಭಿವೃದ್ಧಿಗೆ ಸಂಬಂಧಿ ಸಿದಂತೆ ಚರ್ಚೆ ನಡೆಯಲಿದೆ. ಅದಕ್ಕೂ ಮುನ್ನ ಕ್ರೀಡಾಂಗಣ ಕಾಮಗಾರಿ ಪರಿಶೀಲನೆ ನಡೆಯಲಿದೆ.

ಸಿಂಥೆಟಿಕ್‌ ಟ್ರ್ಯಾಕ್‌ ಕೈಬಿಟ್ಟ ಸರ್ಕಾರ:

ಕಳೆದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಿಂಥೆಟಿಕ್‌ ಟ್ರ್ಯಾಕ್ ಮಾಡುವ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಅನುದಾನ ಘೋಷಿಸಲಾಗಿತ್ತು. ಆದರೆ ಆ ಯೋಜನೆಯನ್ನು ಕೈಬಿಡಲಾಗಿದೆ. ಸಿಂಥೆಟಿಕ್‌ ಕ್‌ ಮಾಡಿದರೆ ಜಿಲ್ಲಾಡಳಿತ ಆಚರಣೆ ಮಾಡುವ ರಾಷ್ಟ್ರೀಯ ದಿನಾಚ ರಣೆಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರತಿ ವರ್ಷ ನಡೆಸುವ ಕ್ರೀಡೆಗಳು ಹಾಗೂ ಸರ್ಕಾರಿ, ಖಾಸಗಿಯ ವಿವಿಧ ಸಂಘ-ಸಂಸ್ಥೆಗಳು ಯಾವುದೇ ಕ್ರೀಡಾ ಪಂದ್ಯಾವಳಿ ಆಯೋಜಿಸಲು

ಸಾಧ್ಯವಾಗುವುದಿಲ್ಲ. ಟೂರ್ನಿಮೆಂಟ್‌, ಪಂದ್ಯಾವಳಿ ನಡೆಸಲು ಶುಲ್ಕ ನಿಗದಿಪಡಿಸಲಾಗುತ್ತಿದೆ. ಆ ಆದಾಯ ನಿಂತು ಹೋಗಲಿದೆ. ಆ ಹಿನ್ನೆಲೆಯಲ್ಲಿ ಸಿಂಥೆಟಿಕ್‌ ಟ್ರ್ಯಾಕ್ ಯೋಜನೆ ಕೈಬಿಡಲಾಗಿದೆ.

ಕಳಪೆ ಕಾಮಗಾರಿ ಆರೋಪ: ಪರಿಶೀಲನೆ:

ಕ್ರೀಡಾಂಗಣ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಂದಿದ್ದು, ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಕ್ರೀಡಾಂಗಣ ಸುತ್ತಲೂ ಇರುವ ಕಲ್ಲುಗಳನ್ನು ತೆಗೆದು ಟೆನ್ಸಿಲ್‌ ರೂಫಿಂಗ್‌ ಅಳವಡಿಸಿ ನಂತರ ಕಲ್ಲು ಜೋಡಿಸುವ ಕಾರ್ಯ ನಡೆಸಬೇಕಾಗಿತ್ತು. ಆದರೆ ರೂಫಿಂಗ್‌ ಮಾಡುವ ಕಂಬಗಳ ಜಾಗದಲ್ಲಿ ಮಾತ್ರ ಕಲ್ಲು ತೆಗೆದು ಜೋಡಿಸಲಾಗುತ್ತಿದೆ ಎಂಬ ಆರೋಪ ಬಂದಿತ್ತು.ಈ ಹಿನ್ನೆಲೆಯಲ್ಲಿ ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಇತ್ತೀಚೆಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಆಗ ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡು ಗುಣಮಟ್ಟದ ಕಾಮಗಾರಿ ನಡೆಸಿ, ಇಲ್ಲದಿದ್ದರೆ ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವ ಎಚ್ಚರಿಕೆ ನೀಡಿದ್ದರು.

ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಜು.31ರೊಳಗೆ ಮುಗಿಯಬೇಕಾಗಿತ್ತು. ಆದರೆ ಇದುವರೆಗೂ ಶೇ.75ರಷ್ಟು ಕಾಮಗಾರಿ ಮಾತ್ರ ಮುಗಿದಿದೆ. ಈಗಾಗಲೇ ಗುತ್ತಿಗೆದಾರರಿಗೆ ಬೇಗ ಮುಗಿಸುವಂತೆ ಸೂಚಿಸಲಾಗಿದೆ. ಅಕ್ಟೋಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ನವೆಂಬರ್‌ನ ಕನ್ನಡ ರಾಜ್ಯೋತ್ಸವ ಆಚರಣೆಗೆ ಕ್ರಮ ವಹಿಸಲಾಗುವುದು. ಕಳಪೆ ಕಾಮಗಾರಿಗೆ ಆರೋಪಕ್ಕೆ ಸಂಬಂಧಪಟ್ಟಂತೆ ಕಾಮಗಾರಿಯನ್ನು ತಂತ್ರಜ್ಞ ಎಂಜಿನಿಯರ್‌ ಮೇಲುಸ್ತುವಾರಿ ಮಾಡಿ ಪರಿಶೀಲನೆ ನಡೆಸಿ ಪ್ರಮಾಣಿಕರಿಸುತ್ತಾರೆ. ಆ ರೀತಿಯ ಲೋಪ ಕಂಡು ಬಂದಿಲ್ಲ. ಕಂಡು ಬಂದರೆ ಕ್ರಮ ವಹಿಸಲಾಗುವುದು.-ಓಂಪ್ರಕಾಶ್‌, ಸಹಾಯಕ ನಿರ್ದೇಶಕ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಮಂಡ್ಯ

10 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಅಲ್ಲಿ ಅಷ್ಟು ವೆಚ್ಚದ ಕಾಮಗಾರಿ ಕಂಡು ಬಂದಿಲ್ಲ. ಅಲ್ಲದೆ, ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದ್ದರಿಂದ ನಾನೇ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಿ ಗುತ್ತಿಗೆದಾರನ ಕಪ್ಪುಪಟ್ಟಿಗೆ ಸೇರ್ಪಡೆಗೆ ಸೂಚಿಸಿದ್ದೇನೆ. ಸೋಮವಾರ ಕ್ರೀಡಾಂಗಣ ಉಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಇದರ ಬಗ್ಗೆಯೂ ಚರ್ಚೆ ನಡೆಸಲಾಗುವುದು.-ಪಿ.ರವಿಕುಮಾರ್‌ಗೌಡ ಗಣಿಗ, ಶಾಸಕ, ಮಂಡ್ಯ

 -ಎಚ್‌.ಶಿವರಾಜ

 

Advertisement

Udayavani is now on Telegram. Click here to join our channel and stay updated with the latest news.

Next