ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿಯ ಬಂಡಾಯ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಪಕ್ಷ ನೀಡಿದ್ದ ಒಂದು ಪುಟದ ನೋಟಿಸ್‌ಗೆ 170 ಪುಟಗಳ ಉತ್ತರ ನೀಡುವ ಮೂಲಕ ಶಿಸ್ತು ಕ್ರಮದ ಎಚ್ಚರಿಕೆಗೂ ಸೆಡ್ಡು ಹೊಡೆದಿದ್ದಾರೆ.
ಅಡ್ಡ ಮತದಾನಕ್ಕಾಗಿ ನೋಟಿಸ್ ಕೊಟ್ಟರೂ ಕಾಂಗ್ರೆಸ್ ನಾಯಕರ ಮನೆಗೆ ಎಡತಾಕುವುದನ್ನು ನಿಲ್ಲಿಸದ ಈ ಇಬ್ಬರು ಗುರುವಾರ ಡಿಸಿಎಂ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಮತ್ತೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್.ಟಿ.ಎಸ್., ಪಕ್ಷ ನೀಡಿದ್ದ ನೋಟಿಸ್‌ಗೆ ಉತ್ತರ ನೀಡಿದ್ದೇನೆ ಎಂದಿದ್ದಾರೆ. ಅವರು ಒಂದು ಪುಟದ ನೋಟಿಸ್ ಕೊಟ್ಟಿದ್ದರು. ನಾವು 170 ಪುಟಗಳ ವಿವರಣೆ ಕೊಟ್ಟಿದ್ದೇವೆ. ಅವರು ಏನು ಮಾಡುತ್ತಾರೆ ಎಂದು ಕಾಯುತ್ತಿದ್ದೇವೆ. ಹಿಮಾಚಲ, ಗುಜರಾತ್ ಎಲ್ಲ ಕಡೆ ಒಂದೊಂದು ರೀತಿಯ ಪ್ರಕರಣಗಳು ನಡೆದಿವೆ. ಅಲ್ಲೆಲ್ಲ ಬಿಜೆಪಿಯವರು ಕಾಂಗ್ರೆಸ್‌ಗೆ ನೋಟಿಸ್ ಕೊಟ್ಟಿದ್ದಾರೆ. ಹೇಗೆ ವಿಪ್ ಜಾರಿ ಮಾಡಿದ್ದೀರಿ ಎಂದು ಸ್ಪಷ್ಟನೆ ಕೊಡಿ ಎಂದು ಕೇಳಿದ್ದಾರೆ. ಇವೆಲ್ಲವನ್ನೂ ನಮ್ಮ ಸ್ಪಷ್ಟನೆಯಲ್ಲಿ ದಾಖಲಿಸಿದ್ದೇವೆ. ನಮಗೇನೂ ಅವರಿಂದ ಸ್ಪಷ್ಟನೆ ಬೇಕಿಲ್ಲ. ಅದನ್ನು ಕೇಳುವ ಪ್ರಯತ್ನವೂ ನಮ್ಮದಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಶೋಭಾ ಕಿಡಿ:
ಇದೇ ವೇಳೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಶಾಸಕ ಎಸ್.ಟಿ. ಸೋಮಶೇಖರ್ ಕಿಡಿಕಾರಿದ್ದಾರೆ. ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬಳಿಕ ನನ್ನ ಕ್ಷೇತ್ರಕ್ಕೆ ಭೇಟಿ ಕೊಡುವುದಕ್ಕೆ ನಾನೇ ಭಯಪಡುವಂಥ ಸನ್ನಿವೇಶ ನಿರ್ಮಾಣವಾಗಿದೆ. ಯಾರು ಏನು ಮಾತನಾಡುತ್ತಾರೋ, ಯಾರನ್ನು ಎತ್ತಿ ಕಟ್ಟುತ್ತಾರೋ ಎಂಬ ಭಯ ಪ್ರಾರಂಭವಾಗಿದೆ. ಬೆಂಕಿ ಉಂಡೆಯಂಥ ಮಾತನಾಡುತ್ತಿದ್ದಾರೆ. ನನಗೆ ನನ್ನ ರಕ್ಷಣೆ ಮುಖ್ಯವಾಗಿದ್ದು, ಪೊಲೀಸ್ ಆಯುಕ್ತರಲ್ಲಿ ನೆರವು ಕೇಳಬೇಕೆಂದಿದ್ದೇನೆ. ಇವರು ಬೆಂಕಿ ಹಚ್ಚಲು ಬಂದಿದ್ದಾರೋ ಬಾಂಬ್ ಇಡಲು ಬಂದಿದ್ದಾರೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಕ್ಷ ಶುದ್ಧೀಕರಣದ ಬಗ್ಗೆ ಹಾಲಿ ಸಂಸದ ಡಿ.ವಿ. ಸದಾನಂದ ಗೌಡರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಈ ಹಿಂದೆ ಸಣ್ಣ ವ್ಯತ್ಯಾಸವೂ ಆಗಿರಲಿಲ್ಲ. ಡಿ.ಬಿ. ಚಂದ್ರೇಗೌಡರು ಸಂಸದರಾಗಿದ್ದಾಗ ಆಗಲೀ, ಸದಾನಂದ ಗೌಡರು 10 ವರ್ಷ ಸಂಸತ್ ಸದಸ್ಯರಾಗಿದ್ದಾಗ ಆಗಲಿ ಸಮಸ್ಯೆ ಆಗಿರಲಿಲ್ಲ ಎನ್ನುವ ಮೂಲಕ ಶೋಭಾ ಕರಂದ್ಲಾಜೆ ವಿರುದ್ಧ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಡಿ.ಕೆ. ಶಿವಕುಮಾರ್ ಅವರನ್ನು ಕಳೆದೊಂದು ವಾರದಿಂದ ಭೇಟಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಸಮಸ್ಯೆ ಬಗೆಹರಿಸುವಂತೆ ಜಲಮಂಡಳಿಗೆ ಸೂಚಿಸಿದ್ದಾರೆ ಎಂದರು.