Advertisement

ನಾಡಹಬ್ಬಕ್ಕೆ ವರ್ಚುವಲ್‌ ಸಂಪರ್ಕ : ಡಿಜಿಟಲ್ ‌ಕನ್ನಡಿಯಲ್ಲಿ ದಸರಾ ನೋಡಿ

12:01 PM Oct 16, 2020 | Suhan S |

ಬೆಂಗಳೂರು: “ನಾಡಹಬ್ಬ ದಸರಾ ಸಾಕ್ಷಾತ್‌ ವೀಕ್ಷಣೆಗೆ ಲಕ್ಷಾಂತರ ಮನಸ್ಸುಗಳು ಬಯಸಿದರೂ ಕೋವಿಡ್ ನಮ್ಮ ಕೈ ಕಟ್ಟಿ ಹಾಕಿದೆ. ಹಾಗಾಗಿ ವರ್ಚ್ಯುಯಲ್‌ ಮೂಲಕವೇ ಸಂಭ್ರಮ ಕಣ್ತುಂಬಿಕೊಳ್ಳಬೇಕು’. ಇದು, ಕೋವಿಡ್ ಸವಾಲಿನ ನಡುವೆ ಸಾಂಪ್ರದಾಯಿಕ ದಸರಾ ಆಚರಣೆಗೆ ಸಮರೋಪಾದಿ ಸಿದ್ಧತೆಯಲ್ಲಿ ನಿರತರಾಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರ ಮಾತುಗಳು. ದಸರಾ ಸಿದ್ಧತೆ ಕುರಿತು “ಉದಯವಾಣಿ’ಗೆ ಸಂದರ್ಶನ ನೀಡಿದ ಅವರು, ದಸರಾ ಸರಳವಾಗಿದ್ದರೂ ಸಂಪ್ರದಾಯ ಹಾಗೂ ಪರಂಪರೆ ಎತ್ತಿಹಿಡಿಯುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಹೇಳಿದರು.

Advertisement

ನೀವು ಉಸ್ತುವಾರಿ ಸಚಿವರಾದ ನಂತರ ಮೊದಲ ದಸರಾ ಸಿದ್ಧತೆ ಹೇಗೆ ನಡೆದಿದೆ?

ಅತ್ಯಂತ ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ನಡೆದಿದ್ದು ಕೋವಿಡ್ ಹಿನ್ನೆಲೆಯಲ್ಲಿ ನಮಗೆ ಸವಾಲು ಇದೆಯಾದರೂ ಎಲ್ಲ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ನಾವು ಸಜ್ಜಾಗಿದ್ದೇವೆ.

 ದಸರಾ ಸಾಕ್ಷಾತ್‌ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇಲ್ಲವಲ್ಲ?

ಅವಕಾಶ ಇಲ್ಲವಲ್ಲ? ನಿಜ, ನಾಡಹಬ್ಬ ದಸರಾ ನೋಡಲು ಲಕ್ಷಾಂತರ  ಮನಸ್ಸುಗಳು ಬಯಸಿವೆ. ಇದು ನಮ್ಮೆಲ್ಲರ ಹೆಮ್ಮೆಯ ನಾಡಹಬ್ಬ. ಆದರೆ, ಕೋವಿಡ್ ನಮ್ಮ ಕೈ ಕಟ್ಟಿಹಾಕಿದೆ.ಹೀಗಾಗಿ, ಪ್ರವೇಶಕ್ಕೆ ಸೀಮಿತ ಸಂಖ್ಯೆ ನಿಗದಿಪಡಿಸುವುದು ಅನಿವಾರ್ಯ. ತಜ್ಞರ ಶಿಫಾರಸು ಪಾಲನೆ ಮಾಡಿ ಆ ಪ್ರಕಾರವೇ ಎಲ್ಲ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

Advertisement

ಜಂಬೂ ಸವಾರಿ ಸೇರಿ ದಸರಾ ಕಾರ್ಯಕ್ರಮಗಳನ್ನು ನಾಡಿನ ಜನತೆಗೆ ಹೇಗೆ ತಲುಪಿಸಲಿದ್ದೀರಿ?

ಅರಮನೆ ಆವರಣದಲ್ಲಿ ನಡೆಯುವ ಜಂಬೂಸವಾರಿ ದೂರದರ್ಶನದ ಚಂದನ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ಉಳಿದಂತೆ ಚಾಮುಂಡಿ ಬೆಟ್ಟದಲ್ಲಿದಸರಾ ಉದ್ಘಾಟನೆ ಹಾಗೂ ಪ್ರತಿದಿನ ರಾತ್ರಿ ಎರಡು ಗಂಟೆ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯದ ಜನತೆಗೆ ತಲುಪಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿವೆ.

ಯಾವ ರೀತಿಯ ಸಿದ್ಧತೆ ?

ಈ ಬಾರಿ ಇಡೀ ದಸರಾಗೆ ಡಿಜಿಟಲ್‌ ಸ್ಪರ್ಶ ನೀಡಿದ್ದು ವರ್ಚುವಲ್‌ ಮೂಲಕ ವೀಕ್ಷಿಸಬಹುದು. ಮೊಬೈಲ್‌, ಟಿವಿ ಸೇರಿ ಸಮೂಹ ಮಾಧ್ಯಮಗಳೇ ಈ ಬಾರಿಯ ದಸರಾ ಜನತೆಗೆ ತಲುಪಿಸಲು ನಮಗೆ ಸಹಕಾರಿಯಾಗಲಿದೆ.

ದಸರಾ ಸಿದ್ಧತೆಗೆ ಸಹಕಾರ ಹೇಗಿದೆ?

‌ಹಿತ ಸಂಪುಟ ಸಹೋದ್ಯೋಗಿಗಳು,ಎಲ್ಲ ಇಲಾಖೆಗಳ ಅಧಿಕಾರಿಗಳು ಉತ್ತಮ ಸಹಕಾರ ನೀಡಿದ್ದಾರೆ. ಅದರಲ್ಲೂ ಆರೋಗ್ಯ ಇಲಾಖೆ, ಮೈಸೂರು ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಸಾಕಷ್ಟು ಶ್ರಮ ಹಾಕಿದೆ. ಮುಖ್ಯಮಂತ್ರಿಯವರು ಪ್ರತಿಹಂತದಲ್ಲೂ ದಸರಾ ಸಿದ್ಧತೆಯ ಮಾಹಿತಿ ಪಡೆದು ಸಲಹೆ-ಸೂಚನೆ ನೀಡುತ್ತಿದ್ದಾರೆ. ಶುಕ್ರವಾರವೂ ಮೈಸೂರಿಗೆ ಬಂದು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ

ಮೈಸೂರು ಸುತ್ತಮುತ್ತಲ ಪ್ರವಾಸಿ ತಾಣಗಳಿಗೂ ಪ್ರವೇಶ ಇಲ್ಲವೇ?

ಮೈಸೂರಿನ ನಾಗರಿಕರ ಆರೋಗ್ಯ ದೃಷ್ಟಿಯಿಂದ ಕೆಲ ದಿನಗಳ ಮಟ್ಟಿಗೆ ದೇವಸ್ಥಾನ, ಪ್ರವಾಸಿ ತಾಣಗಳಿಗೆ ಪ್ರವೇಶ ಕಲ್ಪಿಸಿಲ್ಲ. ಇದು ಅನಿವಾರ್ಯ. ಜನತೆ ಸಹಕರಿಸಬೇಕು

 ಪ್ರವೇಶ ನಿಷೇಧ ದಸರಾ ಸಂಭ್ರಮಕ್ಕೆ ತಣ್ಣೀರು ಎರಚಿದಂತೆ ಅಲ್ಲವೇ?

ಹೌದು. ಆದರೆ, ಅನಿವಾರ್ಯ ಅಲ್ಲವೇ? ದಸರಾ ಎಂದರೆ ಮೈಸೂರು ಅರಮನೆ, ದೀಪಾಲಂಕಾರ, ಮೃಗಾಲಯ, ವಸ್ತು ಪ್ರದರ್ಶನ, ಆಹಾರ ಮೇಳ ಹೀಗೆ ಪ್ರತಿಯೊಂದೂ ಸಂಭ್ರಮವೇ. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಏನೂ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಪಾಲ್ಗೊಳ್ಳುವ ಸೀಮಿತ ಸಂಖ್ಯೆಯ ಗಣ್ಯರು ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ಸಹ ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.

ದಸರಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ನಿಮ್ಮ ಸಂದೇಶವೇನು? : 

ಕೋವಿಡ್ ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಮಾಡುತ್ತಿರುವುದರಿಂದ ರಾಜ್ಯದ ಜನತೆ ಸಹಕರಿಸಬೇಕು. ತಾವು ಇರುವಲ್ಲಿಯೇ ದಸರಾ ಸಂಭ್ರಮಿಸಬೇಕು ಎಂದು ಮನವಿ ಮಾಡುತ್ತೇನೆ. ಮತ್ತೂಂದು ಪ್ರಮುಖವಿಚಾರ ಎಂದರೆ ದಸರಾ ಉದ್ಘಾಟನೆಗೆ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ಅವರ ಆಯ್ಕೆ ರಾಜ್ಯದ ಪ್ರತಿಯೊಬ್ಬರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಕೋವಿಡ್ ಮುಂಚೂಣಿ ವಾರಿಯರ್ಸ್‌ಗೆ ಸರ್ಕಾರ ನೀಡಿದ ಗೌರವ ಇದಾಗಿದೆ.

ದಸರಾ ನಮ್ಮ ಹೆಮ್ಮೆ, ನಾಡಿನ ಪರಂಪರೆಯ ಪ್ರತೀಕ. ಕೋವಿಡ್ ಹಿನ್ನೆಲೆಯಲ್ಲಿ ಪ್ರವೇಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಆದರೆ, ನಿಮ್ಮ ಮನೆಗಳಲ್ಲಿಯೇ ಕುಳಿತು ಸಂಭ್ರಮಿಸಲು ಅಡ್ಡಿಯಿಲ್ಲ. ದಸರಾಕಣ್ತುಂಬಿಕೊಳ್ಳಿ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನಾಡಿನ ಜನತೆಗೆ ಸಿಗಲಿ. ಆದಷ್ಟು ಬೇಗ ನಾವು  ಕೋವಿಡ್ ದಿಂದ ಮುಕ್ತರಾಗೋಣ. ರಾಜ್ಯದ ಅಭಿವೃದ್ಧಿಗೆ ಸಂಕಲ್ಪ   -ಎಸ್‌.ಟಿ.ಸೋಮಶೇಖರ್‌, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ.

 

ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next