ವಾಡಿ: ರಾಜ್ಯದ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7 ಮೀಸಲಾತಿ ಹೆಚ್ಚಳ ಬೇಡಿಕೆಯಿಟ್ಟು ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಶಾಂತಿಯುತವಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಚಳವಳಿ 40ನೇ ದಿನಕ್ಕೆ ಕಾಲಿಟ್ಟರೂ ಸರ್ಕಾರ ಕಣ್ಣು ತೆರೆದು ನೋಡುತ್ತಿಲ್ಲ. ಹೀಗೆ ನಿರ್ಲಕ್ಷಿಸಿದರೇ ರಾಜ್ಯದಾದ್ಯಂತ ಉಗ್ರ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಮಹರ್ಷಿ ವಾಲ್ಮೀಕಿ ಸಮಾಜದ ಚಿತ್ತಾಪುರ ತಾಲೂಕು ಅಧ್ಯಕ್ಷ ಭೀಮರಾವ ದೊರೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹರಿಹರದ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ನಡೆಸುತ್ತಿರುವ ಅನಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಮುಂದಿನ ಹೋರಾಟದ ಸಿದ್ಧತೆ ಕುರಿತು ಸ್ವಾಮೀಜಿಯವರೊಂದಿಗೆ ಸುದೀರ್ಘ ಮಾತುಕತೆ ನಡೆಸುವ ಮೂಲಕ ತಾಲೂಕಿಗೆ ಹಿಂದಿರುಗಿರುವ ಭೀಮರಾವ್ ದೊರೆ, ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ. ಎಸ್‌ಟಿ ಮೀಸಲಾತಿ ಹೆಚ್ಚಳದ ಕುರಿತು ಬೆಳಕು ಚೆಲ್ಲಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರ ವರದಿ ಜಾರಿಗೆ ತರಲು ರಾಜ್ಯ ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿದೆ. ಇದು ಬೇಡ ಸಮುದಾಯವನ್ನು ಕೆರಳಿಸಿದೆ. ಸ್ವಾಮೀಜಿ ಶಾಂತಿಯುತ ಹೋರಾಟಕ್ಕೆ ಆದೇಶ ನೀಡಿರುವುದರಿಂದ ರಾಜ್ಯದ ವಾಲ್ಮೀಕಿ ಜನರು ತಾಳ್ಮೆಯಿಂದ ಕಾಯುತ್ತಿದ್ದಾರೆ ಎಂದಿದ್ದಾರೆ.
ಅರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಪಂಗಡದ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಡಾ| ಬಾಬಾಸಾಹೇಬ ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯ ನೀಡಿದ್ದಾರೆ. ಈಗಿರುವ ಶೇ.3 ಮೀಸಲಾತಿಯಿಂದ ಜನಾಂಗದ ಏಳಿಗೆಯಾಗುತ್ತಿಲ್ಲ. ಅದನ್ನು ಶೇ.7ಕ್ಕೆ ಹೆಚ್ಚಿಸಿ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ನಮ್ಮ ಸಮುದಾಯದ ಜಗದ್ಗುರುಗಳು ಮೀಸಲಾತಿ ಹೆಚ್ಚಳಕ್ಕಾಗಿ ನಿರಂತರ ಹೋರಾಟದಲ್ಲಿದ್ದಾರೆ. ಸರ್ಕಾರ ಮಾತ್ರ ನಮ್ಮ ಬೇಡಿಕೆ ಈಡೇರಿಕೆಗೆ ಮನಸ್ಸು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿ ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಹಗುರವಾಗಿ ಪರಿಗಣಿಸಿದರೆ ವಾಲ್ಮೀಕಿ ಸಮುದಾಯ ಸುಮ್ಮನಿರಲ್ಲ. ಉಗ್ರ ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದ್ದಾರೆ.