ಮುಂಬಯಿ: ಸೈಂಟ್ ಪೀಟರ್ ಅಸೋಸಿಯೇಶನ್ ಬಾರ್ಕೂರು ಮುಂಬಯಿ ಇದರ ವತಿಯಿಂದ ತನ್ನ ಸಂಸ್ಥೆಯ ಪೋಷಕ “ಸೈಂಟ್ ಪೀಟರ್’ ಅವರ ಸಂತ ದಿನಾಚರಣೆಯು ಜು. 8 ರಂದು ಪೂರ್ವಾಹ್ನ ಅಂಧೇರಿ ಪೂರ್ವದ ಮರೋಲ್ ವಿಜಯನಗರದ ವಿನ್ಸೆಂಟ್ ಡಿ’ಪಲೋಟ್ಟಿ ಚರ್ಚ್ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಬೆಳಗ್ಗೆ ವಿನ್ಸೆಂಟ್ ಡಿ’ಪಲೋಟ್ಟಿ ಚರ್ಚ್‌ನಲ್ಲಿ ವಿನ್ಸೆಂಟ್ ಡಿ’ಪಲೋಟ್ಟಿ ಇಗರ್ಜಿಯ ಧರ್ಮಗುರು ರೆ| ಫಾ| ಬಾಲ್‌ರಾಜ್ ಸಂತ ಪೀಟರ್‌ಗೆ ಕೃತಜ್ಞತಾ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ, ಸಂತರನ್ನು ನೆನಪಿಸಿ ಮೊರೆಹೋಗುವುದು ಸರಿಯಲ್ಲ. ಬದಲಾಗಿ ದೈನಂದಿನವಾಗಿ ದೇವರನ್ನು ಸ್ತುತಿಸಿ ಪ್ರಾರ್ಥಿಸುವ ಮನೋಭಾವ ರೂಢಿಸಿಕೊಳ್ಳುವ ಅಗತ್ಯವಿದೆ. ಏಸುಕ್ರಿಸ್ತರಿಗೆ ಸಾಮೀಪ್ಯದ ಮತ್ತು ಪರಮಾಪ್ತ ಶಿಷ್ಯನಾಗಿದ್ದ ಸಂತ ಪೀಟರ್ ಅವರು ತಮ್ಮ ಸಂಸ್ಥೆಯ ಪೋಷಕರಾಗಿದ್ದು, ಅವರ ಪ್ರೇರಣೆ ಪಡೆದು ತಾವೂ ಸಮಾಜದ ಎಲ್ಲರಲ್ಲೂ ಅತ್ಮೀಯತೆಯ ಜೀವನ ರೂಪಿಸಿ ಕೊಂಡು ಬದುಕು ಹಸನುಗೊಳಿಸಿರಿ ಎಂದರು.
ಬಳಿಕ ಚರ್ಚ್ ಸಭಾಗೃಹದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಅಸೋಸಿಯೇಶನ್‌ನ ಅಧ್ಯಕ್ಷ ಐವಾನ್ ರೆಬೆಲ್ಲೋ ಅಧ್ಯಕ್ಷತೆಯಲ್ಲಿ ನಡೆದ 28 ನೇ ವಾರ್ಷಿಕ ಪೋಷಕ ಸಂತದಿನಾಚರಣಾ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಲ್ಲಿ ಕ್ವಾಡ್ರಸ್ ಅವರು ಉಪಸ್ಥಿತರಿದ್ದು ಮಾತನಾಡಿ, ಅಸೋಸಿಯೇಶನ್‌ನ ಸದಸ್ಯರೆಲ್ಲರೂ ಹƒದಯ ಶ್ರೀಮಂತಿಕೆಯುಳ್ಳವರು ಎನ್ನುವುದಕ್ಕೆ ಅಭಿಮಾನ ಪಡುತ್ತೇನೆ. ಸಾಂಘಿಕವಾಗಿ ಕೂಡಿ ತೆರೆಮರೆಯಲ್ಲಿದ್ದೇ ಸೇವಾ ನಿರತ ಈ ಸಂಸ್ಥೆ ಇತರ ಸಂಸ್ಥೆಗಳಿಗೆ ಮೇಲ್ಪಂಕ್ತಿಯೇ ಸರಿ. ಸಂಸ್ಥೆಯಿಂದ ಇನ್ನಷ್ಟು ಸೇವೆ ನಿರಂತರವಾಗಿ ನಡೆಯಲಿ. ನಿಮ್ಮ ಎಲ್ಲಾ ಸೇವೆಗೂ ಸಂತ ಪೀಟರ್ ಬಲತುಂಬಿ ಪ್ರೇರೆಪಿಸಲಿ ಎಂದು ನುಡಿದು, ಎಲ್ಲರಿಗೂ ಒಳಿತನ್ನೇ ಪ್ರಾಪ್ತಿಸಲಿ ಎಂದು ಆಶಿಸಿದರು.
ಗೌರವ ಅತಿಥಿಗಳಾಗಿ ಲಾರೆನ್ಸ್ ಕುವೆಲ್ಲೊ, ಸುಜಾನ್ ಕುವೆಲ್ಲೊ, ಹ್ಯಾರಿ ರೆಬೆಲ್ಲೊ, ಹ್ಯಾರಿ ಫೆರ್ನಾಂಡಿಸ್, ಫೆಲಿಕ್ಸ್ ಪಿಕಾರ್ಡೊ, ಆರ್ಚಿಬಾಲ್ಡ್ ಫುರ್ಟಾಡೊ ಉಪಸ್ಥಿತರಿದ್ದು ಶುಭಹಾರೈಸಿದರು. ಅಧ್ಯಕ್ಷ ಐವಾನ್ ರೆಬೆಲ್ಲೋ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪರರನ್ನು ಅರ್ಥೈಸುವ ಮನೋಭಾವ ಬೆಳೆಸಿ ನಾವೂ ಬೆಳೆದಾಗ ಜೀವನ ಪಾವನವಾಗುವುದು. ಅದಕ್ಕಾಗಿ ನಮ್ಮ ಸಂಸ್ಥೆಯ ಪೋಷಕ ಸಂತ ಪೀಟರ್‌ರ ವ್ಯಕ್ತಿತ್ವದ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ಜೀವಿಸಿದಾಗಲೇ ನಮ್ಮ ಉದ್ದೇಶಗಳು ಫಲಪ್ರದವಾಗುವುದು ಎಂದು ತಿಳಿಸಿದರು.
ಕಾರ್ಯದರ್ಶಿ ಎರಿಕ್ ಕರ್ವಾಲೋ ಸಂಸ್ಥೆಯ ಸೇವಾ ವೈಖರಿಯನ್ನು ತಿಳಿಸಿದರು. ಉಪಾಧ್ಯಕ್ಷರಾದ ಆ್ಯಂಟನಿ ಗೋವಿಯಸ್, ತಿಮೊಥಿ ಡಿ’ಸೋಜಾ, ಕೋಶಾಧಿಕಾರಿ ಜೋನ್ ಗೋವಿಯಸ್, ಅಧ್ಯಕ್ಷರುಗಳಾದ ಫೆಲಿಕ್ಸ್ ಬಾರೆ°ಸ್, ರಿಚಾರ್ಡ್ ಕರ್ವಾಲೋ, ಬೊನಿ ಸಿಕ್ವೇರಾ, ಐಡಾ ರೋಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲೈನ್ ಕಾರ್ವಾಲೊ ಮತ್ತಿ ಜಿಜೆಲ್ ಫೆರ್ನಾಂಡಿಸ್ ಅವರ ಭಕ್ತಿ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಅಸೋಸಿಯೇ ಶನ್‌ನ ಸಂಸ್ಥಾಪಕರ, ಸದಸ್ಯರ ಸೇವೆಯನ್ನು ಸ್ಮರಿಸಿ ಉಪಸ್ಥಿತ ಹಿರಿಯ ಸದಸ್ಯರನ್ನು ಗೌರವಿಸಿದರು. ಜತೆ ಕಾರ್ಯದರ್ಶಿ ಜೋಯ್ಲನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಐವಾನ್ ಸುವಾರಿಸ್ ವಂದಿಸಿದರು. ಸಾಂಸ್ಕೃತಿಕವಾಗಿ ಸದಸ್ಯರಿಂದ ವಿವಿಧ ನೃತ್ಯವಾಳಿ, ಕಿರು ನಾಟಕ ಮತ್ತು ಕೊಂಕಣಿ ಹಾಡುಗಳ ಗಾಯನ ನಡೆಯಿತು.
ಚಿತ್ರ-ವರದಿ: ರೊನಿಡಾ ಮುಂಬಯಿ