Advertisement

ಸೈಂಟ್‌ ಮೇರಿಸ್‌ ದ್ವೀಪ: ಬ್ಲಾಗರ್‌ಗೆ ಹಲ್ಲೆ ಯತ್ನ! ವರದಿಗೆ ಜಿಲ್ಲಾಧಿಕಾರಿ ಸೂಚನೆ

01:35 AM Jan 18, 2023 | Team Udayavani |

ಉಡುಪಿ : ಮಲ್ಪೆಗೆ ಆಗಮಿಸಿದ್ದ ಬ್ಲಾಗರ್‌ಗೆ ಸೈಂಟ್‌ ಮೇರಿಸ್‌ ಐಲ್ಯಾಂಡ್‌ ಸಿಬಂದಿ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಹಲ್ಲೆಗೆ ಯತ್ನಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ

Advertisement

ಮಲ್ಪೆ ಬೀಚ್‌ ಒಳಹೊಕ್ಕಾಗಿ ವಿವಿಧೆಡೆ ಸುಂಕ ಪಾವತಿಸಿ ತೆರಳುವ ಪ್ರವಾಸಿಗರಿಗೆ ಇಲ್ಲಿನ ವ್ಯವಸ್ಥೆಗಳು ಬೇಸರ ತರಿಸುತ್ತಿವೆ. ಸಖತ್‌ ಕಂಟೆಂಟ್ಸ್‌ ಹೆಸರಿನಲ್ಲಿರುವ ಫೇಸ್‌ಬುಕ್‌ ಪೇಜ್‌ನ ಪ್ರವಾಸಿ ಬ್ಲಾಗರ್‌ ಮಲ್ಪೆಯ ಸೈಂಟ್‌ ಮೇರಿಸ್‌ ಐಲ್ಯಾಂಡ್‌ಗೆ ತೆರಳಲು ಬೈಕ್‌ನಲ್ಲಿ ಆಗಮಿಸಿದ್ದ. ಮಲ್ಪೆ ಸೀ ವಾಕ್‌ ಬಳಿ ಬೈಕ್‌ ಪಾರ್ಕಿಂಗ್‌ಗೆ ಶುಲ್ಕ ಪಾವತಿಸಿದ್ದಾನೆ. ಪಾರ್ಕಿಂಗ್‌ ಶುಲ್ಕ ಪಡೆದವರು ಕೆಮರಾಕ್ಕೆಂದು ಶುಲ್ಕ ಪಡೆದಿದ್ದರು. ಆದರೆ ಐಲ್ಯಾಂಡ್‌ ತಲುಪಿದ ಬಳಿಕ ಪ್ರತ್ಯೇಕ ಕೆಮರಾ ಶುಲ್ಕ ಕಟ್ಟಬೇಕು ಎಂದು ಸಿಬಂದಿ ಹೇಳಿದಾಗ ನಡೆದ ಮಾತಿನ ಜಟಾಪಟಿಯನ್ನು ಬ್ಲಾಗರ್‌ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಅಪ್‌ ಲೋಡ್‌ ಮಾಡಿದ್ದು, ಸಿಬಂದಿಯ ವರ್ತನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಯಾವ ದುರುದ್ದೇಶವೂ ಇರಲಿಲ್ಲ
ಘಟನೆ ಬಗ್ಗೆ ಪ್ರತಿಕ್ರಿಯಿಸಿದರುವ ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ, ವೀಡಿಯೋ ಪ್ರಕಟಿಸಿದ ಬ್ಲಾಗರ್‌ ಉದ್ದಟತನ ಪ್ರರ್ದಶಿಸಿದ ಹಿನ್ನೆಲೆಯಲ್ಲಿ ಸಿಬಂದಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆಯೇ ಹೊರತು ಯಾವುದೇ ದುರುದ್ದೇಶದಿಂದ ಅಲ್ಲ. ಆತನ ಬಳಿ ಕೆಮರಾ ಶುಲ್ಕ ಪಾವತಿಸಿದ ರಶೀದಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಮರಾ ಒಳಗೆ ಬಿಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮಲ್ಪೆ ಬೀಚ್‌ನಲ್ಲಿ ನಡೆಸಿದ ಪ್ರತಿ ವ್ಯವಹಾರಕ್ಕೆ ರಶೀದಿ ನೀಡಲಾಗುತ್ತದೆ. ಬ್ಲಾಗರ್‌ ಯುಪಿಐ ಪಾವತಿ ಮಾಡಲಾಗಿದೆ ಎಂದು ಹೇಳಿದರೂ, ರಶೀದಿ ಇಲ್ಲದಿರುವುದರಿಂದ ಕೆಮರಾದೊಂದಿಗೆ ಒಳ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಈತನ ಜತೆಗಿದ್ದ ವ್ಯಕ್ತಿ ಸಿಬಂದಿಯ ಅನುಮತಿ ಇಲ್ಲದೆ ಫೋಟೊ ತೆಗೆಯುವುದಕ್ಕೆ ಯತ್ನಿಸಿದ್ದು, ಇದನ್ನು ನಮ್ಮ ಸಿಬಂದಿ ವಿರೋಧಿಸಿದ್ದಾರೆ. ವೀಡಿಯೋ ಮಾಡಿ ಬೀಚ್‌ ವಿರುದ್ಧ ಪ್ರಚಾರ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಈ ಕಾರಣಕ್ಕಾಗಿ ನಮ್ಮ ಸಿಬಂದಿ ಆಕ್ಷೇಪಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರದಿಗೆ ಜಿಲ್ಲಾಧಿಕಾರಿ ಸೂಚನೆ
ಈ ಘಟನೆಯ ವಿವರನ್ನು ಪಡೆದುಕೊಳ್ಳಲಾಗುತ್ತಿದೆ. ನಗರಸಭೆ ಪೌರಾಯುಕ್ತರಿಗೆ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next