ಉಡುಪಿ : ಮಲ್ಪೆಯ ಸೈಂಟ್ ಮೇರಿಸ್ ದ್ವೀಪಕ್ಕೆ ಬಂದ ಪ್ರವಾಸಿಗರು ಮತ್ತು ಬ್ಲಾಗರ್‌ನೊಂದಿಗೆ ಅಲ್ಲಿನ ಸಿಬಂದಿ ಅನುಚಿತವಾಗಿ ವರ್ತಿಸಿರುವ ಘಟನೆ ಗಮನಕ್ಕೆ ಬಂದಿದ್ದು,
ಪ್ರವಾಸೋದ್ಯಮವಾಗಿ ಬೆಳೆಯುತ್ತಿರುವ ಮಲ್ಪೆಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಸ್ಪಷ್ಟ ಸಂದೇಶವನ್ನು ಶಾಸಕ ಕೆ. ರಘುಪತಿ ಭಟ್ ಗುತ್ತಿಗೆದಾರರಿಗೆ ರವಾನಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಶುಲ್ಕ ವಿಚಾರಕ್ಕೆ ಸಂಬಂಧಿಸಿಯೂ ಆರೋಪಗಳಿದ್ದು ಪರಿಶೀಲಿಸುವಂತೆ ನಿರ್ದೇಶಿಸಲಾಗಿದೆ.
ಗುತ್ತಿಗೆದಾರರಿಗೆ ನಿರ್ವಹಣೆ ವಹಿಸುವಾಗ ಟೆಂಡರ್ ಷರತ್ತಿನಲ್ಲಿ ಡಿಜಿಟಲ್ ಕೆಮರಾ ಬಳಕೆಗೆ ನಿರ್ಬಂಧ, ಶುಲ್ಕ ಪಾವತಿಸಿ ಬಳಕೆ ಮಾಡುವ ಬಗ್ಗೆ ಉಲ್ಲೇಖವಾಗಿತ್ತು. ಅದರಂತೆ ಕ್ರಮ ಕೈಗೊಂಡಿದ್ದಾರೆ ಹೊರತು ಇದು ಅಕ್ರಮವಲ್ಲ. ಆದರೆ ಸೈಂಟ್‌ಮೇರಿಸ್ ದ್ವೀಪಕ್ಕೆ ಕೆಮರಾ ನಿರ್ಬಂಧ ಸರಿಯಲ್ಲ. ದ್ವೀಪದಲ್ಲಿ ಕೆಮರಾ ಬಳಕೆಗೆ ಅನುವು ಮಾಡಿಕೊಡುವಂತೆ ಸಾಕಷ್ಟು ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಪ್ರಚಾರ ಸಿಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಕೆಮರಾ ನಿರ್ಬಂಧವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು “ಉದಯವಾಣಿ’ಗೆ ಶಾಸಕ ಭಟ್ ತಿಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿಯಲ್ಲಿ ಜಿಯೋ ಟ್ರೂ 5ಜಿ ಸೇವೆ ಆರಂಭ