ಕಾರ್ಕಳ: ಮಾನವನ ಅಸ್ತಿತ್ವ ಹಾಗೂ ಸಾಧನೆಗಳ ಆಗರ ಕುಟುಂಬವೇ ಆಗಿದೆ. ಕುಟುಂಬದಲ್ಲಿ ಆರಂಭಗೊಂಡ ಮಾನವ ಜೀವ ಮತ್ತು ಜೀವನವು ಕುಟುಂಬದಲ್ಲಿಯೇ ಕೊನೆಗೊಳ್ಳುವುದು. ಆಧುನಿಕ ಕಾಲದಲ್ಲಿ ಕುಟುಂಬದ ಮೌಲ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುವುದ ರಿಂದ ಪ್ರತಿಯೊಬ್ಬರು ಕುಟುಂಬದ ಉಳಿಯುವಿಕೆಗೆ ಪ್ರಯತ್ನಪಡುವುದು ಅನಿವಾರ್ಯ ಎಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಹೇಳಿದರು.
ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕಾ ಪುಣ್ಯ ಕ್ಷೇತ್ರದ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ಪ್ರಮುಖ ಬಲಿ ಪೂಜೆಯನ್ನು ಅರ್ಪಿಸಿ ಪ್ರಬೋಧನೆ ನೀಡಿದರು. ಕುಟುಂಬಗಳ ಏಳಿಗೆಗಾಗಿ ವಿಶೇಷ ಪೂಜೆ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು. ದಿನದ ಪ್ರಮುಖ ಬಲಿಪೂಜೆಯನ್ನು ಅವರು ನೆರವೇರಿಸಿದರು.
ದಿನದ ಇತರ ಬಲಿಪೂಜೆಗಳನ್ನು ವಂ| ಜೊನ್ ಬಾಬೊಜಾ ಪಿಲಾರು, ವಂ| ಜೊಯ್ ಜೊಲ್ಸನ್ ಅಂದ್ರಾದೆ ಶಿವಮೊಗ್ಗ, ವಂ| ಮ್ಯಾಕ್ಸಿಮ್ ಡಿ’ಸೋಜಾ ಮಂಗಳೂರು ನೆರವೇರಿಸಿದರು.
ದಿನದ ಅಂತಿಮ ಬಲಿ ಪೂಜೆಯನ್ನು “ಉಜ್ವಾಡ್’ ಸಂಪಾದಕ ರಾಗಿರುವ ವಂ| ರೊಯ್ಸನ್ ಡಿ’ಸೋಜಾ ಅವರು ನೆರವೇರಿಸುವುದರೊಂದಿಗೆ ನಾಲ್ಕನೇ ದಿನದ ಕಾರ್ಯಕ್ರಮಗಳಿಗೆ ತೆರೆ ಬಿದ್ದಿತು. ಸಾಯಂಕಾಲದ ಅಂತಿಮ ಪೂಜೆಗೆ ಮಾಜಿ ಸಚಿವರಾದ ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಅಭಯ ಚಂದ್ರ ಜೈನ್ ಭೇಟಿಯಿತ್ತು ಪ್ರಾರ್ಥಿಸಿದರು.
ಇಂದು ಉತ್ಸವ ಸಮಾರೋಪ
ಫೆ. 24ರಂದು ವಾರ್ಷಿಕೋತ್ಸವದ ಕೊನೆಯ ದಿನವಾಗಿದೆ. ಬೆಳಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4 ಮತ್ತು 7 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಸಂಜೆ 4 ಗಂಟೆಯ ವಿಶೇಷ ಬಲಿಪೂಜೆಯನ್ನು ಬೆಳ್ತಂಗಡಿಯ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕುಝಿ ಅವರು ನೆರವೇರಿಸಿ ಪ್ರಬೋಧನೆ ನೀಡಲಿದ್ದಾರೆ.