Advertisement

Attur: ಸಂತ ಲಾರೆನ್ಸ್‌ ವಾರ್ಷಿಕೋತ್ಸವ ಸಂಪನ್ನ: “ಶ್ವಾಸ, ವಿಶ್ವಾಸ ಗುಣಹೊಂದಲು ಬೇಕಿದೆ’

11:28 PM Jan 26, 2024 | Team Udayavani |

ಕಾರ್ಕಳ: ವಿಶ್ವಾಸದ ಪ್ರಾರ್ಥನೆ ರೋಗಿಗಳನ್ನು ಸುಖಿಗಳ ನ್ನಾಗಿ ಮಾಡುತ್ತದೆ. ಪ್ರತಿಯೊಬ್ಬ ಅಸ್ವಸ್ಥ ರೋಗಿಯು ಅಚಲ ವಿಶ್ವಾಸದಿಂದ ನಿರಂತರ ಪ್ರಾರ್ಥಿಸಿದಾಗ ಆತ ವಿಮುಕ್ತಿ ಹೊಂದಲು, ಗುಣಮುಖನಾಗಲು ಸಾಧ್ಯ. ಶ್ವಾಸದ ಅತ್ಯಗತ್ಯವು ಜೀವಿಸಲು ಹಾಗೂ ವಿಶ್ವಾಸದ ಅಗತ್ಯವು ಗುಣ ಮುಖರಾಗಲು ಪೂರಕ ಎಂದು ಬೆಳ್ತಂಗಡಿ ಬಿಷಪ್‌ ರೈ| ರೆ| ಡಾ| ಲಾರೆನ್ಸ್‌ ಮುಕ್ಕುಝಿ ಹೇಳಿದರು.

Advertisement

ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕೋತ್ಸವದ ಕೊನೆಯ ದಿನದ ಬಲಿಪೂಜೆ ನೆರವೇರಿಸಿದ ಅವರು ಆಶೀರ್ವಚನ ನೀಡಿದರು. ಅಂತಿಮ ದಿನದ ಹಬ್ಬದ ಆರಾಧನೆಯ ಭಕ್ತಿ ಕಾರ್ಯಗಳು ಮತ್ತು ವಿಧಿ-ಆಚರಣೆಗಳು ವಿಜೃಂಭಣೆಯಿಂದ ನೆರವೇರಿದವು. ದಿನದ ಅಂತಿಮ ಬಲಿಪೂಜೆಯನ್ನು ಸಂಜೆ 5ಕ್ಕೆ ನೆರವೇರಿಸಿ ಮಹೋತ್ಸವದ ಅಂತಿಮ ದಿನದ ಬಲಿಪೂಜೆಗಳನ್ನು, ಧಾರ್ಮಿಕ ಭಕ್ತಿ- ಆಚರಣೆಗಳನ್ನು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಭಕ್ತಿಯುತವಾಗಿ ನೇರವೇರಿಸಿ ಸಂಪನ್ನಗೊಳಿಸಲಾಯಿತು.

ರಾತ್ರಿ 8 ಗಂಟೆಗೆ ಪುಣ್ಯಕ್ಷೇತ್ರದ ಧ್ವಜವನ್ನು ಗೌರವಯುತವಾಗಿ ಪುಣ್ಯಕ್ಷೇತ್ರದ ರೈ| ರೆ| ಆಲ್ಬನ್‌ ಡಿ’ಸೋಜಾ ಅವರ ಅಧೀನತೆಯಲ್ಲಿ ಇಳಿಸಲಾಯಿತು. ಪವಾಡ ಪುರುಷ ಸಂತ ಲಾರೆನ್ಸರ ಪ್ರತಿಮೆಯನ್ನು ಹಾಗೂ ಅವಶೇಷ ಸ್ಮಾರಕವನ್ನು ಅತ್ಯಂತ ಭಕ್ತಿಯಿಂದ ಸ್ತುತಿ ಸ್ತೋತ್ರಗಳ ಮೂಲಕ ಮೆರವಣಿಗೆಯಲ್ಲಿ ತರಲಾಯಿತು ಹಾಗೂ ಅದರ ಮೂಲ ಸ್ಥಾನದಲ್ಲಿ ಮರಳಿ ಪ್ರತಿಷ್ಠಾಪಿಸಲಾಯಿತು.

ಈ ಮೂಲಕ ಈ ವರ್ಷದ ಸಂತ ಲಾರೆನ್ಸರ ವಾರ್ಷಿಕ ಹಬ್ಬಕ್ಕೆ ತೆರೆಬಿದ್ದಿದೆ. ದಿನದ ಇತರ ಬಲಿಪೂಜೆಗಳನ್ನು ವಂ| ಅಶ್ವಿ‌ನ್‌ ಕುಂದಾಪುರ, ಡಾ| ಲಾರೆನ್ಸ್‌ ಮುಕ್ಕುಝಿ, ಬೆಳ್ತಂಗಡಿ ಧರ್ಮಕ್ಷೇತ್ರ, ವಂ| ಸುನಿಲ್‌ ಪಿಂಟೊ, ದಲಂತಬೆಟ್ಟು, ವಂ| ಪಿಯುಸ್‌ ಡಿ’ಸೋಜಾ ಶಿವಮೊಗ್ಗ, ವಂ| ಅರುಣ್‌ ಲೋಬೊ ಮಂಗಳೂರು ಅರ್ಪಿಸಿದರು.

ಹರಿದು ಬಂದ ಜನಸಾಗರ
ಜ. 25 ಮತ್ತು ಜ. 26ರಂದು ರಜಾದಿನವಾದ್ದರಿಂದ ಜನಸಾಗರವೇ ಹರಿದು ಬಂದಿತ್ತು. ಸಂತರ ಪುಣ್ಯ ಪ್ರತಿಮೆಯ ಮೂರ್ತಿ, ಪವಾಡ ಜಲ ಪುಷ್ಕರಣಿ, ಸಂತರ ಭಾವೈಕ್ಯ ಪವಿತ್ರ ಅವಶೇಷವನ್ನು ಕಂಡು ಪಾವನಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next