ಸುರಪುರ: ಪರಿಶಿಷ್ಟ ಪಂಗಡದವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವಲ್ಲಿ ಪರಿಶಿಷ್ಟ ಪಂಗಡ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಶೋಷಿತರ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಗುರುವಾರ ಸಮಾಜ ಕಲ್ಯಾಣ ಎಸ್‌ಟಿ ಇಲಾಖೆ ಕಾರ್ಯಾಲಯ ಎದುರು ಪ್ರತಿಭಟಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಪರಿಶಿಷ್ಟ ವರ್ಗದ ಮೀಸಲು ಕೇತ್ರವಾಗಿದ್ದು, ತಾಲೂಕಿನಲ್ಲಿ ಪರಿಶಿಷ್ಟ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಪ್ರತೇಕ ಇಲಾಖೆ ಸ್ಥಾಪಿಸಿದ್ದು, ಹಲವು ಯೋಜನೆಗಳನ್ನು ರೂಪಿಸಿ ಆ ಮೂಲಕ ವಿಷೇಶ ಅನುದಾನ ಒದಗಿಸುತ್ತಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಗ್ರಾಮ ಮತ್ತು ನಗರ ಪ್ರದೇಶದ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಚರಂಡಿ, ವಾಲ್ಮೀಕಿ ಭವನ, ಸಮುದಾಯ ಭವನ ನಿರ್ಮಿಸುವ ಅವಕಾಶ ಇದೆ. ಈ ಬಗ್ಗೆ ಇದುವರೆಗೆ ಒಂದೇ ಒಂದು ಕ್ರಿಯಾಯೋಜನೆ ಸಿದ್ಧಪಡಿಸಿಲ್ಲ ಎಲ್ಲಿಯೂ ಭವನ ನಿರ್ಮಿಸಿಲ್ಲ ಎಂದು ದೂರಿದರು.
2013ರಲ್ಲಿ ತಾಲೂಕಿನ ಬೊಮ್ಮನಳ್ಳಿ ಕೆ, ಬಾದ್ಯಾಪುರ ದೊಡ್ಡಿ, ಚಿಗರಿಹಾಳ, ವಾಗಣಗೇರಾ ಇನ್ನಿತರ ಕಡೆಗಳಲ್ಲಿ ಇದುವರೆಗೂ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ.
ಒಕ್ಕೂಟದ ಆರು ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮತ್ತೂಮ್ಮೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಎಸ್‌ಟಿ ಇಲಾಖೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಒಕ್ಕೂಟದ ಮುಖಂಡರಾದ ಮಾನಯ್ಯ ದೊರೆ, ಗೋಪಾಲ ಬಾಗಲಕೋಟೆ, ಬಸವರಾಜ ಕವಡಿಮಟ್ಟಿ, ಕೃಷ್ಣಾ ದಿವಾಕರ, ದೇವಪ್ಪ ದೇವರಮನೆ, ಕೇಶಣ್ಣ ದೊರೆ, ತಿರುಪತಿ ದೊರೆ, ಅಂಬಣ್ಣ ದೊರೆ, ಹಣಮಂತ ವಾಗಣಗೇರೆ ಸೇರಿದಂತೆ ಎಸ್‌ಟಿ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.