ಬಾಗಲಕೋಟೆ: ರಾಜ್ಯದಲ್ಲಿ ಎಸ್‌ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಹೆಚ್ಚಿಸುವ ಕುರಿತು ಸಮಗ್ರವಾಗಿ ಚರ್ಚಿಸಲು ಅ.8ರಂದು ಸರ್ವಪಕ್ಷಗಳ ಸಭೆ ಕರೆಯಲಾಗಿದ್ದು, ಆ ಬಳಿಕ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ವಿಷಯದಲ್ಲಿ ತಮಗೆ ಅವಮಾನ ಆಗುತ್ತಿದೆ ಎಂದು ಭಾವಿಸಿಲ್ಲ. ಕೆಲವು ಸಂದರ್ಭ ಅವಮಾನ ಆಗಲೇಬೇಕು. ಅದು ನನಗೊಬ್ಬನಿಗೇ ಅಲ್ಲ. ಮೀಸಲಾತಿ ವಿಷಯ ನಾನು ಆರಂಭಿಸಿದ್ದಲ್ಲ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು. ಅಧಿಕಾರಕ್ಕೆ ಬಂದ ಯಾವುದೇ ಸರಕಾರವೂ ಮೀಸಲಾತಿ ಕಲ್ಪಿಸುವ ವಿಚಾರ ಮಾಡಲೇ ಇಲ್ಲ ಎಂದರು.
ಹಿಂದೆ ನಾನೂ ಹೇಳಿದ್ದೆ. ನಮ್ಮ ಪಕ್ಷವೂ ಸ್ಪಷ್ಟವಾಗಿ ಹೇಳಿತ್ತು. ಅಧಿಕಾರಕ್ಕೆ ಬಂದ ಬಳಿಕ ಮೀಸಲಾತಿ ಹೆಚ್ಚಿಸುತ್ತೇವೆ ಎಂಬ ಭರವಸೆ ನೀಡಲಾಗಿತ್ತು. ಆ ಕಾಲ ಈಗ ಬಂದಿದೆ. ನಮ್ಮ ಸ್ವಾಮೀಜಿಗಳು 250 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಧರಣಿ ವೇಳೆ ನಮ್ಮದೇ ಸಮುದಾಯದ ಹಲವರು ನನ್ನನ್ನು ಬೈದಿದ್ದಾರೆ. ನಾವು ತಾಳ್ಮೆ ಕಳೆದುಕೊಂಡಿಲ್ಲ. ಕಾರಣ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕು. ಈ ವಿಷಯದಲ್ಲಿ ಕೆಲವು ತಾಂತ್ರಿಕ ತೊಂದರೆಗಳಿವೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದು, 8ರಂದು ಸರ್ವಪಕ್ಷಗಳ ಸಭೆ ನಡೆಸುತ್ತೇವೆ ಎಂದಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಮೀಸಲಾತಿ ಕಲ್ಪಿಸುವ ಕುರಿತು ಬಿಜೆಪಿ ಬದ್ಧತೆ ಹೊಂದಿದೆ ಎಂದಿದ್ದಾರೆ. ಹೀಗಾಗಿ ಸಿಎಂ ಈ ವಿಷಯದಲ್ಲಿ ಗಂಭೀರವಾಗಿದ್ದಾರೆ ಎಂದರು.
ಸದನದಲ್ಲಿ ಹೇಳಿದ ಮಾತು ತಪ್ಪುವಂತಿಲ್ಲ. 8ನೇ ತಾರೀಕಿನ ಬಳಿಕ ಮೀಸಲಾತಿ ಕೊಡಿಸುವ ಕೆಲಸ ನಡೆಯ ಲಿದೆ. ಹಿಂದೆ ನಮಗೆ ಬೈದವ ರೆಲ್ಲರೂ ಮೀಸಲಾತಿ ಸಿಕ್ಕಿದ ಬಳಿಕ ಸಮ್ಮಾನಿಸಲಿದ್ದಾರೆ ಎಂದರು.
ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ಕುರಿತು ಮುಖ್ಯಮಂತ್ರಿ ಗಳು ಸದನದಲ್ಲೇ ಹೇಳಿದ್ದಾರೆ. ಎಂಟು ದಿನಗಳಲ್ಲಿ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಲಿದ್ದಾರೆ. ಎಲ್ಲರ ಸಲಹೆ ತೆಗೆದುಕೊಳ್ಳುತ್ತೇವೆ.
-ಗೋವಿಂದ ಕಾರಜೋಳ, ಜಲ ಸಂಪನ್ಮೂಲ ಸಚಿವ