Advertisement

ಎಸ್ಸೆಸ್ಸೆಲ್ಸಿ ಅಗ್ರಸ್ಥಾನಕ್ಕೆ ದ.ಕ. ಲಕ್ಷ್ಯ

11:08 AM Dec 16, 2018 | Harsha Rao |

ಮಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮತ್ತೆ ಮುಂಚೂಣಿಗೆ ತರಲು ಜಿಲ್ಲಾ ಶಿಕ್ಷಣ ಇಲಾಖೆ ವಿಶೇಷ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದೆ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು ಮತ್ತು ಕಳೆದ ಸಾಲಿನಲ್ಲಿ ಕಡಿಮೆ ಫಲಿತಾಂಶ ದಾಖಲಿಸಿರುವ ಶಾಲೆಗಳ ಸಾಧನೆಯನ್ನು ಗರಿಷ್ಠ ಮಟ್ಟಕ್ಕೆ ತರಲು ಹಾಲಿ ಯೋಜನೆಗಳ ಜತೆಗೆ ಹೊಸದಾಗಿ 100 ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

Advertisement

ಶಿಕ್ಷಣ ಇಲಾಖೆಯು ಗರಿಷ್ಠ ಫಲಿತಾಂಶ ದಾಖಲಿಸುವುದಕ್ಕಾಗಿ ಆರಂಭಿಸಿರುವ ವಿಶೇಷ ಯೋಜನೆಗಳಿಗೆ ವೇಗ ನೀಡಿದ್ದು, ಅಂತಿಮ ಸಿದ್ಧತೆಯಾಗಿ ಡಿ. 7ರಿಂದ ನೂರು ದಿನಗಳ ವಿಶೇಷ ಕಾರ್ಯಯೋಜನೆ ಆರಂಭಿಸಿದೆ. ಕಡಿಮೆ ಫಲಿತಾಂಶ ದಾಖಲಿಸಿರುವ ಶಾಲೆಗಳ ಮುಖ್ಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಆಡಳಿತ ಮಂಡಳಿ ಸದಸ್ಯರ ಸಭೆಯನ್ನು ಡಿ. 17ರಂದು ಕರೆಯಲಾಗಿದೆ. ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಲು ವಿಶೇಷ ತರಗತಿಗಳು, ತಜ್ಞರಿಂದ ಪಾಠಗಳು, ಪರೀಕ್ಷಾ ಭಯ ಹೋಗಲಾಡಿಸಲು ಕೌನ್ಸೆಲಿಂಗ್‌ ಸೇರಿದಂತೆ ಕೈಗೊಳ್ಳಬೇಕಾದ ವಿಶೇಷ ಕ್ರಮಗಳನ್ನು ಈ ಸಭೆಯಲ್ಲಿ ಚರ್ಚಿಸಿ ಕಾರ್ಯಯೋಜನೆ ರೂಪಿಸಲಾಗುವುದು. ಇದನ್ನು ಮುಂದಿನ ಮೂರು ತಿಂಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಮಾರ್ಗದರ್ಶನ ಹಾಗೂ ಇದರ ಪ್ರಗತಿಯ ಬಗ್ಗೆ ಇಲಾಖೆ ನಿಗಾ ವಹಿಸಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಡಿ. 7ರಂದು ಬಂಟ್ವಾಳದಲ್ಲಿ 7 ಶೈಕ್ಷಣಿಕ ವಲಯಗಳ ಮುಖ್ಯ ಶಿಕ್ಷಕರ ಸಭೆಯನ್ನು ನಡೆಸಲಾಗಿದ್ದು, ಫಲಿತಾಂಶ ಸುಧಾರಣೆಗಾಗಿ ಶಾಲಾ ಹಂತದ ಕಾರ್ಯಯೋಜನೆಗಳ ಪ್ರಗತಿ ಪರಿಶೀಲನೆ ನಡೆದಿದೆ. ಇನ್ನಷ್ಟು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿ ಮಾಹಿತಿ, ಸೂಚನೆ ನೀಡಲಾಗಿದೆ. 

ರೇಡಿಯೊ ಪಾಠ
ಮಂಗಳೂರು ಆಕಾಶವಾಣಿಯಲ್ಲಿ ಡಿ.3ರಿಂದ ರೇಡಿಯೋ ಪಾಠ ಆರಂಭಿಸಲಾಗಿದೆ. ಇದು ಮಾ.8ರ ವರೆಗೆ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಧ್ಯಾಹ್ನ 11.30ರಿಂದ 12 ಗಂಟೆಯ ವರೆಗೆ ಪ್ರಸಾರವಾಗುತ್ತದೆ. ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನ ವಿಷಯದ ಪಾಠಗಳಲ್ಲಿ ಪರೀಕ್ಷಾ ದೃಷ್ಟಿಯಿಂದ ಪ್ರಮುಖವಾದ ಅಂಶಗಳ‌ನ್ನು 21 ಅನುಭವಿ ವಿಷಯ ಶಿಕ್ಷಕರು ಸರಳವಾಗಿ ಬೋಧಿಸುತ್ತಿದ್ದಾರೆ. ಪ್ರತಿ ಶಾಲೆಯಲ್ಲಿ ಇದನ್ನು ಕೇಳುವ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸುವಂತೆ ಮಾಡಲಾಗಿದೆ.

ವಿಶ್ವಾಸ ಕಿರಣ ಕಾರ್ಯಕ್ರಮದಡಿ ಪ.ಜಾತಿ, ಪ.ಪಂಗಡ ಹಾಗೂ ಕಲಿಕೆಯಲ್ಲಿ ಕಡಿಮೆ ಸಾಧನೆ ತೋರಿರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಸಂಪನ್ಮೂಲ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ಪ್ರತಿ ಶನಿವಾರ ಮತ್ತು ರವಿವಾರ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1,761 ವಿದ್ಯಾರ್ಥಿಗಳು ಈ ವಿಶೇಷ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

Advertisement

31,370 ವಿದ್ಯಾರ್ಥಿಗಳು 
ಈ ಜಿಲ್ಲೆಯಿಂದ 511 ಶಾಲೆಗಳ 31,370 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 27,969 ಶಾಲಾ ವಿದ್ಯಾರ್ಥಿಗಳು, 1,170 ಖಾಸಗಿ, ಶಾಲೆಗಳ ಪುನರಾವರ್ತಿತ 1,815 ಹಾಗೂ 416 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು. ಕಳೆದ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಿಂದ 28,968 ಮಂದಿ ಪರೀಕ್ಷೆ ಬರೆಯಲು ನೊಂದಾಯಿಸಿಕೊಂಡಿದ್ದರು. ಬರೆದ ಒಟ್ಟು 28,686 ವಿದ್ಯಾರ್ಥಿಗಳಲ್ಲಿ 24,556 ಮಂದಿ ಉತ್ತೀರ್ಣರಾಗಿದ್ದರು.

    ದ.ಕ. ಜಿಲ್ಲೆಯಲ್ಲಿ ಗರಿಷ್ಠ ಫಲಿತಾಂಶ ದಾಖಲಿಸಲು ಇಲಾಖೆ ಹಾಲಿ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈಗಾಗಲೇ ಡಿ. 7ರಂದು ಮುಖ್ಯ ಶಿಕ್ಷಕರ ಸಭೆಯನ್ನು ನಡೆಸಿ ಶಾಲಾ ಹಂತದಲ್ಲಿ ಕೈಗೊಂಡಿರುವ ಕಾರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ.
ಶಿವರಾಮಯ್ಯ
– ಡಿಡಿಪಿಐ, ದ.ಕ. ಜಿಲ್ಲೆ

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next