Advertisement

ಜನರಿಗೆ ವ್ಯವಸ್ಥೆಯ ಬಗ್ಗೆ ವಿಶ್ವಾಸ‌ ಮೂಡಿಸುವ ರೀತಿಯಲ್ಲಿ SSLC ಪರೀಕ್ಷೆ: ಸುರೇಶ್‌ ಕುಮಾರ್

04:47 PM Jun 10, 2020 | keerthan |

ಬೆಂಗಳೂರು: ರಾಜ್ಯದ ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಗಳನ್ನು ಇಡೀ ಸಮಾಜ ಎದುರು ನೋಡುತ್ತಿದ್ದು, ಯಾವುದೇ ಅಚಾತುರ್ಯಗಳಿಗೆ ಅವಕಾಶ ನೀಡದೇ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕೆಂದು ಸಚಿವ ಸುರೇಶ್‌ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಎಸ್ಎಸ್ಎಲ್ ಸಿ ಪರೀಕ್ಷಾ ಪೂರ್ವ ಸಿದ್ಧತೆಯ‌ ಕುರಿತಂತೆ ರಾಜ್ಯಾದ್ಯಂತ 31 ಜಿಲ್ಲಾ ಕೇಂದ್ರಗಳಿಗೆ ಕಳೆದ ಹದಿನೈದು ದಿನಗಳಲ್ಲಿ ಸುಮಾರು ಐದು ಸಾವಿರ ಕಿಲೋ ಮೀಟರ್ ಗಳಷ್ಟು ಸಂಚಾರ ಕೈಗೊಂಡು, ಸಭೆ ನಡೆಸಿ ನಿರ್ದೇಶನ ನೀಡಿರುವ ಸಚಿವ ಸುರೇಶ್ ಕುಮಾರ್, ಇಂದು ತಮ್ಮ ಅಭಿಯಾನದ ಕಡೆಯ ಭಾಗವಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿದರು.

ಉಚ್ಛ ನ್ಯಾಯಾಲಯದ ನಿರ್ದೇಶನದ ಅನುಸಾರ ನಡೆಯುತ್ತಿರುವ ಪರೀಕ್ಷೆಗಳು ಸಮಾಜಕ್ಕೆ ಭರವಸೆಯನ್ನು ಮೂಡಿಸುವ ರೀತಿಯಲ್ಲಿ‌ ಅಚ್ಚುಕಟ್ಟಾಗಿ‌ ನಿರ್ವಹಣೆಯಾಗಬೇಕು. ಪರೀಕ್ಷೆಗಳು ನಡೆಯುತ್ತಿರುವ ಇದೊಂದು ವಿಶಿಷ್ಟ ಸಾಮಾಜಿಕ ಸಂದರ್ಭವನ್ನು ಪ್ರತಿಷ್ಠೆಯಾಗಿ ಪರಿಗಣಿಸದೇ ನಮ್ಮ ಸಾಮಾಜಿಕ ಬದ್ಧತೆಗೆ ಸವಾಲಾಗಿ ಪರಿಗಣಿಸಿ ಎಲ್ಲ‌ ಅಧಿಕಾರಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕೆಂದು ಸಚಿವರು ಸೂಚಿಸಿದರು.

ವಿದ್ಯಾರ್ಥಿ ಪೋಷಕರ ನಿರೀಕ್ಷೆಗೆ ಅನುಗುಣವಾಗಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯಬೇಕೆಂದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಪರೀಕ್ಷೆಗೆ ಮುಂಚೆಯೇ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳ ಸಹಕಾರದಿಂದ ಸ್ಯಾನಿಟೈಜ್ ಮಾಡಬೇಕಲ್ಲದೇ, ಪ್ರತಿ‌ ದಿನದ ಪರೀಕ್ಷೆಯ ಬಳಿಕವೂ ಸ್ಯಾನಿಟೈಜ್ ಕ್ರಮಗಳನ್ನು ಅನುಸರಿಸಬೇಕೆಂದು ಅವರು ಸೂಚಿಸಿದರು.

Advertisement

ಜೂನ್ 12 ರಿಂದ 17 ರವರೆಗೆ ದೂರದರ್ಶನ ದ ಚಂದನದಲ್ಲಿ ವಿಶೇಷ ಪುನರ್ಮನನ

ಪ್ರಶ್ನೆ ಪತ್ರಿಕೆಯಾಧಾರಿತವಾದ ವಿಶೇಷ ಪುನರ್ಮನನ ತರಗತಿಗಳನ್ನು ಇದೇ ತಿಂಗಳ‌ 12 ರಿಂದ 17 ರವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ‌ ಪ್ರಸಾರ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್, ಎಲ್ಲ ವಿದ್ಯಾರ್ಥಿಗಳು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕೆಂದು ಹೇಳಿದರು.

ಆರೋಗ್ಯ ಇಲಾಖೆಯ ಸಹಕಾರವನ್ನು ಸರಿಯಾಗಿ ಬಳಸಿಕೊಳ್ಳಿ

ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆಗೆ ತನ್ನ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದು, ಮಕ್ಕಳು ಹಾಗೂ ಪೋಷಕರಲ್ಲಿ ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ನಿಟ್ಟಿನಲ್ಲಿ ಮಾಹಿತಿ ಕರಪತ್ರಗಳು, ವಿಡಿಯೋ ಸಂದೇಶಗಳನ್ನು ರಾಜ್ಯಾದ್ಯಂತ ಪ್ರತಿ ಪೋಷಕ, ವಿದ್ಯಾರ್ಥಿಗೆ ತಲುಪಿಸುವ ಕ್ರಮಕ್ಕೆ ಮುಂದಾಗಲಾಗುವುದೆಂದ ಸಚಿವರು, ಶಿಕ್ಷಣ ಇಲಾಖೆಯ ಸಿಬ್ಬಂದಿಯು ಇಲಾಖೆಯ ಈ ಸದಾಶಯವನ್ನು ವಿದ್ಯಾರ್ಥಿ-ಪೋಷಕರಿಗೆ ತಲುಪಿಸುವ ವಾಹಕರಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.

ಶಿಕ್ಷಣ ಇಲಾಖೆ ಆಯುಕ್ತ ಡಾ.ಜಗದೀಶ್, ಬೆಂಗಳೂರು ‌ನಗರ ಹಾಗೂ ಗ್ರಾಮಾಂತರ ಜಿಲ್ಲಾ‌ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಈ ಜಿಲ್ಲೆಗಳ‌ ಶಿಕ್ಷಣ ಇಲಾಖೆಯ ಅಧಿಕಾರಿಗಳು‌ ಸಭೆಯಲ್ಲಿ‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next