ಶ್ರೀನಿವಾಸಪುರ: ತಾಲೂಕಿನ ಭೈರವೇಶ್ವರ ವಿದ್ಯಾನಿಕೇತನದಲ್ಲಿ ಸೆ.21 ರಿಂದ 28ರ ವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ತಿಳಿಸಿದ್ದಾರೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಉದಯವಾಣಿಯೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಎಲ್ಲಾ ಶಾಲೆಗಳಿಂದ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಗೆ 859 ಮಕ್ಕಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದು, 149ಮಕ್ಕಳು ಅನುತ್ತೀರ್ಣರಾಗಿದ್ದರು. ಕೆಲವರು ಮರುಮೌಲ್ಯ ಮಾಪನದ ನಂತರ 26 ಮಕ್ಕಳು ಉತ್ತೀರ್ಣರಾಗಿದ್ದಾರೆ. ಉಳಿದ 123 ವಿದ್ಯಾರ್ಥಿಗಳು ಸೆ.21 ರಿಂದ ನಡೆಯುವಪೂರಕಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಅನುತ್ತೀರ್ಣ ಮಕ್ಕಳು ಉತ್ತೀರ್ಣರಾಗಲು ನುರಿತ ಶಿಕ್ಷಕರಿಂದಮಾರ್ಗದರ್ಶನ ನೀಡಲಾಗಿದೆ. 15 ದಿನಗಳ ಕಾಲ ಶ್ರೀನಿವಾಸಪುರ ಪಟ್ಟಣದ ಬಾಲಕಿಯರ ಕಾಲೇಜಿನಲ್ಲಿ ಹಾಗೂ ಸೋಮಯಾಜಲಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಾರ್ಗದರ್ಶನ ಹಾಗೂ ಪಠ್ಯಕ್ರಮಗಳ ಆಧಾರಿತ ತರಬೇತಿ ನೀಡಲಾಗಿದೆ ಎಂದ ಅವರು, ಪೂರಕ ಪರೀಕ್ಷೆಯಲ್ಲಿ ಎಲ್ಲಾ ಮಕ್ಕಳು ಪಾಸಾಗುವರೆಂಬ ಆಶಾಭಾವನೆ ವ್ಯಕ್ತಪಡಿಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ 4 ಅಡಿ ಅಂತರದಲ್ಲಿ ಡೆಸ್ಕ್ ಹಾಕಲಾಗಿದೆ. ಪರೀಕ್ಷೆ ಬರೆಯಲು ಬರುವವರಿಗೆ ಸ್ಯಾನಿಟೈಸರ್ ಬಳಕೆ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲು ಈಗಾಗಲೆ ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಭದ್ರತಾವ್ಯವಸ್ಥೆಗೆಪೊಲೀಸ್‌ಇಲಾಖೆಗೂ ಸಹ ಪತ್ರ ಬರೆಯಲಾಗಿದೆ ಎಂದರು.
ಪರೀಕ್ಷಾ ಕೊಠಡಿಯಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲು ಪುರಸಭೆ ಒಪ್ಪಿಕೊಂಡಿದೆ. ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.