ಬೆಂಗಳೂರು: ರಾಜ್ಯದ ವಿವಿಧೆಡೆ ಶುಕ್ರವಾರ ನಾಲ್ವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರದಲ್ಲಿ ವಿದ್ಯಾರ್ಥಿನಿ ಮಾನಸ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಳಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಸೋಮಹಳ್ಳಿ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು. ಶಿವಮೊಗ್ಗ ನಗರದ ಸರ್ವೋದಯ ಶಾಲೆ ವಿದ್ಯಾರ್ಥಿನಿ ಪ್ರೀತಿ ಎಸ್ಸೆಸ್ಸೆಲ್ಸಿಯಲ್ಲಿ ಫೇಲ್ ಆಗಿದ್ದಕ್ಕೆ ಬೇಸರಗೊಂಡು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗೋಪಾಲಪುರದ ಮಮತಾ (16) ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ಬೇಸತ್ತ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾಳೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಆಡಗೊಂಡನಹಳ್ಳಿಯಲ್ಲಿ ಅಂಜಲಿ (16) ಎಸ್ಸೆಸ್ಸೆಲ್ಸಿಯಲ್ಲಿ ಅನುತೀ¤ರ್ಣಗೊಂಡಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೂವರು ಪಿಯು ವಿದ್ಯಾರ್ಥಿನಿಯರು ಸಾವು: ಈ ನಡುವೆ ವಿವಿಧೆಡೆ ಮೂವರು ಪಿಯುಸಿ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಕೊಂಡಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದರೂ ಹೆಚ್ಚು ಅಂಕ ಬರಲಿಲ್ಲವೆಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದೆ. ಚನ್ನಪಟ್ಟಣದ ಚೆನ್ನಾಂಬಿಕಾ ಕಾಲೇಜು ವಿದ್ಯಾರ್ಥಿನಿ ನಿಖೀತಾ ಶೇ.72 ಅಂಕ ಪಡೆದಿದ್ದರು. ಕಡಿಮೆ ಅಂಕ ಬಂದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡಯ್ಯನಪಾಳ್ಯದಲ್ಲಿ ಪಿಯುಸಿಯಲ್ಲಿ ಫೇಲ್ ಆಗಿದ್ದಕ್ಕೆ ಪುಷ್ಪಾ (18) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದರೂ, ಅನುತ್ತೀರ್ಣಳಾಗಿರುವ ತಪ್ಪು ಮಾಹಿತಿ ತಿಳಿದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲದಲ್ಲಿ ನಡೆದಿದೆ. ತಾಲೂಕಿನ ಬೇಗೂರು ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ಹೊರೆಯಾಲದ ಸುಚಿತ್ರಾ (18) ನೇಣು ಬಿಗಿದು ಮೃತಪಟ್ಟಿದ್ದಾಳೆ.