ಹಾವೇರಿ: ಕೋವಿಡ್ 19 ನಿಯಂತ್ರಣಕ್ಕಾಗಿ ಲಾಕ್‌ಡೌನ್ ವಿಸ್ತರಣೆಯಾಗುತ್ತಲೇ ಇದೆ. ಇದರೊಂದಿಗೆ ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಮಹತ್ವದ ಘಟ್ಟ ಎನಿಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯೂ ಮುಂದಕ್ಕೆ ಹೋಗುತ್ತಿದ್ದು ವಿದ್ಯಾರ್ಥಿಗಳು ಈವರೆಗೆ ಓದಿದ್ದನ್ನು ಮರೆಯುವ ಭೀತಿ ಎದುರಿಸುತ್ತಿದ್ದಾರೆ.
ಪೂರ್ವ ಸಿದ್ಧತೆಯಂತೆ ಎಲ್ಲ ಪ್ರಕ್ರಿಯೆ ನಡೆದಿದ್ದರೆ ಮಾ.27 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿ ಏ.9ಕ್ಕೆ ಮುಗಿಯುತ್ತಿತ್ತು. ಈಗ ಮೌಲ್ಯಮಾಪನ ನಡೆದು ಎಲ್ಲ ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿರುತ್ತಿದ್ದರು. ಲಾಕ್ ಡೌನ್‌ನಿಂದಾಗಿ ಈವರೆಗೂ ಪರೀಕ್ಷೆಗಳು ನಡೆಯದ್ದರಿಂದ ಕಲಿತಿದ್ದ ಪಾಠವನ್ನು ಮಕ್ಕಳು ಎಲ್ಲಿ ಮರೆತು ಬಿಡುತ್ತಾರೋ ಎಂಬ ಆತಂಕ ಪೋಷಕರು ಹಾಗೂ ಶಿಕ್ಷಕರಲ್ಲಿ ಶುರುವಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಉನ್ನತ ಶ್ರೇಣಿಯಲ್ಲಿ ಬರಬೇಕು ಎಂದು ಶಿಕ್ಷಕರು ಮಕ್ಕಳಿಗೆ ವಿಶೇಷ ತರಗತಿ, ಮಕ್ಕಳ ಮನೆಗೆ ಶಿಕ್ಷಕರ ಭೇಟಿ, ಪೋಷಕರಿಗೆ ಸಲಹೆ, ಮಕ್ಕಳಿಗೆ ದೂರವಾಣಿ ಕರೆ ಮಾಡುವುದು, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವುದು, ಅಧ್ಯಯನದಲ್ಲಿ ಹಿಂದುಳಿದ ಮಕ್ಕಳಿಗಾಗಿ ಉತ್ತೀರ್ಣಕ್ಕೆ ಬೇಕಾದಷ್ಟು ಸರಳ ಪ್ಯಾಕೇಜ್ ಮಾಡುವುದು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿತ್ತು. ಇದೀಗ ಇವೆಲ್ಲವೂ ಎಷ್ಟು ಫಲ ಕೊಡುತ್ತವೆ ಎಂಬ ಸಂಶಯ ಎದುರಾಗಿದೆ.
ಕಳೆದೆರಡು ತಿಂಗಳಿಂದ ಶಾಲೆಗಳು ಬಂದ್ ಆಗಿರುವುದರಿಂದ ಅನೇಕ ಮಕ್ಕಳ ನಿರಂತರ ಅಧ್ಯಯನಕ್ಕೂ ಬ್ರೇಕ್ ಬಿದ್ದಿರುವ ಭಯ ಶುರುವಾಗಿದೆ. ಎಷ್ಟೊತ್ತಿಗೂ ಓದು ಓದು: ಪರೀಕ್ಷೆ ಆಗದೆ ಇರುವುದರಿಂದ ಪಾಲಕರು ಮಕ್ಕಳಿಗೆ ಲಾಕ್ ಡೌನ್ ಅವಧಿಯಲ್ಲಿ ಓದು ಓದು ಎಂದು ಒತ್ತಡ ಹಾಕುತ್ತಲೇ ಇದ್ದಾರೆ. ಮಕ್ಕಳಿಗೂ ಓದಿದ್ದನ್ನೇ ಓದಿ ಓದಿ ಬೇಸರ ಮೂಡಿದೆ. ಯಾವಾಗ ಪರೀಕ್ಷೆ ನಡೆಸುತ್ತಾರೋ ತಾವು ಯಾವಾವ ಪರೀಕ್ಷೆ ಬರೆದು ಮುಕ್ತರಾಗುತ್ತೇವೋ ಎಂದು ಕಾತರದಿಂದ ಕಾಯುತ್ತಿದ್ದಾರೆ.
ದೂರಶಿಕ್ಷಣದಿಂದ ದೂರ: ವಿದ್ಯಾರ್ಥಿಗಳ ಓದಿಗೆ ಹಾಗೂ ಪರೀಕ್ಷೆಗೆ ಪೂರಕವಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್ ಕ್ವಿಜ್ ಹಮ್ಮಿಕೊಂಡಿದೆ. ಆದರೆ, ಇದು ಎಲ್ಲ ವಿದ್ಯಾರ್ಥಿಗಳನ್ನು ತಲುಪುತ್ತಿಲ್ಲ. ಜಿಲ್ಲೆಯಲ್ಲಿ 21ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು ಇದರಲ್ಲಿ ಮುರ್‍ನಾಲ್ಕು ಸಾವಿರದಷ್ಟು ನಗರದ ವಿದ್ಯಾರ್ಥಿಗಳು ಆನ್ ಲೈನ್ ಕ್ವಿಜ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ದೂರದರ್ಶನ, ರೇಡಿಯೋಗಳಲ್ಲಿ ಪುನರ್ ಮನನ ಪಾಠಗಳ ಸರಣಿ ಪ್ರಸಾರವಾಗುತ್ತಿದೆ. ಆದರೆ, ಇದರ ಪ್ರಯೋಜನ ಪಡೆದುಕೊಳ್ಳುವ ಮಕ್ಕಳ ಸಂಖ್ಯೆ ತೀರಾ ವಿರಳವಾಗಿದೆ. ಲಾಕ್‌ಡೌನ್ ಮುಗಿದ ಬಳಿಕ ಯಾವಾಗ ಬೇಕಾದರೂ ಪರೀಕ್ಷೆ ಬರಬಹುದು. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿರಬೇಕು ಎಂದು ಸರ್ಕಾರ ಹೇಳುತ್ತಲೇ ಇದೆ. ಒಟ್ಟಾರೆ ಕೋವಿಡ್ 19 ಲಾಕ್‌ಡೌನ್ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದಕ್ಕೆ ಪರೀಕ್ಷೆ ನಡೆದು, ಫಲಿತಾಂಶದ ದಿನದವರೆಗೂ ಕಾಯಲೇ ಬೇಕಿದೆ.
ಮಕ್ಕಳು ಮನೆಯಲ್ಲಿಯೇ ಇದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜಾಗಿದ್ದಾರೆ. ಕಲಿಕೆಯಿಂದ ವಿಮುಖರಾಗಬಾರದು ಎಂದು ವಿಷಯವಾರು ಆನ್‌ಲೈನ್ ಕ್ವಿಜ್ ನಡೆಸಲಾಗುತ್ತಿದೆ. ಮಕ್ಕಳಿಗೆ ಕರೆ ಮಾಡಿ ಓದು ನಿರಂತರವಾಗಿಟ್ಟುಕೊಳ್ಳಲು ಸೂಚಿಸಲಾಗುತ್ತಿದೆ. ಎಲ್ಲ ಮಕ್ಕಳೂ ಪರೀಕ್ಷೆ ದಿನಾಂಕ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.
-ಅಂದಾನಪ್ಪ ವಡಗೇರಿ, ಡಿಡಿಪಿಐ.
ಮಾರ್ಚ್‌ನಲ್ಲೇ ಪರೀಕ್ಷೆ ನಡೆಯುತ್ತದೆಂದು ಸಜ್ಜಾಗಿದ್ದೆ. ಎಲ್ಲವನ್ನೂ ಓದಿ ತಯಾರಿ ಮಾಡಿಕೊಂಡಿದ್ದೆ. ಪರೀಕ್ಷೆ ಮುಂದಕ್ಕೆ ಹೋಗುತ್ತಲೇ ಇದ್ದು, ನಿತ್ಯ ಓದಿದ್ದನ್ನೇ ಮತ್ತೆ ಮತ್ತೆ ಓದಬೇಕಾಗಿದ್ದು ಓದು ಬೇಸರ ಮೂಡಿಸಿದೆ. ಬೇಗ ಪರೀಕ್ಷೆ ನಡೆದರೆ ಸಾಕಪ್ಪ ಎನಿಸಿದೆ.
-ಮಧುಶ್ರೀ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ
-ಎಚ್.ಕೆ. ನಟರಾಜ