ಬೆಂಗಳೂರು: ಶಾಲಾ ಶುಲ್ಕ ವಿಚಾರಕ್ಕೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಎಚ್‌ಎಸ್‌ಆರ್ ಲೇಔಟ್‌ನ ಸೋಮಸುಂದರಪಾಳ್ಯದಲ್ಲಿ ಮಂಗಳವಾರ ನಡೆದಿದೆ.
ಈ ಸಂಬಂಧ ವಿದ್ಯಾರ್ಥಿಯ ಪೋಷಕರು ಹಾಗೂ ಸ್ಥಳೀಯ ಸಂಘಟನೆ ಮುಖಂಡರು ಶಾಲೆ ಎದುರು ಪ್ರತಿಭಟನೆ ನಡೆಸಿದರು. ಜಕ್ಕಸಂದ್ರದ ನಿವಾಸಿ ಜಯಂತ್ (15) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ. ಖಾಸಗಿ ಶಾಲೆಯಲ್ಲಿ ಜಯಂತ್ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾನೆ. ಸರ್ಕಾರದ ಸೂಚನೆ ಬೆನ್ನಲ್ಲೇ ಶಾಲೆಆರಂಭವಾಗಿದ್ದು ಶಾಲಾ ಶುಲ್ಕ ಪಾವತಿಸುವಂತೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗೆ ಒತ್ತಡ ಹಾಕಿದ್ದರು. 96 ಸಾವಿರ ಶಾಲಾ ಶುಲ್ಕದ ಪೈಕಿ 37 ಸಾವಿರ ರೂ. ಅನ್ನು ಜಯಂತ್ ಪೋಷಕರು ಕಟ್ಟಿದ್ದಾರೆ. ಆದರೂ ನಿತ್ಯ ವಿದ್ಯಾರ್ಥಿಗೆ ಶಾಲೆಯಲ್ಲಿ ಶಿಕ್ಷಕರು ಹಾಗೂ ಪ್ರಾಂಶುಪಾಲರು ಬಾಕಿ ಶುಲ್ಕ ಕಟ್ಟುವಂತೆ ಸ್ನೇಹಿತರ ಎದುರು ನಿಂದಿಸುತ್ತಿದ್ದರು.
ಈ ಸಂಬಂಧ ಮಂಗಳವಾರ ಬೆಳಗ್ಗೆ ಶಾಲೆಗೆ ಹೋಗಿದ್ದ ಜಯಂತ್‌ಗೆ ಮತ್ತೆ ಶಿಕ್ಷಕರು ಶುಲ್ಕ ವಿಚಾರವಾಗಿ ಪ್ರಶ್ನಿಸಿದ್ದಾರೆ. ಅದರಿಂದ ಬೇಸರಗೊಂಡ ಜಯಂತ್, ತಂದೆಗೆ ಕರೆ ಮಾಡಿ ಘಟನೆಯನ್ನು ವಿವರಿಸಿದ್ದಾನೆ. ಶಾಲೆ ಬಳಿ ಬಂದ ಆತನ ತಂದೆ, ಶುಲ್ಕ ಕಟ್ಟಿದ ಬಳಿಕ ಶಾಲೆಗೆ ಕಳುಹಿಸುತ್ತೇನೆ. ಸದ್ಯ ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ಸೈಕಲ್‌ನಲ್ಲಿ ಮನೆಗೆ ಹೋದ ಜಯಂತ್ ನೇರವಾಗಿ ತನ್ನ ಕೊಣೆಯ ಬಾಗಿಲು ಹಾಕಿಕೊಂಡಿದ್ದಾನೆ. ಆನಂತರ ವೇಲ್ ಮೂಲಕ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪುತ್ರನ ವರ್ತನೆಯಿಂದ ಗಾಬರಿಗೊಂಡ ಆತನ ತಾಯಿ ಬಾಗಿಲು ಬಡಿದರೂ ತೆರೆದಿಲ್ಲ. ಅಷ್ಟರಲ್ಲಿ ಮನೆಗೆ ಬಂದ ತಂದೆ ಕೂಡಲೇ ಬಾಗಿಲು ಒಡೆದು ಪುತ್ರನನ್ನು ರಕ್ಷಿಸಿದ್ದಾರೆ. ಬಳಿಕ ಪುತ್ರ, “ತಾನೂ ಖಾಸಗಿ ಶಾಲೆಯಲ್ಲಿ ಓದುವುದಿಲ್ಲ. ಶಾಲಾ ಶುಲ್ಕ ವಿಚಾರಕ್ಕೆ ಸ್ನೇಹಿತರ ಎದುರು ಶಿಕ್ಷಕರು ನಿಂದಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಓದುತ್ತೇನೆ’ ಎಂದು ಕಣ್ಣೀರು ಹಾಕಿದ್ದಾನೆ. ಅದರಿಂದ ಅಸಮಾಧಾನಗೊಂಡ ಪೋಷಕರು, ಕೂಡಲೇ ಶಾಲೆಗೆ ಹೋಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ಸ್ಥಳೀಯ ಸಂಘಟನೆಯ ಕಾರ್ಯಕರ್ತರ ಜತೆ ಶಾಲೆ ಎದುರು ಪ್ರತಿಭಟನೆ ನಡೆಸಿದರು
ಸ್ಥಳಕ್ಕೆ ಬಂದ ಬಿಇಒ :
ಘಟನೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ವಿದ್ಯಾರ್ಥಿಯ ಪೋಷಕರು ತರಾಟೆಗೆ ತೆಗೆದುಕೊಂಡರು. ಸರ್ಕಾರದ ನಿಮಯ ಉಲ್ಲಂ ಸಿದ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಡ ಹಾಕಿದರು. ಅಲ್ಲದೆ,ಶಾಲೆಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಡ ಹಾಕಿದರು. ಆನಂತರ ಬಿಇಒ, ಶಾಲಾ ಆಡಳಿತ ಮಂಡಳಿಯ ಸದಸ್ಯರನ್ನುತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೂಮ್ಮೆ ಇಂತಹ ಘಟನೆ ಮರುಕಳಿಸಿದರೆ ಶಾಲೆ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.