ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ.
ಈ ಬಾರಿಯೂ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 10 % ಕೃಪಾಂಕ (ಗ್ರೇಸ್ ಮಾರ್ಕ್ಸ್)ಗಳನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ವಿದ್ಯಾರ್ಥಿಗಳಿಗೆ 5 ಅಂಕದ ಬದಲಾಗಿ 10 % ಕೃಪಾಂಕವನ್ನು ನೀಡಿತ್ತು. ಈ ಬಾರಿ ಕೂಡ ಕೊರೊನಾ ಎರಡನೇ ಅಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ-ಪ್ರವಚನಗಳು ನಡೆಯದಿರುವುದರಿಂದ 10% ಅಂಕಗಳನ್ನು ನೀಡಲಾಗುತ್ತಿದೆ ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ಕಳೆದ ವರ್ಷ 50 ಅಂಕಗಳಿಗೆ ಪರೀಕ್ಷೆ ನಡೆಸಿ ಅದನ್ನು 100 ಅಂಕಗಳಿಗೆ ಪರಿವರ್ತಿಸಿ ಅಂಕಗಳನ್ನು ನೀಡಲಾಗಿತ್ತು. ಈ ವರ್ಷ ಪರೀಕ್ಷೆ ನಡೆದಿದ್ದು, ಸರಿಯಾದ ಬೋಧನೆ ಸಿಗದ ಮಕ್ಕಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಈ ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ.
2019ರಲ್ಲಿ ಆರು ವಿಷಯಗಳ ಪೈಕಿ ಎರಡು ವಿಷಯಗಳಿಗೆ 5% ಕೃಪಾಂಕಗಳನ್ನು ನೀಡುವ ನಿಯಮವಿತ್ತು. ಇದನ್ನು 2020 ಮತ್ತು 2021ರಲ್ಲಿ ಮೂರು ವಿಷಯಗಳಿಗೆ 10 ಅಂಕಗಳನ್ನು ನೀಡುವ ನಿಯಮವನ್ನು ತಾತ್ಕಾಲಿಕವಾಗಿ ರೂಪಿಸಿತ್ತು. ಈ ವರ್ಷ ಕೂಡ ಇದೇ ನಿಯಮವನ್ನು ಮುಂದುವರಿಸಲಿದೆ.
ಮುಂದಿನ ವರ್ಷದಿಂದ (2023) ಹಳೇ ನಿಯಮವೇ ಅಳವಡಿಕೆಯಾಗಲಿದೆ ಎಂದು ತಿಳಿದು ಬಂದಿದೆ.
ಕೃಪಾಂಕಗಳನ್ನು ನೀಡುವುದರಿಂದ 25 ಅಂಕಗಳನ್ನು ಪಡೆದು “ಸಿ’ ಗ್ರೇಡ್‌ನಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಈ ಹಿಂದೆಯೂ ಶೇ.10ರಿಂದ 15ರಷ್ಟು ವಿದ್ಯಾರ್ಥಿಗಳು ಕೃಪಾಂಕಗಳನ್ನು ಪಡೆದಿರುವ ಉದಾಹರಣೆಗಳಿವೆ ಎಂದು ತಿಳಿದು ಬಂದಿದೆ. 2021ರಲ್ಲಿ ಶೇ.9ರಷ್ಟು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿತ್ತು.