ಹುಣಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹುಣಸೂರು ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ದಾಖಲಿಸುವ ಜೊತೆಗೆ ಗುಣಾತ್ಮಕ ಫಲಿತಾಂಶ ಪಡೆದುಕೊಳ್ಳುವಲ್ಲಿ ಫ್ರೌಢಶಾಲಾ ಮುಖ್ಯ ಶಿಕ್ಷಕರು ವಿಶೇಷ ಶ್ರಮ ಹಾಕಬೇಕು ಎಂದು ಶಾಸಕ ಎಚ್.ಪಿ.ಮಂಜುನಾಥ್ ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
25 ದಿನ ಬಾಕಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಹತ್ವದ ಘಟ್ಟವಾಗಿದ್ದು, ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ. ಮಕ್ಕಳ ಶಿಕ್ಷಣದ ಪ್ರಗತಿಗೆ ವಿಶೇಷ ಶ್ರಮ ಹಾಕಿದ್ದೀರಿ, ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿದ್ದೀರಿ, ವಿಶೇಷ ತರಗತಿ ನಡೆಸುತ್ತಿದ್ದೀರಿ, ಇದು ಶ್ಲಾಘನೀಯ. ಆದರೆ, ಕಲಿಕೆಯಲ್ಲಿ ಅತಿ ಹಿಂದುಳಿದಿರುವ ವಿದ್ಯಾರ್ಥಿಗಳು ಕನಿಷ್ಠ ಪಾಸ್ ಆಗುವಂತಾಗಲು ಪರೀಕ್ಷೆಗೆ ಇನ್ನುಳಿದ 25 ದಿನಗಳಲ್ಲಿ ವಿಶೇಷ ಶ್ರಮಹಾಕಿ ಅವರೂ ಕೂಡ ಪಾಸಾಗುವಂತೆ ನೋಡಿಕೊಳ್ಳಬೇಕು. ಅಂಕಗಳ ಮೇಲೆ ಒತ್ತಡ ಹಾಕಬೇಡಿ, ಮಕ್ಕಳು ಸರ್ವಾಂಗೀಣ ಪ್ರಗತಿಗೆ ಗಮನಹರಿಸಬೇಕು. ರಾಜ್ಯದ 204 ಬ್ಲಾಕ್‌ಗಳಲ್ಲಿ ಕನಿಷ್ಠ ಮೂರನೇ ಸ್ಥಾನಗಳಿಸುವಲ್ಲಿ ನಿಮ್ಮ ಶ್ರಮವಿರಲಿ ಎಂದು ತಿಳಿಸಿದರು.
ಗುರಿ ತಲುಪಿ: ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ|ಪುಷ್ಪಾ ಅಮರ್‌ನಾಥ್ ಮಾತನಾಡಿ, ತಾವು ಜಿಪಂ ಅಧ್ಯಕ್ಷರಾಗಿದ್ದ ವೇಳೆ “ಮೈಸೂರು-ಗುರಿ ನೂರು’ ಎಂಬ ಕಾರ್ಯಕ್ರಮದಡಿ ಶ್ರಮ ಹಾಕಿದಾಗ 27ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಬಂದಿರುವುದು ದೊಡ್ಡ ಸಾಧನೆಯಾಗಿದ್ದು, ಮುಂದೆಯೂ ಅದೇ ಮಾದರಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
4,062 ವಿದ್ಯಾರ್ಥಿಗಳು: ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಶಾಸಕ ಮಂಜುನಾಥರ ಶಿಕ್ಷಣದ ಮೇಲಿನ ವಿಶೇಷ ಆಸಕ್ತಿ ಪ್ರಶಂಸನೀಯ. ತಾಲೂಕಿನಲ್ಲಿ 4,062 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಫಲಿತಾಂಶ ಹೆಚ್ಚಳಕ್ಕೆ ಆರಂಭದಿಂದಲೂ ವಿವಿಧ ಕಾರ್ಯಕ್ರಮಗಳ ಮೂಲಕ ವಿಶೇಷ ಶ್ರಮ ಹಾಕಲಾಗಿದೆ. ಕಲಿಕೆಯಲ್ಲಿ ಹಿಂದುಳಿದಿರುವ 355 ಮಕ್ಕಳು ಕನಿಷ್ಠ ಅಂಕ ಪಡೆದು ಪಾಸಾಗಲು ಶಿಕ್ಷಕರು ವೈಯಕ್ತಿಕವಾಗಿ ಗಮನಹರಿಸಿದ್ದು, ಈ ಬಾರಿ ಜಿಲ್ಲೆಗೆ ಮೊದಲ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರಮ ಹಾಕಲಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ್‌ಕುಮಾರ್, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಇಲಾಖೆ ರೂಪಿಸಿರುವ ಕಾರ್ಯಕ್ರಮಗಳ ಕುರಿತು ಪಿಪಿಟಿ ಮೂಲಕ ಸಮಗ್ರ ಪಕ್ಷಿನೋಟ ನೀಡಿದರು.ಸಭೆಯಲ್ಲಿ ತಾಪಂ ಅಧ್ಯಕ್ಷೆ ಪದ್ಮಮ್ಮ, ಜಿಪಂ ಸದಸ್ಯರಾದ ಕಟ್ಟನಾಯಕ, ಸಾವಿತ್ರಿ ಮಂಜು, ತಹಶೀಲ್ದಾರ್ ಬಸವರಾಜ್, ತಾಪಂ ಇಒ ಗಿರೀಶ್ ಸೇರಿದಂತೆ ತಾಲೂಕಿನ 72 ಸರ್ಕಾರಿ ಫ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಹಾಸ್ಟೆಲ್ ವಾರ್ಡನ್, ಬಿಆರ್‌ಪಿ, ಸಿಆರ್‌ಪಿಗಳು ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿಯಿಂದ ಪದವಿ ಟಾಪರ್‌ಗೆ ಚಿನ್ನ: ಶಿಕ್ಷಣ ಪ್ರಗತಿಗಾಗಿ ತಮ್ಮ ತಾಯಿಯ ಹೆಸರಿನಲ್ಲಿ ಎಸ್‌ಎಸ್‌ಎಲ್‌ಸಿಯಿಂದ ಪದವಿ ತರಗತಿವರೆಗೆ ತಾಲೂಕಿಗೆ ಮೊದಲಿಗರಾಗುವ ಸರ್ಕಾರಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಲಾಗುವುದು. ಉತ್ತಮ ಫಲಿತಾಂಶ ಗಳಿಸುವ ಶಾಲೆಗೆ ಶಾಸಕರ ನಿಧಿಯಿಂದ ಅನುದಾನದ ಬಹುಮಾನ ನೀಡಲಾಗುತ್ತಿದೆ. ಇದನ್ನು ಈ ವರ್ಷವೂ ಮುಂದುವರಿಸಲಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.