Advertisement

ಮೇ 9: ಎಸ್ಸೆಸ್ಸೆಲ್ಸಿ ಆಂಗ್ಲ ಮಾಧ್ಯಮದಲ್ಲೂ ಪುನರ್ಮನನ ತರಗತಿ ಆರಂಭ

08:21 AM May 09, 2020 | Hari Prasad |

ಬೆಂಗಳೂರು: ಏಪ್ರಿಲ್ 29ರಿಂದ ಚಂದನ ವಾಹಿನಿಯಲ್ಲಿ ಆರಂಭಿಸಲಾಗಿರುವ ಎಸ್.ಎಸ್.ಎಲ್.ಸಿ. ಪುನರ್ಮನನ ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿಯೂ ಸಹ ಮೇ 9ರಿಂದ ಪ್ರಾರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

Advertisement

ಕನ್ನಡ ಮಾಧ್ಯಮದಲ್ಲಿ ಆರಂಭಿಸಲಾಗಿರುವ ಪುನರ್ಮನನ ತರಗತಿಗಳನ್ನು ರಾಜ್ಯದ ವಿದ್ಯಾರ್ಥಿ ಸಮೂಹ ಬೃಹತ್ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿದ್ದು, ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೂ ಉಪಯೋಗವಾಗುವಂತೆ ಪುನರ್ಮನನ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಮುಂದಿನ 30 ದಿನಗಳ ಅವಧಿಯಲ್ಲಿ ಮೊದಲ 16 ದಿನ ಗಣಿತ ಹಾಗೂ ವಿಜ್ಞಾನ, ನಂತರದ 10 ದಿನ ಸಮಾಜ ವಿಜ್ಞಾನ ತರಗತಿಗಳನ್ನುಆಂಗ್ಲಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. ಸಮಾಜ ವಿಜ್ಞಾನ ಬೋಧನೆ ಪೂರ್ಣಗೊಂಡ ಬಳಿಕ 6 ದಿನಗಳ ಕಾಲ ಹಿಂದಿ, ಸಂಸ್ಕೃತ ಹಾಗೂ ಉರ್ದು ಮೊದಲ ಭಾಷೆಗಳ ತರಗತಿಗಳನ್ನೂ ಸಹ ಬೋಧಿಸಲಾಗುವುದು ಎಂದು ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೇ 9ರಿಂದ ಪ್ರತಿದಿನ ಬೆಳಗ್ಗೆ 9.30ರಿಂದ 11ಗಂಟೆವರೆಗೆ ಚಂದನ ವಾಹಿನಿಯಲ್ಲಿ ಈ ತರಗತಿಗಳು ಪ್ರಸಾರವಾಗುವುದಿದ್ದು, ಈ ತರಗತಿಗಳ ಮುದ್ರಿತ ಭಾಗವನ್ನು ಮಕ್ಕಳ ವಾಣಿ ಯೂ-ಟ್ಯೂಬ್ ವಾಹಿನಿಯಲ್ಲೂ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

1.20 ಲಕ್ಷಕ್ಕೂ ಹೆಚ್ಚು ಜನರಿಂದ ಇ- ಸಾರ್ವಜನಿಕ ಗ್ರಂಥಾಲಯ ಆಪ್ ಬಳಕೆ:
ಕಳೆದ ನಾಲ್ಕು ತಿಂಗಳ ಹಿಂದೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಲೋಕಾರ್ಪಣೆಗೊಳಿಸಿದ ಇ- ಸಾರ್ವಜನಿಕ ಗ್ರಂಥಾಲಯ ಆಪ್ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು, 1.20 ಲಕ್ಷಕ್ಕೂ ಹೆಚ್ಚು ಜನರು ಈ ಆಪ್ ನ್ನು ಡೌನ್್ ಲೋಡ್ ಮಾಡಿ ಬಳಸುತ್ತಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

Advertisement

ಕೋವಿಡ್ ಸಂದರ್ಭದಲ್ಲಿ ಸೃಷ್ಟಿಯಾದ ಸಾಮಾಜಿಕ ಸ್ಥಿತಿಗತಿ ಹಿನ್ನೆಲೆಯಲ್ಲಿ ಅತ್ಯಂತ ಸಮಯೋಚಿತವಾಗಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇಂತಹ ಉತ್ತಮ ಉಪಕ್ರಮವನ್ನು ಅನುಷ್ಠಾನಗೊಳಿಸಿದ್ದು, ಹೆಚ್ಚಿನ ಸದುಪಯೋಗವಾಗಿದೆ. ಈ ಸಂದರ್ಭದಲ್ಲಿ ಬೃಹತ್ ಸಂಖ್ಯೆಯ ಚಂದಾದಾರರು ಈ ಡಿಜಿಟಲ್ ಗ್ರಂಥಾಲಯದ ಅನುಕೂಲ ಪೆಡದುಕೊಂಡಿದ್ದಾರೆ.

ಇ-ಸಾರ್ವಜನಿಕ ಗ್ರಂಥಾಲಯ ಆಪ್ ನಲ್ಲಿ ಗ್ರಂಥಾಲಯಗಳಲ್ಲಿ ಲಭ್ಯವಿರುವ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ, ನಾಟಕ, ಕಾದಂಬರಿ, ಕಥೆ ಸೇರಿದಂತೆ ಎಲ್ಲ ಪ್ರಾಕಾರಗಳ ಒಂದು ಲಕ್ಷಕ್ಕೂ ಹೆಚ್ಚು ಗ್ರಂಥಗಳಿದ್ದು, ಈ ಕೋವಿಡ್ ಅವಧಿಯಲ್ಲಿ ಡಿಜಿಟಲ್ ಗ್ರಂಥಾಲಯದ ಅರಿವು ಹೆಚ್ಚೆಚ್ಚು ಜನರಿಗೆ ದೊರೆತಿದೆ ಎಂದು ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದು ಭಾರತದಲ್ಲೇ ಒಂದು ಪ್ರಥಮವಾದ ವಿಶಿಷ್ಟ ಪ್ರಯೋಗವಾಗಿದ್ದು, ಇದರ ಬಳಕೆ ಇದರ ಯಶಸ್ಸನ್ನು ಅವಲಂಬಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯದ ಜನರು ಇದರ ಸದುಪಯೋಗ ಪಡಿಸಿಕೊಂಡು ಇಲಾಖೆಯ ಈ ಉಪಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಚಿವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next