ಕಲಬುರಗಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಕೊನೆ ಸ್ಥಾನದಲ್ಲಿದೆ ಎನ್ನುವುದನ್ನು ಕೊನೆಗಾಣಿಸಲು ಟಾಪ್ 10ರೊಳಗೆ ಬರಲು ಯತ್ನಿಸಿ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಶಿಕ್ಷಕರಿಗೆ ಕರೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕ, ಜ್ಞಾನಾಮೃತ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಕೇಂದ್ರ, ಮಿಲೇನಿಯಂ ಶಾಲೆ ಮತ್ತು ಕಾಲೇಜು ಸಂಯುಕ್ತ ಆಶ್ರಯದಲ್ಲಿ ಜು.1ರಿಂದ14ರ ವರೆಗೆ ಪ್ರತಿನಿತ್ಯ ಸಂಜೆ 6ರಿಂದ 7:30ಗಂಟೆ ವರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ನಡೆಯುವ ಫೋನ್ ಇನ್ ಕಾರ್ಯಕ್ರಮಕ್ಕೆ ನಗರದ ಆಳಂದ ರಸ್ತೆಯ ಇಂಡೋ ಕಿಡ್ಸ್ ಪ್ಲೇ ಹೋಮ್ ಶಾಲೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆ ಎದುರಿಸುವಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ಶಿಕ್ಷಕರು ನೀಡಿದಲ್ಲಿ ಫಲಿತಾಂಶ ಹೆಚ್ಚಳ ಬರಲು ಸಾಧ್ಯವಾಗಬಹುದು. ಎಸ್ಸೆಸ್ಸೆಲ್ಸಿ ಮುಂದಿನ ವಿದ್ಯಾರ್ಥಿ ಜೀವನಕ್ಕೆ ಆಧಾರವಾಗಿದೆ. ಫಲಿತಾಂಶ ಸುಧಾರಣೆಗಾಗಿ ಸರ್ಕಾರ ಸಾಕಷ್ಟು ಹಣ ವೆಚ್ಚ ಮಾಡಿ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದರು. ವಿದ್ಯಾರ್ಥಿಗಳಿಗೆ ಅಂಕಗಳಿಗಾಗಿ ಬೋಧನೆ ಮಾಡದೆ ಸರ್ಧಾತ್ಮಕ ಪರೀಕ್ಷೆ, ಶಿಕ್ಷಣದ ಗುಣಮಟ್ಟ, ಪರಿಪೂರ್ಣ ಜ್ಞಾನಕ್ಕಾಗಿ ಬೋ ಧಿಸಿ. ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗದೇ ಇರುವ ಪ್ರಸ್ತುತ ಸನ್ನವೇಶದಲ್ಲಿ ಫೋನ್ ಇನ್ ಕಾರ್ಯಕ್ರಮ ವರದಾನವಾಗಿದೆ ಎಂದು ಹೇಳಿದರು.
ಡಿಡಿಪಿಐ ಅಶೋಕ ಭಜಂತ್ರಿ ಮಾತನಾಡಿ, ನಿಮ್ಮ ಎಲ್ಲ ಪಠ್ಯ ವಿಷಯಗಳ ಬಗ್ಗೆ ವಿಷಯ ತಜ್ಞರು ಮನವರಿಕೆ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಯಾವುದೇ ಅನುಮಾನಗಳಿದ್ದಲ್ಲಿ ಕರೆ ಮಾಡಿ ತಿಳಿದುಕೊಳ್ಳಿ. ಪ್ರಸ್ತುತ ಸಂದರ್ಭದಲ್ಲಿ ಫೋನ್ ಇನ್ ಕಾರ್ಯಕ್ರಮ ಸಹಕಾರಿಯಾಗಿದೆ. ಜಿಲ್ಲೆಯ ಎಲ್ಲ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಆಳಂದ ಬಿಇಒ ಭರತರಾಜ ಸಾವಳಗಿ, ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಎನ್. ಪಾಟೀಲ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ವಿಭಾಗ ಪ್ರಮುಖ ಮಹೇಶ ಬಸರಕೋಡ ಮಾತನಾಡಿದರು. ಎಸ್ಸೆಸ್ಸೆಲ್ಸಿ ಜಿಲ್ಲಾ ನೋಡಲ್ ಅ ಧಿಕಾರಿ ರಮೇಶ ಜಾನಕರ, ಯೋಜನಾ ಉಪ ಸಮನ್ವಯಾಧಿಕಾರಿ ಸಿ.ಬಿ. ಪಾಟೀಲ, ತಾಂತ್ರಿಕ ಸಹಾಯಕ ಚಂದ್ರಶೇಖರ ಪಾಟೀಲ, ಜ್ಞಾನಾಮೃತ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಕೇಂದ್ರದ ಅಧ್ಯಕ್ಷ ಕೆ. ಬಸವರಾಜ, ಇಂಡೋ ಕಿಡ್ಜ್ ಸಂಸ್ಥೆಯ ಶಿವರಾಜ ಎಂ.ನಂದಗಾಂವ, ಉಪನ್ಯಾಸಕ ಎಚ್.ಬಿ. ಪಾಟೀಲ, ಪ್ರಮುಖರಾದ ಚಂದ್ರಕಾಂತ ಬಿರಾದಾರ, ಮಹೇಶ ಹೂಗಾರ, ಸಂಜೀವಕುಮಾರ ಪಾಟೀಲ, ರವಿ ಹೂಗಾರ, ಶಿವಲಿಂಗಪ್ಪ ಕೋಡ್ಲಿ, ಸಿದ್ದರಾಮ ಬೇತಾಳೆ, ಮಳಯ್ಯ ಹಿರೇಮಠ, ದಿಲಿಪ ಚವ್ಹಾಣ, ಅನೀಲಕುಮಾರ ಧೋತ್ರೆ, ಶರಣಮ್ಮ ಮಾಳಗೆ, ಶಿವಾನಂದ ಇಟಕಾರ, ಸುನೀತಾ ಮಂಗಾಣೆ, ಶ್ರೀಪಾಲ ಭೋಗಾರ, ಪ್ರಭುಲಿಮಗ ಮೂಲಗೆ, ನರಸಪ್ಪ ಬಿರಾದಾರ ದೇಗಾಂವ, ನೀಲಕಂಠಯ್ಯ ಹಿರೇಮಠ, ದೇವೇಂದ್ರಪ್ಪ ಗಣಮುಖೀ ಮತ್ತಿತರರಿದ್ದರು.