ಸೊರಬ : ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅವಳಿ ಸಹೋದರಿಯರಾದ ಮಾನ್ಯ ವಿ. ಹೆಬ್ಬಾರ್ ಹಾಗೂ ಮುಕ್ತಾ ವಿ. ಹೆಬ್ಬಾರ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಮಾನ ಅಂಕಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ವಿಕ್ರಂ ಹೆಬ್ಬಾರ್ ಹಾಗೂ ಶೈಲಜಾ ಹೆಬ್ಬಾರ್ ದಂಪತಿಯ ಅವಳಿ ಪುತ್ರಿಯರು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 95 ಅಂಕಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಓದಿನ ಗೊಂದಲಗಳಿದ್ದಲ್ಲಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದಿದ್ದಾರೆ. ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಪ್ರತಿಭಾನ್ವಿತರಾಗಿದ್ದು, ಹಿಂದೂಸ್ತಾನಿ ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದಲೂ ಸಮಾನ ಅಂಕಗಳಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮಾನ್ಯ ವಿ. ಹೆಬ್ಬಾರ್ ಕನ್ನಡದಲ್ಲಿ 123, ಇಂಗ್ಲೀಷ್ ಮತ್ತು ಹಿಂದಿಯಲ್ಲಿ 100, ಗಣಿತ 89, ವಿಜ್ಞಾನ 92 ಹಾಗೂ ಸಮಾಜ 94 ಅಂಕಗಳೊಂದಿಗೆ ಒಟ್ಟು 598 ಅಂಕಗಳಿಸಿ ಶೇ. 95.68 ಅಂಕಗಳಿಸಿದ್ದರೆ, ಮುಕ್ತಾ ವಿ. ಹೆಬ್ಬಾರ್ ಕನ್ನಡ 125, ಇಂಗ್ಲೀಷ್ 97, ಹಿಂದಿ ಮತ್ತು ಸಮಾಜದಲ್ಲಿ 100, ಗಣಿತ 86 ಮತ್ತು ವಿಜ್ಞಾನ 87 ಅಂಕಗಳೊಂದಿಗೆ ಒಟ್ಟು 595 ಅಂಕಗಳಿಸಿ ಶೇ. 95.20 ಅಂಕಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ನಿತ್ಯ ಎಲ್ಲ ವಿಷಯಗಳಿಗೂ ಸಮಾನವಾದ ಮಹತ್ವ ನೀಡಿ ವೇಳಾಪಟ್ಟಿ ಮಾಡಿಕೊಂಡು ಅಭ್ಯಾಸ ಮಾಡಿದೆವು. ಶಿಕ್ಷಕರಿಂದ ಅಗತ್ಯ ಮಾರ್ಗದರ್ಶನ ಪಡೆಯುತ್ತಿದ್ದೇವು. ಹಳೆ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಿದ್ದೇವು. ಮನೆಯಲ್ಲಿಯೂ ಪೋಷಕರು ಶಿಕ್ಷಣಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಪಿಯುಸಿ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಪಡೆದು ಅಲ್ಲಿಯೂ ಉತ್ತಮ ಸಾಧನೆ ಮಾಡಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ವೇಳೆ ಇಬ್ಬರಿಗೂ ಸಮಾನ ಅಂಕ ಬರಲಿ ಎಂದೇ ಬಯಸಿದ್ದೆವು ಎನ್ನುತ್ತಾರೆ ಮುಕ್ತಾ ವಿ. ಹೆಬ್ಬಾರ್ ಹಾಗೂ ಮಾನ್ಯ ವಿ. ಹೆಬ್ಬಾರ್.
ಅವಳಿ ಸಹೋದರಿಯರ ಸಾಧನೆ ಹರ್ಷ ತಂದಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡಿದ್ದಾರೆ. ಶಿಕ್ಷಕರ ಶ್ರಮ, ವಿದ್ಯಾರ್ಥಿಗಳ ಪ್ರಯತ್ನದಿಂದ ಶಾಲೆ ಫಲಿತಾಂಶ ಶೇ. 100 ಆಗಿದ್ದು ಹೆಮ್ಮೆಯ ವಿಷಯವಾಗಿದೆ.
– ದಿವಾಕರ ಭಾವೆ, ಅಧ್ಯಕ್ಷರು, ಶ್ರೀ ವಿವೇಕಾನಂದ ಬೋಧನಾ ಸಂಸ್ಥೆ, ಸೊರಬ.
ಶ್ರೀ ಸ್ವಾಮಿ ವಿವೇಕಾನಂದ ಶಾಲೆಯ ಶಿಕ್ಷಕರ ಮಾರ್ಗದರ್ಶನ ಮಕ್ಕಳ ಸಾಧನೆಗೆ ಪುಷ್ಟಿ ತಂದಿದೆ. ಮಕ್ಕಳು ಬಾಲ್ಯದಿಂದಲೂ ಸಮಾನವಾಗಿಯೇ ಅಂಕಗಳನ್ನು ಗಳಿಸುತ್ತಿದ್ದರು. ಇದೀಗ ಎಸ್ಸೆಸ್ಸೆಲ್ಸಿಯೂ ಸಮಾನ ಅಂಕಗಳಿಸಿರುವುದು ಹಾಗೂ ಮಕ್ಕಳ ಸಾಧನೆ ಸಂತಸ ತಂದಿದೆ.
– ವಿಕ್ರಂ ಹೆಬ್ಬಾರ್, ವಿದ್ಯಾರ್ಥಿನಿಯರ ತಂದೆ.
ಅವಳಿ ಸಹೋದರಿ ಯರಾದ ಮಾನ್ಯ ವಿ. ಹೆಬ್ಬಾರ್ ಹಾಗೂ ಮುಕ್ತ ವಿ. ಹೆಬ್ಬಾರ್ ಅವರು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅಂಕ ಪಡೆಯುವಲ್ಲಿ ಸಮಾನತೆ ಕಾಪಾಡಿಕೊಂಡಿದ್ದಾರೆ. ಇವರು ಪ್ರತಿ ತರಗತಿಯಲ್ಲೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಜೊತೆಗೆ ಸಂಗೀತ ಕಲಿಯಲ್ಲಿಯೂ ಆಸಕ್ತಿ ಹೊಂದಿದ್ದಾರೆ.
– ಡಿ. ಶಿಲ್ಪಾ, ಮುಖ್ಯ ಶಿಕ್ಷಕಿ, ಸೊರಬ.