ಮಂಗಳೂರು: ಈ ಬಾರಿ ಪ್ರಥಮ ಪಿಯುಸಿಗೆ ವಿದ್ಯಾರ್ಥಿ ದಾಖಲಾತಿಗೆ ಎಸೆಸೆಲ್ಸಿ ಫಲಿತಾಂಶವೇ ತೊಡಕಾಗುವ ಸಾಧ್ಯತೆ ಹೆಚ್ಚಾಗಿದೆ.
ಮೇ 19ರಂದು ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಲಿದೆ. ಅದೇ ಹೊತ್ತಿಗೆ ದ್ವಿತೀಯ ಪಿಯು ಪರೀಕ್ಷೆ ಮುಗಿದು ಉಪನ್ಯಾಸಕರು ಮೌಲ್ಯಮಾಪನದಲ್ಲಿ ತೊಡಗ ಲಿದ್ದು, ಪಿಯುಸಿ ವಿದ್ಯಾರ್ಥಿಗಳ ದಾಖಲಾತಿಗೆ ಉಪನ್ಯಾಸಕರ ಕೊರತೆ ಆಗಲಿದೆ. ಖಾಸಗಿ ಕಾಲೇಜಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಿದರೂ ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಸಮಸ್ಯೆ ಎದುರಾಗುವ ಸಂಭವವಿದೆ.
ಪ್ರತೀ ವರ್ಷ ದ್ವಿತೀಯ ಪಿಯು ಪರೀಕ್ಷೆ ಮುಗಿದ ಬಳಿಕ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿತ್ತು. ಈ ಬಾರಿ ವಿರುದ್ಧವಾಗಿದೆ. ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಮೇ 18ರ ವರೆಗೆ ಇದ್ದು, ಬಳಿಕ ಸುಮಾರು 12 ದಿನ ಮೌಲ್ಯಮಾಪನ ನಡೆಯುತ್ತದೆ. ಹಿಂದೆ 13 ದಿನಗಳೊಳಗೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಯುತ್ತಿತ್ತು. ಈ ಬಾರಿ ಜೆಇಇ ಪರೀಕ್ಷೆಗೆ ಸಮಸ್ಯೆ ಆಗಬಾರದೆಂದು 29 ದಿನಗಳ ಕಾಲ ನಡೆಯುತ್ತಿದೆ. ಇದು ಹೊಸ ಸಮಸ್ಯೆಗೆ ಕಾರಣವಾಗಿದೆ.
ಎಸೆಸೆಲ್ಸಿ ಫಲಿತಾಂಶ ಬಂದ ಕೂಡಲೇ ಕಾಲೇಜಿಗೆ ಸೇರಿಸುವ ಧಾವಂತ ಪೋಷಕರಲ್ಲಿರುತ್ತದೆ. ತಡವಾದರೆ ಸೀಟು ಸಿಗದೆಂಬ ಆತಂಕವಿರುತ್ತದೆ. ವಿದ್ಯಾರ್ಥಿಗಳ ಆಸಕ್ತಿ, ಕಲಿಕಾ ಮೌಲ್ಯಮಾಪನ ಮಾಡಿ ಸೂಕ್ತ ಕೋರ್ಸ್ ಕುರಿತು ಪ್ರಾಧ್ಯಾಪಕರು-ಪ್ರಾಂಶುಪಾಲರು ವಿದ್ಯಾರ್ಥಿ-ಪೋಷಕರಿಗೆ ಮನವರಿಕೆ ಮಾಡುತ್ತಾರೆ. ಈ ಬಾರಿ ಇದಕ್ಕೆ ದ್ವಿತೀಯ ಪಿಯು ಮೌಲ್ಯಮಾಪನ ಅಡ್ಡಿ ಮಾಡಲಿದೆ.
ಎಸೆಸೆಲ್ಸಿ ಫಲಿತಾಂಶ ಬಂದ ಬಳಿಕ ಪೂರಕ ಪರೀಕ್ಷೆಗೆ ಸಿದ್ಧತೆ ಮಾಡ ಬೇಕಾಗುತ್ತದೆ. ಫಲಿತಾಂಶ ತಡ ಮಾಡಿ ದರೆ ಕೊನೆಯ ಹಂತದಲ್ಲಿ ಮಕ್ಕಳ ದಾಖ ಲಾತಿಗೂ ಸಮಸ್ಯೆ ಆಗಬಹುದು. ಪ್ರಥಮ ಪಿಯು ದಾಖಲಾತಿಗೆ ಯಾವುದೇ ಸಮಸ್ಯೆ ಆಗದಂತೆ ಆಯಾ ಕಾಲೇಜಿನಲ್ಲಿ ಒಂದಿಬ್ಬರು ಉಪನ್ಯಾಸಕರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು.
-ಬಿ.ಸಿ. ನಾಗೇಶ್,
ಶಿಕ್ಷಣ ಸಚಿವ
ದ್ವಿತೀಯ ಪಿಯು ಮೌಲ್ಯಮಾಪನದಲ್ಲಿ ಪ್ರಾಂಶುಪಾಲರು, ಪ್ರಾಧ್ಯಾಪಕರು ತೊಡಗಿಕೊಳ್ಳುತ್ತಾರೆ. ಅದೇ ವೇಳೆ ಪ್ರಥಮ ಪಿಯು ದಾಖಲಾತಿಗೆ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೆ ಸಮಸ್ಯೆಯಾಗಲಿದೆ. ಎಸೆಸೆಲ್ಸಿ ಫಲಿತಾಂಶ ಬಂದಾಗ ಪ್ರಥಮ ಪಿಯು ದಾಖಲಾತಿ ನಡೆಯುವುದು ವಾಡಿಕೆ. ಆಗ ಸರಕಾರಿ ಅನುದಾನಿತ ಕಾಲೇಜಿನಲ್ಲಿ ಪ್ರಾಧ್ಯಾಪಕರು ಸಿಗದಿದ್ದರೆ ದಾಖಲಾತಿಗೆ ಸಮಸ್ಯೆಯಾಗಲಿದೆ.
– ಕೆ.ಎನ್. ಗಂಗಾಧರ ಆಳ್ವ,
ಅಧ್ಯಕ್ಷರು, ಪದವಿ ಪೂರ್ವ ಕಾಲೇಜು ಸಂಘ, ದ.ಕ.
-ದಿನೇಶ್ ಇರಾ