Advertisement

ಎಸೆಸೆಲ್ಸಿ ಫ‌ಲಿತಾಂಶ ವೃದ್ಧಿ: 4 ಹಂತಗಳ ಕಾರ್ಯಕ್ರಮ

01:35 AM Jan 23, 2022 | Team Udayavani |

ಉಡುಪಿ: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಫ‌ಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ, ಜತೆಗೆ ವಿನೂತನ ಪ್ರಯೋಗಕ್ಕೂ ಮುಂದಾಗಿದ್ದಾರೆ.

Advertisement

ಕಳೆದ ಸಾಲಿನ ಎಸೆಸೆಲ್ಸಿ ಫ‌ಲಿತಾಂಶದ ಅಂಕಿಅಂಶಗಳ ವಿಶ್ಲೇಷಣೆಯ ಆಧಾರದಲ್ಲಿ ಕಡಿಮೆ ಫ‌ಲಿತಾಂಶ ಬಂದಿರುವ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆ ಆಯೋಜಿಸಲಾಗಿದೆ.

ಉಡುಪಿ : ನಾಲ್ಕು ಹಂತಗಳ ಕಾರ್ಯಕ್ರಮ
ಜ. 25ರಂದು ಜಿ.ಪಂ. ಸಿಇಒ ನೇತೃತ್ವದಲ್ಲಿ ಫ‌ಲಿತಾಂಶ ಕಡಿಮೆ ಬಂದಿರುವ ಜಿಲ್ಲೆಯ 90 ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆ ನಡೆಸಿ, ಫ‌ಲಿತಾಂಶ ಹೆಚ್ಚಿಸಲು ನಿರ್ದೇಶನ ನೀಡಲಾಗುತ್ತದೆ. ಅನಂತರ ಬ್ಲಾಕ್‌ ಹಂತದಲ್ಲಿ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು, ಮುಖ್ಯ ಶಿಕ್ಷಕರು, ಸಹಶಿಕ್ಷಕರಿಗೆ ತರಬೇತಿ, ಬಳಿಕ ಶಾಲಾ ಹಂತದಲ್ಲಿ ಸಭೆ ನಡೆಸಿ, ಆ ಶಾಲೆಯಲ್ಲಿ ಯಾವೆಲ್ಲ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದಿದ್ದಾರೆ ಎಂಬುದರ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗುತ್ತದೆ. ಕೊನೆಯದಾಗಿ ಮನೆ ಮನೆಗೆ ಭೇಟಿ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನೆಮನೆಗೆ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಹೆತ್ತವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಕಲಿಕೆಯ ಸುಧಾರಣೆಗೆ ಬೇಕಾದ ಮಾರ್ಗದರ್ಶನ ನೀಡಲಿದ್ದಾರೆ.

ದಕ್ಷಿಣ ಕನ್ನಡ:ವಿನೂತನ ಕಾರ್ಯಕ್ರಮ
“ಸಾಧನಾ ದೀವಿಗೆ’ ಪರಿಕಲ್ಪನೆಯಡಿ ವಿಷಯ ತಜ್ಞರ ಮೂಲಕ ಪ್ರಶ್ನಾಕೋಠಿ ಸಿದ್ಧಪಡಿಸಿ ಹಂಚಲಾಗುತ್ತದೆ. ಶಿಕ್ಷಕರು ತಮ್ಮ ವಿಷಯಗಳಲ್ಲಿ ಪ್ರತೀ ವಾರ ತೆರೆದ ಪುಸ್ತಕಗಳ ಪರೀಕ್ಷೆ ನಡೆಸಿ ಮಕ್ಕಳಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯ ಹೆಚ್ಚಿಸಲಿದ್ದಾರೆ. ಕಲಿಕೆ ಸವಾಲಾಗಿರುವ ಮಕ್ಕಳಿಗೆ ವಿಶೇಷ ಕಾರ್ಯಾಗಾರ, ಹೋಬಳಿ ಮಟ್ಟದಲ್ಲಿ ಶಾಲೆಗಳು ಸಂಪನ್ಮೂಲ ಶಿಕ್ಷಕರ ವಿನಿಮಯ ಮಾಡಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ನೋಟ್‌ಬುಕ್‌, ಪ್ರಶ್ನೋತ್ತರದ ಸಿದ್ಧತೆಯ ಖಾತ್ರಿ ಪಡಿಸುವ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸಲಾಗಿದೆ. ಮಕ್ಕಳಿಗಾಗಿ ಸಹಾಯವಾಣಿ, ರೇಡಿಯೋ ಮೂಲಕ ವಿಶೇಷ ಕಾರ್ಯಕ್ರಮ, ಜಿಲ್ಲೆಯಲ್ಲಿ ಅಲ್ಪಸಂಖ್ಯಾಕರು, ಪ.ಜಾ., ಪಂಗಡದ ವಿದ್ಯಾರ್ಥಿಗಳ ಫಲಿತಾಂಶ ಹೆೆಚ್ಚಿಸಲು ಸ್ವಯಂಸೇವಾ ಸಂಘಟನೆಗಳು, ಸಮುದಾಯ ಮುಖಂಡರ ಸಹಾಯದೊಂದಿಗೆ ಕಾರ್ಯಕ್ರಮ, ತರಗತಿ ಅವಧಿ 1 ತಾಸು ವಿಸ್ತರಣೆ ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವಿನೂನತ ಕಾರ್ಯಕ್ರಮ ರೂಪಿಸಲಾಗಿದೆ.

ಕಲಿಕಾ ಸಾಮಗ್ರಿ
ಉಡುಪಿ ಜಿ.ಪಂ. ಮೂಲಕ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಒದಗಿಸಲಾಗುವುದು. ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಡಯಟ್‌ನಿಂದ ಸಿದ್ಧಪಡಿಸಿರುವ ಕಲಿಕಾ ಸಾಮಗ್ರಿಗಳು, ಪರೀಕ್ಷಾ ಸಿದ್ಧತೆ, ಪುನರಾವರ್ತಿತ ಪ್ರಶ್ನೆಗಳು, ಪ್ರಶ್ನೆ ಪತ್ರಿಕೆ ಸರಣಿಗಳನ್ನು ವಿದ್ಯಾರ್ಥಿಗಳಿಗೆ ನೇರವಾಗಿ ಖರೀದಿ ಮಾಡುವುದು ಅಥವಾ ಜೆರಾಕ್ಸ್‌ ತೆಗೆಯುವುದು ದುಬಾರಿಯಾಗಲಿದೆ. ಹೀಗಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪ್ರೌಢಶಾಲೆಗಳಿಗೆ ಗ್ರಾ.ಪಂ. ಮೂಲಕವೇ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ಮಾರ್ಗದರ್ಶನ ನೀಡುವ ಜತೆಗೆ ಜಿಲ್ಲೆಯ 90 ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿಶೇಷ ಸಭೆ ನಡೆಸಲಿದ್ದೇವೆ. ಮಕ್ಕಳಿಗೆ ಗ್ರಾ.ಪಂ. ಮೂಲಕ ಕಲಿಕಾ ಸಾಮಗ್ರಿ ಒದಗಿಸಲಾಗುತ್ತದೆ.
-ಗೋವಿಂದ ಮಡಿವಾಳ, ಡಿಡಿಪಿಐ
(ಹೆಚ್ಚುವರಿ ಕಾರ್ಯಭಾರ), ಡಯಟ್‌ ಪ್ರಾಂಶುಪಾಲ

ಗ್ರೇಡಿಂಗ್‌ ವ್ಯವಸ್ಥೆ ಇರುವುದರಿಂದ ಜಿಲ್ಲೆಯ ಗ್ರೇಡಿಂಗ್‌ ಉತ್ತಮಪಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸಿ ಶಾಲೆಗಳಿಗೆ ನೀಡಿದ್ದೇವೆ. ಪರೀಕ್ಷಾಭ್ಯಾಸ ಎಂಬ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ.
– ಕೆ. ಸುಧಾಕರ, ಉಪನಿರ್ದೇಶಕ, ದಕ್ಷಿಣ ಕನ್ನಡ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next