ವಿಜಯಪುರ: ಎಸ್ಸೆಸ್ಸೆಲ್ಸಿಯಲ್ಲಿ ಈ ಹಿಂದೆ 619 ಅಂಕ ಪಡೆದಿದ್ದ ಜಿಲ್ಲೆಯ ವಿದ್ಯಾರ್ಥಿನಿ ಸುಪ್ರಿಯಾ, ಮರು ಮೌಲ್ಯಮಾಪನದಲ್ಲಿ ಎರಡು ವಿಷಯಗಳಲ್ಲಿ ತಲಾ 3 ಅಂಕದಂತೆ ಹೆಚ್ಚುವರಿ 6 ಅಂಕ ಪಡೆದಿರುವ ಕಾರಣ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳದ ಎಕ್ಸ್‌ಲೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಸುಪ್ರಿಯಾ ಜೋಶಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಗಣಿತ ಹಾಗೂ ಇಂಗ್ಲಿಷ್ ವಿಷಯದಲ್ಲಿ ತಲಾ 97 ಅಂಕ ಪಡೆದಿದ್ದು, ಉಳಿದ ಎಲ್ಲ ವಿಷಯಗಳಲ್ಲೂ ನೂರಕ್ಕೆ 100 ಅಂಕ ಪಡೆದಿದ್ದಳು.
ಫಲಿತಾಂಶ ಪ್ರಕಟವಾದಾಗ ಇತರ ವಿಷಯಗಳಲ್ಲಿ ಶೇ.100 ಅಂಕ ಗಳಿಸಿದ್ದರೂ, ಇಂಗ್ಲಿಷ್ ಹಾಗೂ ಗಣಿತ ವಿಷಯದಲ್ಲಿ ತಲಾ 97 ಅಂಕ ಬಂದಿದ್ದವು. ಪ್ರಥಮ ಸ್ಥಾನ ಪಡೆಯುವ ಆತ್ಮವಿಶ್ವಾಸದಲ್ಲಿ ತನಗೆ ಅಂಕ ನೀಡಿಕೆಯಲ್ಲಿ ಅನ್ಯಾಯ ಆಗಿದ್ದನ್ನು ಗಮನಿಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು.
ಇದೀಗ ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟವಾಗಿದ್ದು, ಇಂಗ್ಲಿಷ್ ಹಾಗೂ ಗಣಿತ ವಿಷಯಗಳಲ್ಲೂ ತಲಾ 3 ಅಂಕ ದೊರೆತಿವೆ. ಇದರಿಂದ 625 ಅಂಕಗಳಿಗೆ 625 ಪೂರ್ಣಾಂಕ ಗಳಿಸಿರುವ ಸುಪ್ರಿಯಾ ರಾಜ್ಯಕ್ಕೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಎಲ್ಲ ವಿಷಯಗಳಲ್ಲಿಯೂ ಶೇ.100 ಅಂಕ ಬರುತ್ತವೆ ಎಂಬ ವಿಶ್ವಾಸ ನನ್ನಲ್ಲಿತ್ತು. ಫಲಿತಾಂಶ ಪ್ರಕಟವಾದಾಗ ಗಣಿತ-ಇಂಗ್ಲಿಷ್ ವಿಷಯದಲ್ಲಿ 97 ಅಂಕ ಬಂದಿದ್ದರಿಂದ ಮರು ಮೌಲ್ಯಮಾಪನಕ್ಕೆ ಆರ್ಜಿ ಸಲ್ಲಿಸಿದ್ದೆ. ಇದೀಗ ನನ್ನ ನಿರೀಕ್ಷೆಯ ಫಲಿತಾಂಶ ನನಗೆ ದಕ್ಕಿದ್ದು, ತಡವಾದರೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಖುಷಿ ನೀಡಿದೆ.
-ಸುಪ್ರಿಯಾ ಜೋಶಿ