Advertisement
ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ಆತೂರು ಬದ್ರಿಯಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ ಕನ್ನಡದಲ್ಲಿ ಕೇವಲ 22 ಅಂಕ ಬಂದಿತ್ತು. ಹೆಚ್ಚಿನ ಅಂಕ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿಗೆ ಈ ಅಂಕ ನೋಡಿ ಆಘಾತವಾಯಿತು. ಇದರಿಂದ ಆಕೆ ಅನುತ್ತೀರ್ಣಗೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಯ ಛಾಯಾಪ್ರತಿಯನ್ನು ತರಿಸಿಕೊಂಡಾಗ ಆಕೆ ಕನ್ನಡದಲ್ಲಿ 114 ಅಂಕ ಗಳಿಸಿದ್ದಾಳೆ. ಆದರೆ ಒಟ್ಟು 22 ಪುಟಗಳ ಉತ್ತರ ಬರೆದಿದ್ದು, ಪುಟ ಸಂಖ್ಯೆ ಕಾಲಂನಲ್ಲಿ 22 ಎಂದು ನಮೂದಾಗಿತ್ತು. ಇದೇ ಸಂಖ್ಯೆಯನ್ನು ಆಕೆಯ ಅಂಕ ಎಂದು ಪರಿಗಣಿಸಿ ಮೌಲ್ಯ ಮಾಪಕರು ಆಕೆಯನ್ನು ಅನುತ್ತೀರ್ಣಗೊಳಿಸಿದ್ದಾರೆ.
ಮೌಲ್ಯಮಾಪಕರ ಎಡವಟ್ಟಿನಿಂದ ನೊಂದು ಮಾನಸಿಕವಾಗಿ ಕುಗ್ಗಿದ್ದ ವಿದ್ಯಾರ್ಥಿನಿಯನ್ನು ಕೆಲವು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಆಕೆಯ ಶಿಕ್ಷಕರು ತಿಳಿಸಿದ್ದಾರೆ. ಮೌಲ್ಯಮಾಪಕರ ಎಡವಟ್ಟಿನಿಂದ ಮಂಗಳೂರಿನ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿಗೆ ವಿಜ್ಞಾನದಲ್ಲಿ 36ರ ಬದಲಾಗಿ 17 ಅಂಕ ಬಂದಿರುವ ಬಗ್ಗೆ “ಉದಯವಾಣಿ’ ಆ. 19ರಂದು ವರದಿ ಪ್ರಕಟಿಸಿತ್ತು. ಈ ವಿಚಾರದಲ್ಲಿಯೂ ವಿದ್ಯಾರ್ಥಿ ಬರೆದ ಒಟ್ಟು ಪುಟ ಸಂಖ್ಯೆಯನ್ನೇ ಮೌಲ್ಯಮಾಪಕರು ಅಂಕ ಎಂದು ಪರಿಗಣಿಸಿ ಷರಾ ಎಳೆದು ಬಿಟ್ಟಿದ್ದರು. ಆ ಮೂಲಕ ಉತ್ತೀರ್ಣರಾಗಬೇಕಿದ್ದ ಇಬ್ಬರೂ ವಿದ್ಯಾರ್ಥಿಗಳು ಮೌಲ್ಯಮಾಪಕರ ಬೇಜವಾಬ್ದಾರಿಯಿಂದಾಗಿ ಅನುತ್ತೀರ್ಣಗೊಳ್ಳುವಂತಾಗಿದೆ.