ಬೆಂಗಳೂರು: ರಾಜ್ಯದಲ್ಲಿ 2021ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ಕೋವಿಡ್ ಕಾರಣದಿಂದ ಈಗಾಗಲೇ ಕೇಂದ್ರ ಮಟ್ಟದ ಸಿಬಿಎಸ್ ಇ ಮತ್ತು ಐಸಿಎಸ್‌ಇಯ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳು ರದ್ದಾಗಿದೆ. ರಾಜ್ಯದಲ್ಲಿ ನಡೆಯುವ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳ ಬಗ್ಗೆಯೂ ಗೊಂದಲಗಳು ತಲೆದೋರಿದ್ದರಿಂದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಸಂಘಟನೆಗಳು ಮಾತ್ರವಲ್ಲದೆ ಮುಖ್ಯಮಂತ್ರಿಗಳು,ಶಾಸಕ, ಸಚಿವರು, ಪ್ರಮುಖ ಜನಪ್ರತಿನಿಧಿಗಳಿಂದ ಅಭಿಪ್ರಾಯವನ್ನು ಸುರೇಶ್ ಕುಮಾರ್ ಸಂಗ್ರಹಿಸಿದ್ದರು.
ಇದನ್ನೂ ಓದಿ: ಭಿನ್ನ ಮಾದರಿಯಲ್ಲಿ ನಡೆಯಲಿದೆ SSLC ಪರೀಕ್ಷೆ: ಪರೀಕ್ಷೆ ಮಾದರಿ ತಿಳಿಸಿದ ಸಚಿವರು
ಈ ವರ್ಷ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ. ಮಕ್ಕಳ ಯೋಗಕ್ಷೇಮ ಮತ್ತು ಶೈಕ್ಷಣಿಕ ಭವಿಷ್ಯ ಇದನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈಗ ನಡೆಸುವುದಿಲ್ಲ. ಬದಲಾಗಿ ಪರೀಕ್ಷೆ ಇಲ್ಲದೆ ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಗ್ರೇಡಿಂಗ್ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ 2021ರ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ