Advertisement

ಸಿಇಟಿ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ,ಪಿಯು ಪರೀಕ್ಷೆ

06:15 AM Dec 30, 2017 | Team Udayavani |

ಬೆಂಗಳೂರು: ಸಿಇಟಿ ಮಾದರಿಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಸಲು ಪ್ರತ್ಯೇಕ ಪರೀಕ್ಷಾ ಮಂಡಳಿ ರಚನೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ 
ತಿಳಿಸಿದ್ದಾರೆ.

Advertisement

ಶುಕ್ರವಾರ ವಿಧಾನಸೌಧದಲ್ಲಿ ಶುಕ್ರವಾರ ವಿಧಾನಸೌಧದಲ್ಲಿ 2018 ನೇ ಸಾಲಿನ ಕ್ಯಾಲೆಂಡರ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆಡಳಿತ ಮತ್ತು ಪರೀಕ್ಷಾ ವ್ಯವಸ್ಥೆ ಪ್ರತ್ಯೇಕವಾಗಿರಬೇಕು ಎಂಬುದು ಇದರ ಉದ್ದೇಶವಾಗಿದೆ. ಜತೆಗೆ ಪರೀಕ್ಷೆ ನಿರ್ವಹಣಾ ಒತ್ತಡ ನಿವಾರಿಸುವ ದೃಷ್ಟಿಯಿಂದಲೂ ಇದು ಅಗತ್ಯ ಎಂಬ ಅಭಿಪ್ರಾಯವಿದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ  ಮಂಡಳಿ ಕೇವಲ ಪರೀಕ್ಷೆಗಳನ್ನಷ್ಟೇ ಮಾಡುತ್ತಿದೆ. ಆದರೆ, ಪಿಯುಸಿ ಮಂಡಳಿಗೆ ಪರೀಕ್ಷೆ ಜತೆಗೆ ಆಡಳಿತಾತ್ಮಕ  ಕಾರ್ಯದ ಹೊಣೆಯೂ ಇದೆ. ಹೀಗಾಗಿ, ಆಡಳಿತ ಹಾಗೂ ಪರೀಕ್ಷೆ ಪ್ರತ್ಯೇಕವಾಗಿರಬೇಕು ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದರು.

ಪರೀಕ್ಷೆಗಳ ಒತ್ತಡ ನಿವಾರಿಸಲು ಯಾವ ಕ್ರಮ ಕೈಗೊಳ್‌ಳಬಹುದು ಎಂಬ ಬಗ್ಗೆ ವರದಿ ನೀಡಲು ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ.ವರದಿ ಬಂದ ನಂತರ ಈಗಿರುವ ನ್ಯೂನತೆಗಳನ್ನು ಸರಿಪಡಿಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

76 ಸಾವಿರ ಪ್ರಾಥಮಿಕ ಶಾಲೆಗಳು, 5200 ಪದವಿ ಪೂರ್ವ ಕಾಲೇಜುಗಳಲ್ಲಿ 1.20 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವುಗಳ ಪರೀಕ್ಷೆಗಳ ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇಲಾಖೆಯಲ್ಲಿ ಕಾಲಕ್ಕೆ ತಕ್ಕಂತೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಚಿವರು ಸಮರ್ಥನೆ ನೀಡಿದರು.

Advertisement

ಸಿದ್ಧತೆ: 2017ನೆ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ಯಾವುದೇ ಗೊಂದಲಗಳಿಲ್ಲದೆ ನಡೆದಿವೆ. 2018ನೆ ಸಾಲಿನ ಪರೀಕ್ಷೆಗಳನ್ನು ಅದೇ ರೀತಿಯಲ್ಲಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಕ್ಕಳ ಮೇಲಿನ ಪರೀಕ್ಷಾ ಒತ್ತಡಗಳನ್ನು ಕಡಿಮೆ ಮಾಡಲು ನಾಲ್ಕು ತಿಂಗಳ ಮುಂಚಿತವಾಗಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಕೆ ಸೇರಿದಂತೆ ಎಲ್ಲ ರೀತಿಯ ಭದ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು  ಹೇಳಿದರು.

ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ “ನಲಿ-ಕಲಿ’ ಕಲಿಕಾ ಪದ್ಧತಿ ಆರಂಭಿಸ ಲಾಯಿತು. ನಂತರ, ತಮಿಳುನಾಡು ಅದೇ ಪದ್ಧತಿ ಅನುಸರಿಸುತ್ತಿದೆ.  ಸದ್ಯಕ್ಕೆ ನಲಿ-ಕಲಿ ಪದ್ಧತಿ ರದ್ದು ಮಾಡುವ ಚಿಂತನೆಯಿಲ್ಲ.  ಈ ಪದ್ಧತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅವೈಜಾnನಿಕ ಎಂದು ಶಿಪಾರಸ್ಸು ಮಾಡಿರುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳ ಪ್ರವೇಶಾತಿ ನಿಲ್ಲಿಸುವ ಯಾವುದೇ ಉದ್ದೇಶವಿಲ್ಲ. 1-10ನೇ ತರಗತಿಯವರಿಗೆ ಸರಕಾರಿ ಶಾಲೆಗಳಲ್ಲಿ ಶೇ.84ರಷ್ಟು ಹಾಜರಾತಿ ಪ್ರಮಾಣ ನಾವು ಕಾಯ್ದುಕೊಂಡಿದ್ದೇವೆ. ಉಳಿದಂತೆ ಶೇ.16ರಷ್ಟು ಮಕ್ಕಳು ವಿವಿಧ ಕಾರಣಗಳಿಂದಾಗಿ ಶಾಲೆಯಿಂದ ಹೊರಗಿದ್ದಾರೆ . ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 23 ಸಾವಿರ ಕಿರಿಯ ಪ್ರಾಥಮಿಕ ಹಾಗೂ 21 ಸಾವಿರ ಹಿರಿಯ ಪ್ರಾಥಮಿಕ ಶಾಲೆಗಳಿದ್ದು 1-12 ನೇ ತರಗತಿವರೆಗೆ ಒಂದೇ ಆವರಣದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.
– ತನ್ವೀರ್ ಸೇಠ್ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next