ಬೆಂಗಳೂರು: ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯು ಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನಡೆಯುವುದರಿಂದ ಅದನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆ ಮುಂದೂಡಲಾಗಿದೆ ಎಂಬ ಸಂದೇಶವೂ ಹರಿದಾಡುತಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಮಂಡಳಿ, ಶಾಲಾ ಹಂತದಲ್ಲಿ ಪರೀಕ್ಷೆ ನಡೆಯುವುದರಿಂದ ಮುಂದೂಡಿಲ್ಲ. ನಿಗದಿತ ದಿನಾಂಕಗಳಲ್ಲೇ ಪರೀಕ್ಷೆ ನಡೆಯಲಿದೆ ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಳಾ ಮಾಹಿತಿ ನೀಡಿದರು.
ಆತಂಕಕ್ಕೆ ಅವಕಾಶವಿಲ್ಲ: ಮಕ್ಕಳು ಅಂತಿಮ ಪರೀಕ್ಷೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಂತಿಮ ಪರೀಕ್ಷೆಯ ಮಾದರಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಪರೀಕ್ಷೆ ಇದಾಗಿರುತ್ತದೆ. ಈ ಬಾರಿ ಮಂಡಳಿಯೇ ಬಹುಪಾಲು ಶಾಲೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಿದೆ.
ಸುಮಾರು 15,000 ಪ್ರೌಢಶಾಲೆಗಳ ಪೈಕಿ ಸುಮಾರು 2500 ಶಾಲೆಗಳಲ್ಲಿ ಶಿಕ್ಷಕರ ಸಂಘಟನೆಗಳು ಪೂರ್ವಸಿದ್ಧತಾ ಪರೀಕ್ಷೆ ನಡೆಸಿದೆ. ಉಳಿದ ಶಾಲೆಗಳಿಗೆ ಮಂಡಳಿ ಮುಂಚಿತವಾಗಿಯೇ ಮುದ್ರಿತ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಪರೀಕ್ಷೆಗಳು ಆಯಾ ಶಾಲೆಗಳಲ್ಲಿ ಮುಖ್ಯಶಿಕ್ಷಕರು, ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿವೆ. ಶಾಲಾ ಮುಖ್ಯಸ್ಥರು ಈ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಹೊಂದಿರುವುದು, ಅವರ ಕೈಗೆ ಪ್ರಶ್ನೆ ಪತ್ರಿಕೆಗಳು ಮುಂಚೆಯೇ ತಲುಪಿರುವುದರಿಂದ ಸೋರಿಕೆಯಾಗಿರಬಹುದು. ಇದು ಒಂದು ರೀತಿಯ ನೈತಿಕ ಜವಾಬ್ದಾರಿಯ ಪ್ರಶ್ನೆಯಾಗಿದೆ. ಇಷ್ಟೆಲ್ಲ ಆದರೂ, ಈ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಎಂಬ ಕಲ್ಪನೆಯಿಂದ ಗ್ರಹಿಸುವುದು ಸರಿಯಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಾರ್ಷಿಕ ಪರೀಕ್ಷಾ ವ್ಯವಸ್ಥೆ ಬೇರೆಯೇ ಆಯಾಮ ಹೊಂದಿರುತ್ತದೆ. ಎರಡೂವರೆ ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಸಂಪೂರ್ಣ ವಿಭಿನ್ನವಾಗಿ, ಅತ್ಯಂತ ಸುರಕ್ಷಿತವಾಗಿ ನಿರ್ವಹಿಸುವ ವ್ಯವಸ್ಥೆ ಹಿಂದಿನಿಂದಲೂ ಜಾರಿಯಲ್ಲಿದೆ. ಅದನ್ನೇ ಈ ಬಾರಿಯೂ ನಿರ್ವಹಿಸಲಾಗುವುದು. ವಾರ್ಷಿಕ ಪರೀಕ್ಷೆ ಬಗ್ಗೆ ಯಾವ ಗೊಂದಲ, ಆತಂಕಕ್ಕೆ ಅವಕಾಶವಿಲ್ಲ ಎಂದಿದ್ದಾರೆ.