Advertisement
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ರಾಜ್ಯದ 228 ಮೌಲ್ಯಮಾಪನ ಕೇಂದ್ರಗಳಲ್ಲಿ ಜು. 13ರಿಂದ ಮೌಲ್ಯಮಾಪನ ಪ್ರಕ್ರಿಯೆ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಆದರೆ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡುವ ನಿರ್ಧಾರ ಸರಕಾರ ತೆಗೆದುಕೊಂಡಿದೆ. ಆದ್ದರಿಂದ ಈ ಎರಡು ಜಿಲ್ಲೆಗಳ ಮೌಲ್ಯಮಾಪನ ಕಾರ್ಯವನ್ನು ಮುಂದೂಡಲಾಗಿದೆ.
ಜು. 31ರೊಳಗೆ ಎಸೆಸೆಲ್ಸಿ ಮೌಲ್ಯಮಾಪನ ಕಾರ್ಯ ಪೂರೈಸಲು ಮಂಡಳಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿತ್ತು. ಸರಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಎರಡು ಜಿಲ್ಲೆಗಳ ಮೌಲ್ಯಮಾಪನ ಕಾರ್ಯ ವಿಳಂಬವಾಗಲಿದೆ. ಹೀಗಾಗಿ ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ನೀಡಲು ಕಷ್ಟವಾಗಬಹುದು. ಎಲ್ಲ ಜಿಲ್ಲೆಗಳ ಮೌಲ್ಯಮಾಪನ ಕಾರ್ಯ ಮುಗಿದ ಅನಂತರವಷ್ಟೇ ಫಲಿತಾಂಶ ಪ್ರಕಟಿಸಲು ಸಾಧ್ಯ. ಒಂದೊಮ್ಮೆ ಬೇರೆ ಜಿಲ್ಲೆಗಳಲ್ಲೂ ಸರಕಾರ ಅಥವಾ ಜಿಲ್ಲಾಡಳಿತ ಲಾಕ್‌ಡೌನ್ ಘೋಷಣೆ ಮಾಡಿ, ಮೌಲ್ಯಮಾಪನ ಪ್ರಕ್ರಿಯೆ ನಡೆಸಲು ಸಾಧ್ಯವಾಗದೇ ಇದ್ದಲ್ಲಿ ಫಲಿತಾಂಶ ಇನ್ನಷ್ಟು ವಿಳಂಬವಾಗಬಹುದು ಎಂದು ಮೂಲಗಳು ತಿಳಿಸಿವೆ.