Advertisement

ಎಸೆಸೆಲ್ಸಿ: ಗಣಿತ ಪರೀಕ್ಷೆಯೂ ಯಶಸ್ವಿ

02:29 AM Jun 28, 2020 | Sriram |

ಬೆಂಗಳೂರು: ಶನಿವಾರ ನಡೆದ ಎಸೆಸೆಲ್ಸಿ ಗಣಿತ ಪರೀಕ್ಷೆಗೆ ಶೇ.97.93 ವಿದ್ಯಾರ್ಥಿಗಳು ಉತ್ತರಿಸಿದ್ದು, ಕೋವಿಡ್‌ ಕಾಲದ ಪರೀಕ್ಷಾ ಅಭಿಯಾನಕ್ಕೆ ಮತ್ತೂಂದು ಯಶಸ್ಸು ಲಭಿಸಿದೆ.

Advertisement

ಪರೀಕ್ಷೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಸುರೇಶ್‌ ಕುಮಾರ್‌, ಗಣಿತ ಪರೀಕ್ಷೆಗೆ 8,08,650 ವಿದ್ಯಾರ್ಥಿಗಳು ನೋಂದಾಯಿಸಿದ್ದು, 7,91,987 (ಶೇ.97.93) ವಿದ್ಯಾರ್ಥಿಗಳು ಉತ್ತರಿಸಿದ್ದಾರೆ ಎಂದರು.

ಕೋವಿಡ್‌ ಭಯದಿಂದ ಮೊದಲ ಪರೀಕ್ಷೆಗೆ ಗೈರಾಗಿದ್ದ ಧಾರವಾಡ ತಾಲೂಕಿನ ವಿದ್ಯಾರ್ಥಿನಿ ಗಣಿತ ಪರೀಕ್ಷೆ ಬರೆದಿದ್ದಾಳೆ. ಶ್ರೀರಂಗಪಟ್ಟಣದ ಒಬ್ಬಳೇ ವಿದ್ಯಾರ್ಥಿನಿಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಾಗರ ತಾಲೂಕಿನ 30 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ತಲುಪಲು ವ್ಯವಸ್ಥೆ ಮಾಡಲಾಗಿತ್ತು. ಅಪಘಾತದಲ್ಲಿ ಕಾಲು ಮುರಿದುಕೊಂಡಿರುವ ವಿದ್ಯಾರ್ಥಿ ಅರ್ಷದ್‌ ಪಾಷಾ ಪರೀಕ್ಷೆ ಬರೆದಿದ್ದಾನೆ ಎಂದು ಮಾಹಿತಿ
ನೀಡಿದರು.

ಆತಂಕ ದೂರ
ಹಾಸನ ಜಿಲ್ಲೆಯ ಮಲ್ಲಿಪಟ್ಟಣ ಸರಕಾರಿ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್‌ ದೃಢಪಟ್ಟು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ. ಆತನ ಜತೆಗಿದ್ದ 19 ವಿದ್ಯಾರ್ಥಿಗಳನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಿ ಕೊಠಡಿ ಸೀಲ್‌ಡೌನ್‌ ಮಾಡಲಾಗಿದೆ.

ಹಾಸನದಲ್ಲಿ ವಿದ್ಯಾರ್ಥಿನಿಯೊಬ್ಬಳ ಅಜ್ಜಿಗೆ ಕೋವಿಡ್‌ ದೃಢಪಟ್ಟಿದ್ದು, ವಿದ್ಯಾರ್ಥಿನಿಗೆ ಪರೀಕ್ಷೆಯಿಂದ ವಿನಾಯಿತಿ ನೀಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ಅಂಕರಕೋಣ ಗ್ರಾಮ ದಿಢೀರ್‌ ಕಂಟೈನ್ಮೆಂಟ್‌ ವಲಯವಾಗಿತ್ತು. ಅಲ್ಲಿನ 8 ವಿದ್ಯಾರ್ಥಿಗಳಿಗೆ ಬೇರೆಡೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದೇವೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ವಿದ್ಯಾರ್ಥಿಗೆ ಕೋವಿಡ್‌ ದೃಢಪಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಿ, ಸಂಪರ್ಕದ 21 ವಿದ್ಯಾರ್ಥಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.

Advertisement

ಪಾವಗಡ ತಾಲೂಕಿನಲ್ಲಿ ಪರಿಶೀಲನ ಅಧಿಕಾರಿಗೆ ಸೋಂಕು ದೃಢಪಟ್ಟು ಎಲ್ಲ ಸಿಬಂದಿ ಬದಲಾಯಿಸ ಲಾಗಿದೆ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಗದಗ ಜಿಲ್ಲೆಯ 6 ಖಾಸಗಿ ಅಭ್ಯರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚೆಂಗಟಿ ತಾಂಡಾದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಧೈರ್ಯದಿಂದ ಪರೀಕ್ಷೆ ಬರೆದ ಆಕೆಗೆ ಅಭಿನಂದನೆಗಳು.
-ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next