ಭಾಲ್ಕಿ: ಪ್ರಸ್ತುತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮಾಡುವಲ್ಲಿ ಮುಖ್ಯಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಬಾರಾಟಕ್ಕೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ನಿಮಿತ್ತ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮುಖ್ಯಶಿಕ್ಷಕರಿಗಾಗಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.
ಮುಖ್ಯಶಿಕ್ಷಕರು ಶಾಲೆಯ ಕನ್ನಡಿಯಾಗಿದ್ದಾರೆ. ಮುಖ್ಯಶಿಕ್ಷಕರು ಮನಸ್ಸು ಮಾಡಿದರೆ ತಮ್ಮ ಶಾಲೆಯ ಫಲಿತಾಂಶ ಪ್ರತಿಶತ ತರುವಲ್ಲಿ ಯಾವುದೇ ಸಂಶಯವಿಲ್ಲ. ಪ್ರತಿಶತ ಫಲಿತಾಂಶದೊಂದಿಗೆ ವಿದ್ಯಾರ್ಥಿಗಳ ಫಲಿತಾಂಶದ ಗುಣಮಟ್ಟವೂ ಹೆಚ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಮುಖ್ಯಶಿಕ್ಷಕರು ಕಾರ್ಯ ಪ್ರವರ್ತರಾಗಬೇಕು. ಹಾಗೆಯೇ ರಾಷ್ಟ್ರೀಯ ಕಾರ್ಯಕ್ರಮವಾದ 15+ ವಿದ್ಯಾರ್ಥಿಗಳ ಲಸಿಕಾಕರಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಉಪನಿರ್ದೇಶಕರ ಕಚೇರಿಯ ಎಸ್ಸೆಸ್ಸೆಲ್ಸಿ ಪರೀûಾ ನೋಡಲ್ ಅಧಿಕಾರಿ ಸಯ್ಯದ ಫುರಖಾನ ಪಾಶ್ಯಾ ಮಾತನಾಡಿ, ಸದ್ಯದಲ್ಲಿಯೇ ಫೆ.21ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಮುಖ್ಯ ಪರೀಕ್ಷೆಗೆ ನೋಂದಾಯಿಸಲ್ಪಟ್ಟ ಎಲ್ಲ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು. ಪೂರಕ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಮಗುವಿನ ಕಡೆ ಹೆಚ್ಚಿನ ಗಮನ ಹರಿಸಿ ಮುಖ್ಯ ಪರೀಕ್ಷೆಯಲ್ಲಿ ಎಲ್ಲರೂ ಉತ್ತೀರ್ಣರಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ಮಾತನಾಡಿ, ಫಲಿತಾಂಶದಲ್ಲಿ ಪ್ರತಿಸಲವೂ ತಾಲೂಕಿನಲ್ಲಿ ಉತ್ತಮ ವಾತಾವರಣ ಇದೆ. ಈ ವರ್ಷವೂ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಇದೆ. ಇನ್ನೂ ಪರೀಕ್ಷೆ ಬರೆಯಲು 50 ದಿನ ಬಾಕಿ ಇದೆ. ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡುವುದರೊಂದಿಗೆ ಉತ್ತಮ ಫಲಿತಾಂಶ ತರುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕರಾದ ಪ್ರಕಾಸ ರಾಠೊಡ, ಜಯರಾಜ ದಾಬಶೆಟ್ಟಿ, ಲಕ್ಷ್ಮಣ ಮೇತ್ರೆ ತಮ್ಮ-ತಮ್ಮ ಪ್ರೌಢಶಾಲೆಯ 2020ನೇ ಸಾಲಿನ ಫಲಿತಾಂಶ ವಿಶ್ಲೇಷಣೆ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ಮಾತನಾಡಿದರು. ಕಾರ್ಯಾಗಾರದಲ್ಲಿ ದೈಹಿಕ ಶಿಕ್ಷಣಾಧಿಕಾರಿ ರಾಠೊಡ, ತಾಲೂಕು ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಇಸಿಒ ಸಹದೇವ.ಜಿ, ಜಯರಾಮ ಬಿರಾದಾರ ಉಪಸ್ಥಿತರಿದ್ದರು.