ಬಾಗಲಕೋಟೆ: ಕೋವಿಡ್ ಭೀತಿ ಹಿನ್ನೆಲೆ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಜೂ. 25ರಿಂದ ಜುಲೈ 3ರವರೆಗೆ ನಡೆಯಲಿವೆ. ಪರೀಕ್ಷೆಗಾಗಿ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭದ ಒಂದುವರೆ ಗಂಟೆ ಮುಂಚೆಯೇ ಹಾಜರಾಗಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 99 ಪರೀಕ್ಷಾ ಕೇಂದ್ರಗಳಿದ್ದು, ಹೆಚ್ಚುವರಿಯಾಗಿ 24 ಪರೀಕ್ಷಾ ಕೇಂದ್ರಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಬಾದಾಮಿ ತಾಲೂಕಿನಲ್ಲಿ 16, ಬಾಗಲಕೋಟೆ 18, ಬೀಳಗಿಯಲ್ಲಿ 11, ಹುನಗುಂದ 14, ಜಮಖಂಡಿ 24, ಮುಧೋಳ 16 ಕೇಂದ್ರಗಳಿವೆ.
ಸೋಂಕಿತ ವಿದ್ಯಾರ್ಥಿಗೆ ಪೂರಕ ಪರೀಕ್ಷೆಗೆ ಅವಕಾಶ: ಜಿಲ್ಲೆಯಲ್ಲಿ ಒಟ್ಟು 31,165 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜತೆಗೆ ಬೇರೆ ಜಿಲ್ಲೆಗಳಿಂದ ಆಗಮಿಸಿದ 676 ಜನ ಸಹ ಜಿಲ್ಲೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಮುಧೋಳ ಒಂದರ ಶಾಲೆಯಲ್ಲಿ ಓರ್ವ ಎಸ್ಸೆಸ್ಸೆಲ್ಸಿ ಪರೀಕ್ಷಾ ವಿದ್ಯಾರ್ಥಿಗೆ ಕೋವಿಡ್ ದೃಢಪಟ್ಟಿದ್ದು, ಈತನಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತ ದೃಷ್ಟಿಯಿಂದ ಜಿಲ್ಲೆಯಲ್ಲಿ ಸ್ಥಾಪಿಸಲಾದ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಈಗಾಗಲೇ ಸ್ಯಾನಿಟೈಸರ್ ಮಾಡಲಾಗಿದ್ದು, ಜೂ. 24ರಂದು ಮತ್ತೂಮ್ಮೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಗುತ್ತಿದೆ.
ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ಆರೋಗ್ಯ ತಪಾಸಣೆ, ಸ್ಯಾನಿಟೈಸರ್ ಮಾಡಿ, ಸಾಮಾಜಿಕ ಅಂತರದ ಮೂಲಕ ಪರೀಕ್ಷಾ ಕೊಠಡಿಗಳಿಗೆ ಕಳುಹಿಸಲಾಗುವುದು. ತಪಾಸಣೆಯಲ್ಲಿ ಕೆಮ್ಮು, ನೆಗಡಿ, ಜ್ವರದ ಇರುವುದು ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುತ್ತಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸೇರಿದಂತೆ ಪರೀಕ್ಷೆಯ ಎಲ್ಲ ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಜ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಮಾಸ್ಕ್ ವಿತರಣೆ, ಸ್ಯಾನಿಟೈಸರ್ ಮಾಡಲಾಗುತ್ತಿದೆ.
ಪರೀಕ್ಷಾ ಕೇಂದ್ರದ 5 ಕಡೆಗಳಲ್ಲಿ ಪರೀಕ್ಷಾ ಕೊಠಡಿಗಳ ಮಾಹಿತಿ ಫಲಕಗಳನ್ನು ಇಡಲಾಗುತ್ತಿದೆ. ಈಗಾಗಲೇ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ದೂರವಾಣಿ ಹಾಗೂ ವಾಟ್ಸ್ ಆ್ಯಪ್ ಮೂಲಕ ಪರೀಕ್ಷಾ ಕೊಠಡಿಗಳ ಮಾಹಿತಿಯನ್ನು ಸಹ ನೀಡಲಾಗಿದೆ. ನಿಷೇಧಿತ ಪ್ರದೇಶ ಹೊರಗಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ಸೇವಾ ಸಂಸ್ಥೆಗಳಿಂದ ಮಾಸ್ಕ್ ವಿತರಣೆ ಅಥವಾ ಇತರೆ ವಾಣಿಜ್ಯ ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ತಿಳಿಸಿದ್ದಾರೆ.