ಕುಂದಾಪುರ: ಬೈಂದೂರು, ಕುಂದಾಪುರ ತಾಲೂಕಲ್ಲಿ ಮಾ. 28ರಿಂದ ಆರಂಭವಾಗಲಿರುವ ಎಸೆಸೆಲ್ಸಿ ಪರೀಕ್ಷೆಗೆ ಈಗಾಗಲೇ ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಉಭಯ ತಾ|ನಲ್ಲಿ ಒಟ್ಟು 4,980 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕುಂದಾಪುರದಲ್ಲಿ 2,762 ಮಂದಿ ವಿದ್ಯಾರ್ಥಿಗಳು (13 ಪುನರಾವರ್ತಿತ) ಹಾಗೂ ಬೈಂದೂರಲ್ಲಿ 2,218 ವಿದ್ಯಾರ್ಥಿಗಳು (ಇಬ್ಬರು ಪುನರಾವರ್ತಿತ) ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.
ಕುಂದಾಪುರ ತಾ|: 9 ಪರೀಕ್ಷಾ ಕೇಂದ್ರ
ಕುಂದಾಪುರ ತಾಲೂಕಿನಲ್ಲಿ ಕುಂದಾಪುರದ ಜೂನಿಯರ್ ಕಾಲೇಜು, ಸಂತ ಮೇರಿ ಪ್ರೌಢಶಾಲೆ, ವೆಂಕಟರಮಣ ಪ್ರೌಢಶಾಲೆ, ಕೋಟೇಶ್ವರ ಪಬ್ಲಿಕ್ ಶಾಲೆ, ಸರಸ್ವತಿ ವಿದ್ಯಾಲಯ ಪ.ಪೂ. ಕಾಲೇಜು, ಬಿದ್ಕಲ್‌ಕಟ್ಟೆ ಪಬ್ಲಿಕ್ ಶಾಲೆ, ಸಿದ್ದಾಪುರ ಸರಕಾರಿ ಪ್ರೌಢಶಾಲೆ ಹಾಗೂ ಶಂಕರನಾರಾಯಣ ಪ.ಪೂ. ಕಾಲೇಜಿನ ಪ್ರೌಢಶಾಲೆ ವಿಭಾಗ ಸೇರಿ ಒಟ್ಟು 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಬೈಂದೂರು ತಾ|: 9 ಪರೀಕ್ಷಾ ಕೇಂದ್ರ
ಬೈಂದೂರು ತಾ|ನಲ್ಲಿ ಬೈಂದೂರಿನ ಜೂ. ಕಾಲೇಜು, ರತ್ತುಬಾೖ ಜನತಾ ಪ್ರೌಢಶಾಲೆ, ಉಪ್ಪುಂದ ಪ.ಪೂ. ಕಾಲೇಜಿನ ಪ್ರೌಢಶಾಲೆ ವಿಭಾಗ, ಕಂಬದಕೋಣೆ ಸರಕಾರಿ ಪ.ಪೂ. ಕಾಲೇಜು, ನಾವುಂದ ಸರಕಾರಿ ಪ.ಪೂ. ಕಾಲೇಜು, ತಲ್ಲೂರು ಪ್ರೌಢಶಾಲೆ, ನೆಂಪು ಪಬ್ಲಿಕ್ ಶಾಲೆ, ಮೂಕಾಂಬಿಕಾ ಪ್ರೌಢಶಾಲೆ ಮಾವಿನಕಟ್ಟೆ ಹಾಗೂ ಕೊಲ್ಲೂರು ಸೇರಿ ಒಟ್ಟು 9 ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ಎಸೆಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಕರುಣಾಕರ ಶೆಟ್ಟಿ ಅವರು ಶನಿವಾರ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಸಿದ್ಧತೆ ಪರಿಶೀಲಿಸಿದರು.
ಮನೆಗೆ ತೆರಳಿ ಹಾಲ್ ಟಿಕೆಟ್ ವಿತರಣೆ
ಕುಂದಾಪುರ ಹಾಗೂ ಬೈಂದೂರು ಎರಡೂ ವಲಯದಲ್ಲಿಯೂ ಹಾಲ್ ಟಿಕೆಟ್ ಸಿಗದವರಿಗೆ ಮುಖ್ಯ ಶಿಕ್ಷಕರು, ಶಿಕ್ಷಕರು ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ವಿತರಿಸಿದ್ದಾರೆ. ಉಭಯ ವಲಯಗಳಲ್ಲಿಯೂ ಈ ಬಾರಿಯ ಫಲಿತಾಂಶ ವೃದ್ಧಿಗೆ ಮನೆ ಭೇಟಿ, ವಿಷಯವಾರು ಕಾರ್ಯಾಗಾರ, ತಜ್ಞರಿಂದ ತರಬೇತಿ, ಪ್ರತೀದಿನ ಸಂಜೆ ವಿಶೇಷ ತರಗತಿ, ಮಾರ್ಗದರ್ಶಿ ಪುಸ್ತಕಗಳನ್ನು ನೀಡಿರುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
2 ಕಡೆ ವಾಹನ ವ್ಯವಸ್ಥೆ
ಬೈಂದೂರು ತಾಲೂಕಿನಲ್ಲಿ ಕಂಬದಕೋಣೆ ಪರೀಕ್ಷಾ ಕೇಂದ್ರದಿಂದ ಬೋಳಂಬಳ್ಳಿಗೆ 35 ಮಕ್ಕಳಿಗಾಗಿ ಬೈಂದೂರು ರೋಟರಿ ಕ್ಲಬ್ ಸಹಕಾರ, ನಾವುಂದದಿಂದ ಬ್ಯಾಟ್ಯಾ ಯಿನಿಗೆ ನಾವುಂದ ಲಯನ್ಸ್ ಕ್ಲಬ್‌ನಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಉಳಿದೆಡೆಗಳಲ್ಲಿ ಬಸ್ ಅಥವಾ ಇತರ ವಾಹನಗಳ ಸೌಕರ್ಯ ಇರಲಿದೆ.
ಸಿದ್ಧತೆ ಪೂರ್ಣ
ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ, ಸಿದ್ಧಗೊಳಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಬರೆಯಬಹುದು. ಯಾವುದೇ ಆತಂಕ ಬೇಡ.
– ಅರುಣ್ ಕುಮಾರ್ ಶೆಟ್ಟಿ, ಕುಂದಾಪುರ ಹಾಗೂ ಜಿ.ಎಂ. ಮುಂದಿನಮನಿ ಬೈಂದೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು