ಉಡುಪಿ: ಎಸೆಸೆಲ್ಸಿ ಪರೀಕ್ಷೆ ಮಾ. 23ರಂದು ಆರಂಭಗೊಳ್ಳಲಿದ್ದು ಜಿಲ್ಲೆಯಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಪರೀಕ್ಷೆ ಎ. 6ರ ವರೆಗೆ ನಡೆಯಲಿದೆ.
51 ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, ಇದರಲ್ಲಿ ಬ್ರಹ್ಮಾವರ ವಲಯ 11, ಬೈಂದೂರು 8, ಕಾರ್ಕಳ 9, ಕುಂದಾಪುರ 8, ಉಡುಪಿ 15. ಉಡುಪಿ ಸ.ಪ.ಪೂ. ಕಾಲೇಜು, ಸಂತ ಸಿಸಿಲಿ ಪ್ರೌಢಶಾಲೆಯನ್ನು ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರವಾಗಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 14,643 ವಿದ್ಯಾರ್ಥಿ ಗಳು (7,650 ಬಾಲಕರು ಮತ್ತು 6,993 ಬಾಲಕಿಯರು) ಹಾಜರಾಗಲಿದ್ದಾರೆ. ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 6,699 ಬಾಲಕರು, 6,641 ಬಾಲಕಿಯರಿದ್ದು ಒಟ್ಟು 13,340, ರೆಗ್ಯುಲರ್ ಪುನರಾ ವರ್ತಿತರು 557 ಬಾಲಕರು, 224 ಬಾಲಕಿಯರು, ಒಟ್ಟು 781. ಖಾಸಗಿ ವಿದ್ಯಾರ್ಥಿಗಳಲ್ಲಿ 304 ಬಾಲಕರು, 89 ಬಾಲಕಿಯರು, ಒಟ್ಟು 393. ಖಾಸಗಿ ಪುನರಾವರ್ತಿತರು 90 ಬಾಲಕರು, 39 ಬಾಲಕಿಯರು, ಒಟ್ಟು 129.
ಕೇಂದ್ರಗಳಿಗೆ ಸಿಸಿಟಿವಿ, ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು, ಪ್ರಶ್ನೆ ಪತ್ರಿಕೆ ಸ್ವೀಕರಿಸಲು ಕಸ್ಟೋಡಿಯನ್ ನೇಮಕ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ 2 ಜಾಗೃತ ದಳ ರಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಯಾವುದೇ ಕೇಂದ್ರ ಸೂಕ್ಷ್ಮ ಅಥವಾ ಅತಿ ಸೂಕ್ಷ್ಮ ಎಂದು ಗುರುತಿಸಿಲ್ಲ. ಉಡುಪಿಯ ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿ ಉತ್ತರ ಪತ್ರಿಕೆಗಳನ್ನು ಇಡಲಾಗುವುದು. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಬೇಕಾದ ಎಲ್ಲ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.
ವೇಳಾಪಟ್ಟಿ
ಪರೀಕ್ಷೆಗಳು ಬೆಳಗ್ಗೆ 9.30ರಿಂದ ಆರಂಭಗೊಳ್ಳಲಿದೆ. ಪ್ರಥಮ ಭಾಷೆ ಮತ್ತು ಮುಖ್ಯವಿಷಯಗಳು (ಗಣಿತ, ವಿಜ್ಞಾನ, ಸಮಾಜ ವಿಜ್ಞಾನ) 3 ಗಂಟೆ ಅವಧಿ, 2ನೆಯ ಮತ್ತು 3ನೆಯ ಭಾಷಾ ಪರೀಕ್ಷೆ 2.30 ಗಂಟೆ ನಡೆಯಲಿದೆ.