ಬೆಂಗಳೂರು: ಕೋವಿಡ್-19 ಆತಂಕ, ಬಿಗಿ ಭದ್ರತೆ ಮತ್ತು ಸುರಕ್ಷತೆಯ ನಡುವೆ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗಿದೆ.
ಮೊದಲ ದಿನದ ದ್ವಿತೀಯ ಭಾಷೆ (ಇಂಗ್ಲಿಷ್ ಮತ್ತು ಕನ್ನಡ) ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬೆಳಗ್ಗೆ ಏಳು ಗಂಟೆಯಿಂದಲೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಬೆಳಗ್ಗೆ 10.30ಕ್ಕೆ ಸರಿಯಾಗಿ ಪರೀಕ್ಷೆ ಆರಂಭವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಬಿಗಿ ಪೊಲೀಸ್ ಭದ್ರತೆಯ ಜತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ವಹಿಸಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕೊಠಡಿ ಮೇಲ್ವಿಚಾರಣೆ ಮತ್ತು ಪ್ರಶ್ನೆ ಪತ್ರಿಕೆ ವಿತರಣೆ ಇತ್ಯಾದಿ ಕಾರ್ಯದಲ್ಲಿ ತಲ್ಲೀನವಾಗಿತ್ತು.
ಎಲ್ಲಾ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂಬ ದೃಷ್ಟಿಯಿಂದ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಿಂದಲೇ ಗುರುತು ಹಾಕಲಾಗಿತ್ತು. ಒಬ್ಬರ ಹಿಂದೆ ಒಬ್ಬರು ಎಷ್ಟು ಅಂತರದಲ್ಲಿ ನಿಲ್ಲಬೇಕು, ಎಲ್ಲಿ ಸ್ಯಾನಿಟೈಜೇಷನ್ ಮಾಡಿಕೊಳ್ಳಬೇಕು, ಆರೋಗ್ಯ ತಪಾಸಣೆ, ಬ್ಯಾಗ್ ಇಡುವ ಜಾಗ ಇತ್ಯಾದಿ ಎಲ್ಲವನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ. ಇದರ ಜತೆಗೆ ಮನೆಯಿಂದ ತಿಂಡಿ ತಂದಿರುವ ಮಕ್ಕಳಿಗೆ ತಿಂಡಿ ತಿನ್ನಲು ವ್ಯವಸ್ಥೆ ಮಾಡಿಕೊಡಲಾಗಿತ್ತು. ಕುಡಿಯಲು ನೀರಿನ ವ್ಯವಸ್ಥೆಯನ್ನು ಕೇಂದ್ರದಲ್ಲೇ ಮಾಡಲಾಗಿತ್ತು. ಕೆಲವು ಕೇಂದ್ರದಲ್ಲಿ ವಿದ್ಯಾರ್ಥಿಗಳಿ ಚಿಕ್ಕ ನೀರಿನ ಬಾಟಲಿಯನ್ನೇ ನೀಡಲಾಗಿದೆ. ಪರೀಕ್ಷೆಗೆ ಬಂದ ವಿದ್ಯಾರ್ಥಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗದಂತೆ ಎಲ್ಲ ಕೇಂದ್ರದಲ್ಲೂ ವ್ಯವಸ್ಥೆ ಮಾಡಲಾಗಿತ್ತು. ಇಷ್ಟೆಲ್ಲದ ನಡುವೆಯೂ ಕೆಲವು ಕೇಂದ್ರದಲ್ಲಿ ಸಾಮಾಜಿಕ ಅಂತರದ ಏರುಪೇರಾಗಿತ್ತು.
ನಗರ ಪ್ರದೇಶದಲ್ಲಿ ಬಹುತೇಕ ಪಾಲಕರು ತಾವಾಗಿಯೇ ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೆಲವು ಪಾಲಕರು ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋದರೆ, ಬಹುತೇಕ ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆ ಹಾಗೂ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಸಾರಿಗೆ ವ್ಯವಸ್ಥೆ ಮೂಲಕ ಪರೀಕ್ಷಾ ಕೇಂದ್ರ ತಲುಪಿದ್ದಾರೆ.
ಎಲ್ಲ ವಿದ್ಯಾರ್ಥಿಗಳು ಮನೆಯಿಂದಲೇ ಮಾಸ್ಕ್ ಧರಿಸಿ ಬಂದಿದ್ದರು. ಮಾಸ್ಕ್ ಇಲ್ಲದೇ ಬಂದಿದ್ದ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲೇ ಮಾಸ್ಕ್ ವಿತರಣೆ ಮಾಡಲಾಯಿತು. ಥರ್ಮಲ್ ಸ್ಕ್ರೀನಿಂಗ್ ಮಾಡಿ, ದೇಹದ ಉಷ್ಣಾಂಶ ನಿರ್ದಿಷ್ಟ ಉಷ್ಣಾಂಶಕ್ಕಿಂತೆ ಹೆಚ್ಚಿದ್ದ ಮಕ್ಕಳನ್ನು, ಜ್ವರ, ಶೀತಾ, ಕೆಮ್ಮು ಮೊದಲಾದ ದಿಢೀರ್ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸುವ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನ ಒಂದು ಕೇಂದ್ರದಲ್ಲಿ ಪ್ರವೇಶ ಪತ್ರದ ಗೊಂದಲದಿಂದ ವಿದ್ಯಾರ್ಥಿಗೆ ಪರೀಕ್ಷೆ ಎದುರಿಸಲು ಕಷ್ಟವಾಯಿತು. ನಂತರ ಅಧಿಕಾರಿಗಳು ಸಮಸ್ಯೆ ಸರಿಪಡಿಸಿ, ಪರೀಕ್ಷೆ ಬರೆಯಲು ಅವಕಾಶ ನೀಡಿದರು. ಬಹುತೇಕ ಕೇಂದ್ರದಲ್ಲಿ ಪಾಲಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗಲು 100 ಅಂತರದಲ್ಲಿ ಬ್ಯಾರಿಕೇಡ್ ಅಳವಡಿಸಿ, ಅಲ್ಲಿಯೇ ಮಕ್ಕಳನ್ನು ಬಿಟ್ಟು ಹೋಗಲು ಸೂಚಿಸಲು ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್ ಸಿಬ್ಬಂದಿ ನೇಮಕ ಮಾಡಲಾಗಿತ್ತು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿನ 8 ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ವ್ಯವಸ್ಥೆಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.