Advertisement

ಪ್ರವೇಶ ಪತ್ರದ ವಿಚಾರದಲ್ಲಿ ಮಕ್ಕಳ ಜೀವನದ ಜತೆ ಆಟ ಬೇಡ 

10:54 PM Jul 15, 2021 | Team Udayavani |

ಜುಲೈ 19 ಹಾಗೂ 22ರಂದು ಎಸೆಸೆಲ್ಸಿ ಪರೀಕ್ಷೆ ನಡೆಸಲು ರಾಜ್ಯ ಸರಕಾರ ಹಾಗೂ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಜಿಲ್ಲಾಡಳಿತಗಳು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿವೆ. ಆದರೆ ಪರೀಕ್ಷೆ ಬರೆಯಬೇಕಿ ರುವ ಅನೇಕ ವಿದ್ಯಾರ್ಥಿಗಳಿಗೆ ಇನ್ನು ಪ್ರವೇಶ ಪತ್ರವೇ ಸಿಕ್ಕಿಲ್ಲ. ಪ್ರವೇಶ ಪತ್ರ ಇಲ್ಲದೇ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಹೀಗಾಗಿ ಅತೀ ತುರ್ತಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಒದಗಿಸುವ ಕಾರ್ಯವನ್ನು ಸರಕಾರ ಮಾಡಬೇಕಿದೆ.

Advertisement

ಕೊರೊನಾದಿಂದ 2020-21ನೇ ಶೈಕ್ಷಣಿಕ ಚಟುವಟಿಕೆಗಳು ಭೌತಿಕ ವಾಗಿ ಸರಿಯಾಗಿ ನಡೆದಿಲ್ಲ. ವಿದ್ಯಾಗಮ, ಆನ್‌ಲೈನ್‌ ತರಗತಿ, ಪೂರ್ವ ಮುದ್ರಿತ ವೀಡಿಯೋ ತರಗತಿ ಹೀಗೆ ಸ್ಥಳೀಯ ಸೌಲಭ್ಯಗಳ ಅನುಸಾರ ತರ ಗತಿ ನಡೆದಿತ್ತು. ಹೀಗಾಗಿ ಅನೇಕ ಹೆತ್ತವ‌ರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡಿರಲಿಲ್ಲ ಮತ್ತು ಶುಲ್ಕ ಪಾವತಿಸಿಲ್ಲ. ಆದರೆ ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದ ಶುಲ್ಕ ಪಾವತಿಸಿದ್ದಾರೆ. ಶಾಲಾ ಮುಖ್ಯೋ ಪಾಧ್ಯಾಯರ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಆನ್‌ಲೈನ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಲು ಈಗಾಗಲೇ ಅವಕಾಶ ನೀಡಿ ದ್ದರಿಂದ ಬಹುತೇಕ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲಾ ಮುಖ್ಯಶಿಕ್ಷಕರು ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಆದರೆ ಕೆಲವೇ ಕೆಲವು ಖಾಸಗಿ ಶಾಲೆಗಳು ಶುಲ್ಕ ಪಾವತಿಸದ ವಿದ್ಯಾರ್ಥಿ ಗಳಿಗೆ ಪ್ರವೇಶ ಪತ್ರ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವ‌ರು ಗೊಂದಲ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ.

ಸರಕಾರ ಮತ್ತು ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಪತ್ರ ದೊರೆಯುವಂತೆ ಮಾಡಬೇಕು.  ಈಗಾಗಲೇ ಬಿಇಓ ಕಚೇರಿ ಮೂಲಕ ಪ್ರವೇಶ ಪತ್ರ ಪಡೆಯಬಹುದೆಂಬ ನಿರ್ಧಾರ ಕೈಗೊಂಡಿದ್ದು, ಇದು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಶಾಲೆಯಲ್ಲಿ ದಾಖಲಾತಿ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿ ಗಳ ಶೈಕ್ಷಣಿಕ ಭವಿಷ್ಯ ಹಾಳು ಮಾಡುವುದು ಸರಿಯಲ್ಲ. ಕೊರೊನಾ ತಂದೊಡ್ಡಿರುವ ಹಲವು ರೀತಿಯ ಸಮಸ್ಯೆ, ಆರ್ಥಿಕ ಸಂಕಷ್ಟದಿಂದ ಶುಲ್ಕ ಪಾವತಿಸಲೂ ಸಾಧ್ಯವಾಗದೇ ಇರಬಹುದು. ಮುಂದೆ ಕಂತುಗಳ ರೂಪ ದಲ್ಲಿ ಶುಲ್ಕ ಪಾವತಿ ಮಾಡಬಹುದು. ಇದಕ್ಕಾಗಿ ಮಕ್ಕಳ ಹೆತ್ತವ‌ರಿಗೆ ಸರಕಾರವೇ ಸಮಯಾವಕಾಶ ಕಲ್ಪಿಸಬೇಕಾಗುತ್ತದೆ. ಇವೆೆಲ್ಲದಕ್ಕೂ ಮಿಗಿ ಲಾಗಿ ಎಲ್ಲರಿಗೂ ಪ್ರವೇಶ ಪತ್ರ ಸಿಗುವಂತೆ ಮಾಡಬೇಕು.

ವರ್ಷ ಪೂರ್ತಿ ಅಧ್ಯಯನ ಮಾಡಿ, ಈಗ ಪರೀಕ್ಷೆ ಬರೆಯಲು ಸಾಧ್ಯ ವಾಗದೇ ಇದ್ದರೆ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಯಿದೆ. ಶುಲ್ಕ ಪಾವತಿಸದೇ ಇರಲು ಕೌಟುಂಬಿಕವಾಗಿ ಹಲವು ಸಮಸ್ಯೆ ಹೆತ್ತವ‌ರಿಗೆ ಇರಬಹುದು. ಆದರೆ ಅದೊಂದೇ ಕಾರಣ ಕ್ಕಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದಾ ದರೆ ಸಾಮಾಜಿಕವಾಗಿಯೂ ಅನೇಕ ಸಮಸ್ಯೆ ಎದುರಾಗಲಿದೆ. ಹೀಗಾಗಿ ಸರಕಾರ  ಜಾಣ ನಡೆಯ ಮೂಲಕ ತುರ್ತಾಗಿ ಪ್ರವೇಶ ಪತ್ರ ಒದಗಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಬೇಕು. ಈ ವರ್ಷ ಎಲ್ಲರೂ ತೇರ್ಗಡೆಯಾಗಲಿರು ವುದರಿಂದ ಅಂಕಪಟ್ಟಿಗಾಗಿ ವಿದ್ಯಾರ್ಥಿಗಳು ಅಲೆದಾಡುವ ಪರಿಸ್ಥಿತಿ ನಿರ್ಮಾಣ ವಾಗದಂತೆಯೂ ಸರಕಾರ ಎಚ್ಚರ ವಹಿಸಬೇಕು. ಶುಲ್ಕ ಪಾವತಿಸಿಲ್ಲ ಎಂದು ಅಂಕಪಟ್ಟಿ, ವರ್ಗಾವಣೆ ಪತ್ರ ಇತ್ಯಾದಿ ದಾಖಲೆ ಶಾಲಾಡಳಿತ ಮಂಡಳಿ ನೀಡದೇ ಇದ್ದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಸಮಸ್ಯೆ ಯಾಗಲಿದೆ. ಹೀಗಾಗಿ ಇದನ್ನು ಸರಕಾರ ಸೂಕ್ಷ್ಮವಾಗಿ ಬಗೆಹರಿಸಬೇಕಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next