Advertisement

ಎಸೆಸೆಲ್ಸಿ ಪರೀಕ್ಷೆ: ಮೊದಲ ಸ್ಥಾನಕ್ಕಾಗಿ ಇಲಾಖೆ ಪಣ

12:42 AM Feb 05, 2020 | mahesh |

ಮಹಾನಗರ: ಎಸೆಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳಬೇಕೆಂಬ ಉದ್ದೇಶದಿಂದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿಶೇಷ ಸಿದ್ಧತೆಗೆ ಎಲ್ಲ ಶಾಲೆಗಳಿಗೆ ಸೂಚನೆ ನೀಡಿದೆ. ಅದರಂತೆ ತರಗತಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆ ಭೇಟಿ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಪ್ರಕ್ರಿಯೆಗೆ ಶಾಲಾ ಶಿಕ್ಷಕರು ಮುಂದಾಗಿದ್ದಾರೆ.

Advertisement

2015-16ರಲ್ಲಿ ರಾಜ್ಯದಲ್ಲಿ 3ನೇ ಸ್ಥಾನ, 2016-17ನೇ ಸಾಲಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಜಿಲ್ಲೆ 2018-19ನೇ ಸಾಲಿನಲ್ಲಿ ಏಕಾಏಕಿ 7ನೇ ಸ್ಥಾನಕ್ಕೆ ಕುಸಿದಿತ್ತು. ವಿದ್ಯಾರ್ಥಿ ಗಳಿಗೆ ಎಲ್ಲ ರೀತಿಯಿಂದ ಮಾರ್ಗ ದರ್ಶನ ನೀಡಿ, ಫಲಿತಾಂಶ ಹೆಚ್ಚಳಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಫಲಿತಾಂಶದ ಶೇಕಡಾವಾರು ಕುಸಿತಗೊಂಡಿರುವುದು ಇಲಾಖೆ ಅಧಿಕಾರಿಗಳನ್ನು ಚಿಂತೆಗೀಡು ಮಾಡಿತ್ತು. ಈ ಬಾರಿ ಮೊದಲ ಸ್ಥಾನಗಳನ್ನು ಬಿಟ್ಟು ಕೊಡ ಬಾರದು ಎಂಬ ನಿಟ್ಟಿನಲ್ಲಿ ಕಲಿಕೆಯಲ್ಲಿ ಹಿಂದು ಳಿದ ವಿದ್ಯಾರ್ಥಿಗಳ ಬಗೆಗೆ ವಿಶೇಷ ಗಮನ ಹರಿಸುವ ಪ್ರಯತ್ನವನ್ನು ಇಲಾಖೆ ಮಾಡುತ್ತಿದೆ.

ಶೀಘ್ರವೇ ಮನೆಗೆ ಭೇಟಿ
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆ ಭೇಟಿ ಪ್ರತಿ ವರ್ಷವೂ ನಡೆಯುತ್ತದೆ. ಫೆ. 27ರಿಂದ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದ್ದು, ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳ ಮನೆಗೆ ಶಿಕ್ಷಕರೊಂದಿಗೆ ಎಸ್‌ಡಿಎಂಸಿ ಪದಾಧಿಕಾರಿಗಳು, ಊರಿನ ಮುಖಂಡರೂ ತೆರಳಿ ಕಲಿಕೆಗೆ ಪ್ರೋತ್ಸಾಹ ನೀಡಲಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಹೆತ್ತವರೊಂದಿಗೆ ಮಾತುಕತೆ ನಡೆಸಿ, ಓದಿನ ಕಡೆಗೆ ಗಮನ ನೀಡುವಲ್ಲಿ ಹೆತ್ತವರು ತೊಡಗಿಸಿಕೊಳ್ಳುವಿಕೆಯ ಬಗ್ಗೆ ತಿಳಿಸಿ ಕೊಡಲಿದ್ದಾರೆ. ಅಲ್ಲದೆ ಟಿವಿ, ಮೊಬೈಲ್‌ ಮಕ್ಕಳ ಕೈಗೆ ಸಿಗದಂತೆ, ಬೆಳಗ್ಗೆ ಬೇಗನೇ ಎದ್ದು ಓದುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಹೆತ್ತವರೊಂದಿಗೆ ವಿಚಾರ ವಿನಿಮಯ ನಡೆಸುವುದು ಈ ಮನೆ ಭೇಟಿಯ ಉದ್ದೇಶವಾಗಿರುತ್ತದೆ.

ವಿದ್ಯಾರ್ಥಿಗಳ ದತ್ತು ಸ್ವೀಕಾರ
ಎಸೆಸೆಲ್ಸಿ ವಿದ್ಯಾರ್ಥಿಗಳ ದತ್ತು ಸ್ವೀಕರಿಸಿ ಕಲಿಕೆ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ ಶಾಲೆಗಳಿಗೆ ಸೂಚಿಸಿದೆ. ಶಾಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳನ್ನು ಶಿಕ್ಷಕರಿಗೆ ಸಮಾನವಾಗಿ ಹಂಚಿಕೆ ಮಾಡಿ ಅವರ ಬಗ್ಗೆ ಪರೀಕ್ಷೆ ಮುಗಿಯುವವರೆಗೂ ನಿಗಾ ವಹಿಸುವುದು ವಿದ್ಯಾರ್ಥಿಗಳ ದತ್ತು ಸ್ವೀಕಾರದ ಉದ್ದೇಶ. ಪ್ರತಿ ಶಿಕ್ಷಕನೂ ತಾನು ದತ್ತು ಸ್ವೀಕರಿಸಿದ ವಿದ್ಯಾರ್ಥಿಯ ಮನೆಗೆ ಪ್ರತಿದಿನ ಮುಂಜಾನೆ 5 ಗಂಟೆಗೆ ಮತ್ತು ಸಂಜೆ 5, ರಾತ್ರಿ 9.30ಕ್ಕೆ ಕರೆ ಮಾಡಿ ವಿದ್ಯಾರ್ಥಿ ಓದುತ್ತಿದ್ದಾನೆಯೇ, ಮನೆಗೆ ತೆರಳಿದ್ದಾನೆಯೇ ಎಂಬುದನ್ನು ಹೆತ್ತ ವರಿಂದ ವಿಚಾರಿಸಿಕೊಳ್ಳಲಿದ್ದಾರೆ. ಶಾಲೆ ಯಲ್ಲಿಯೂ ಆ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಮುತುವರ್ಜಿ ವಹಿಸಿ ಕಲಿಕೆಗೆ ಪ್ರೋತ್ಸಾಹಿಸಲಾಗುತ್ತದೆ. ಈಗಾಗಲೇ ಪಾಠಗಳ ರಿವಿಜನ್‌ ನಡೆಸುವ ಕೆಲಸ ಆರಂಭವಾಗಿದ್ದು, ಪರೀಕ್ಷೆಗಳನ್ನೂ ಏರ್ಪಡಿಸಲಾಗುತ್ತಿದೆ. ಗುಂಪು ಕಲಿಕೆಗೆ ಶಾಲೆಗಳಲ್ಲಿ ಅವಕಾಶ ನೀಡಲಾಗುತ್ತಿದೆ.

ಎಸೆಸೆಲ್ಸಿ ಪರೀಕ್ಷೆಗೆ 30,605 ವಿದ್ಯಾರ್ಥಿಗಳು
ಮಾ. 27ರಿಂದ ಎ. 9ರ ವರೆಗೆ ಈ ವರ್ಷದ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. 2019-20ನೇ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲಿ ಒಟ್ಟು 30,605 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 1,6140 ಮಂದಿ ಬಾಲಕರು, 14,465 ಬಾಲಕಿಯರು. ಜಿಲ್ಲೆಯಲ್ಲಿ ಒಟ್ಟು 511 ಪ್ರೌಢ ಶಾಲೆಗಳಿವೆ.

Advertisement

ವಿಶೇಷ ಸಿದ್ಧತೆ
ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಮೊದಲ ಸ್ಥಾನ ಕಾಯ್ದುಕೊಳ್ಳಬೇಕೆಂಬ ನಿಟ್ಟಿನಲ್ಲಿ ವಿಶೇಷ ಸಿದ್ಧತೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ತೆಗೆದುಕೊಂಡು ಕಲಿಸಲಿದ್ದಾರೆ. ಮನೆ ಭೇಟಿ, ವಿಶೇಷ ರಿವಿಜನ್‌ ಸಹಿತ ಪರೀಕ್ಷೆ ಎದುರಿಸಲು ಬೇಕಾದ ಎಲ್ಲ ಪೂರಕ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
 - ಮಲ್ಲೇಸ್ವಾಮಿ, ದ.ಕ. ಡಿಡಿಪಿಐ

-  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next