Advertisement

ಎಸ್ಸೆಸ್ಸೆಲ್ಸಿ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆ ಬಾರದಿರಲಿ

06:09 PM Mar 18, 2022 | Team Udayavani |

ಕೋಲಾರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಣ್ಣಪುಟ್ಟ ತಪ್ಪುಗಳಿಗೂ ಅವಕಾಶ ನೀಡದೇ ಸುಗಮ ಪರೀಕ್ಷೆ ನಡೆಸುವ ಹೊಣೆ ನಿಮ್ಮದಾಗಿದ್ದು, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಗಸೂಚಿಯಂತೆ ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ಹಾಗೂ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆ ಆಗದಂತೆ ಕೆಲಸ ನಿರ್ವಹಿಸಿ ಎಂದು ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕಾ ಪಾಲಕರಿಗೆ ಡಿಡಿಪಿಐ ಕೃಷ್ಣಮೂರ್ತಿ ಸಲಹೆ ನೀಡಿದರು.

Advertisement

ನಗರದ ಆರ್‌ವಿ ಅಡ್ವೆಂಟ್‌ರೈಡ್‌ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ಎಲ್ಲಾ 84 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಉಪ ಮುಖ್ಯಅಧೀಕ್ಷಕರು, ಪ್ರಶ್ನೆಪತ್ರಿಕಾ ಪಾಲಕರಿಗಾಗಿ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವಸಿದ್ಧತಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಖಜಾನೆಯಿಂದ ಬಂದ ಪ್ರಶ್ನೆಪತ್ರಿಕೆ ಪಡೆದ ನಂತರ ಪರೀಕ್ಷೆ ಮುಗಿಸಿ ಉತ್ತರ ಪತ್ರಿಕೆಗಳ ಲಕೋಟೆಯನ್ನು ಕಳುಹಿಸುವವರೆಗೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ಗೊಂದಲಗಳಿಗೆ ಅವಕಾಶ ನೀಡದಿರಿ ಎಂದು ಹೇಳಿದರು.

ಪರಿಶೀಲಿಸಿ ಖಾತರಿಪಡಿಸಿಕೊಳ್ಳಿ: ಪರೀಕ್ಷಾ ಕೇಂದ್ರಗಳ ಸುಸ್ಥಿತಿಯ ಕುರಿತು ಗಮನಹರಿಸಿ, ಮಕ್ಕಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಕೂರಿಸುವಂತಿಲ್ಲ, ಶೌಚಾಲಯ, ಕುಡಿಯುವ ನೀರು, ಬೆಳಕು ಎಲ್ಲಾ ವಿಷಯಗಳ ಬಗ್ಗೆಯೂ ಮುಖ್ಯ ಅಧೀಕ್ಷಕರು ಕೇಂದ್ರಕ್ಕೆ ಹೋಗಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಿ, ಏನೇ ತಪ್ಪು ನಡೆದರೂ ನೀವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದರು.

ಸಮಯಪ್ರಜ್ಞೆ ಶಿಕ್ಷಕರಲ್ಲೂ ಮೂಡಿಸಿ: ಪರೀಕ್ಷಾ ಕೊಠಡಿಗಳಲ್ಲಿ ವಿನಾಕಾರಣ ಓಡಾಡಿ ಮಕ್ಕಳ ಏಕಾಗ್ರತೆಗೆ ಧಕ್ಕೆ ತರಬಾರದು, ಪ್ರತಿಕೊಠಡಿಗೂ ಪ್ರತ್ಯೇಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಡೆಸ್ಕ್ಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ, ಸಮಯಪ್ರಜ್ಞೆ ಶಿಕ್ಷಕರಲ್ಲೂ ಮೂಡಿಸಿ ಎಂದು ಹೇಳಿದರು.

Advertisement

ಗುಣಾತ್ಮಕ ಫಲಿತಾಂಶ ನಮ್ಮ ಗುರಿಯಾಗಿದೆ, ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆ ತಾರದಂತೆ ಎಚ್ಚರವಹಿಸುವ ಹೊಣೆ ನಿಮ್ಮದಾಗಿದೆ. ಕೇಂದ್ರಗಳ ಮುಖ್ಯ ಅಧೀಕ್ಷಕರು ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ಎದುರಾಗಲಾಗದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟರಾಮರೆಡ್ಡಿ, ಉಮಾದೇವಿ, ಕೃಷ್ಣಮೂರ್ತಿ, ಡಿವೈಪಿಸಿ ಗಂಗರಾಮಯ್ಯ, ಮೋಹನ್‌ಬಾಬು, ಎವೈಪಿಸಿ ಸಿದ್ದೇಶ್‌, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್‌, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ತಾಲೂಕು ಪರೀಕ್ಷಾ ನೋಡಲ್‌ ಅಧಿಕಾರಿಗಳಾದ ಮುನಿರತ್ನಯ್ಯಶೆಟ್ಟಿ, ಸಿ.ಎಂ. ವೆಂಕಟರಮಣಪ್ಪ, ಲಕ್ಷ್ಮೀಕಾಂತ್‌, ಅಮರನಾಥ್‌, ಅಂಜಿತ್‌ಕುಮಾರ್‌, ಬಾಬಾಜಾನ್‌, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಕಾರ್ಯದರ್ಶಿ ರವಿ, ಮತ್ತಿತರರಿದ್ದು, ಕಾರ್ಯಾಗಾರಕ್ಕೆ ಸ್ಥಳಾವಕಾಶ ನೀಡಿದ ಆರ್‌ವಿ ಶಾಲೆಗೆ ಧನ್ಯವಾದ ಸಲ್ಲಿಸಿದರು. ಜಿಲ್ಲೆಯ ಎಲ್ಲಾ 84 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಉಪಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಹಾಜರಿದ್ದರು.

ಗಣಿತ, ವಿಜ್ಞಾನಕ್ಕೆ ಪ್ರತ್ಯೇಕ ಬುಕ್‌ಲೆಟ್‌: ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ್ಯಗಳ ಮಾಹಿತಿ ನೀಡಿದ ನೋಡೆಲ್‌ ಅಧಿಕಾರಿ ಎ.ಎನ್‌.ನಾಗೇಂದ್ರ ಪ್ರಸಾದ್‌, ಪರೀಕ್ಷಾ ಕಾರ್ಯಗಳಿಗೆ ನೇಮಿಸಿಕೊಳ್ಳುವ ಶಿಕ್ಷಕರ ಪಟ್ಟಿಯನ್ನು ಕಡ್ಡಾಯವಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಮೋದಿಸಿರಬೇಕು ಎಂದು ವಿವರಿಸಿದರು.

ಈ ಬಾರಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನಕ್ಕೆ ಪ್ರತ್ಯೇಕ ಮಾದರಿ ಬುಕ್‌ಲೆಟ್‌ ನೀಡಲಾಗುತ್ತಿದೆ. ಇತರೆಲ್ಲಾ ವಿಷಯಗಳಿಗೂ ಒಂದೇ ಮಾದರಿಯ ಬುಕ್‌ಲೆಟ್‌ ನೀಡಲಾಗುವುದು. ಈ ಬಾರಿ ಹೆಚ್ಚುವರಿ ಹಾಳೆ ಬದಲಿಗೆ ಹೆಚ್ಚುವರಿ ಬುಕ್‌ಲೆಟ್‌ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೋವಿಡ್‌ ನಿಯಮ ಕಡ್ಡಾಯ ಪಾಲಿಸಿ: ಈ ಬಾರಿಯೂ ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ, ಈ ಸಂಬಂಧ ಸರ್ಕಾರದ ಮಾರ್ಗಸೂಚಿ ಪಾಲಿಸಿ, ಭದ್ರತೆಗಾಗಿ ಪೊಲೀಸ್‌ ಇಲಾಖೆಗೆ ಪತ್ರ ಬರೆದು ಸಿಬ್ಬಂದಿ ಒದಗಿಸಲು ತಿಳಿಸಿ, ಮಕ್ಕಳ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸರ್‌ ಸಿಂಪಡಣೆಗೆ ನಗರಸಭೆ ಮತ್ತು ಗ್ರಾಪಂಗಳಿಗೆ ಮನವಿ ಮಾಡಿ, ಆರೋಗ್ಯ ಇಲಾಖೆಗೆ ಪತ್ರ ಬರೆದು ಆರೋಗ್ಯ, ಆಶಾ ಕಾರ್ಯಕರ್ತರ ನೆರವು ಪಡೆದು ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ಕೊಡುವ ವ್ಯವಸ್ಥೆ ಮಾಡಿ ಎಂದು ವಿವರಿಸಿದರು.

ಈ ಬಾರಿ ಪ್ರತಿ ಕೊಠಡಿಗೆ ತಲಾ 20 ವಿದ್ಯಾರ್ಥಿಗಳನ್ನು ಕೂರಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಡೆಸ್ಕ್ ನಡುವೆ 3 ಅಡಿ ಅಂತರ ಕಾಪಾಡಿ, ಡೆಸ್ಕ್ಗಳನ್ನು ಬಾಗಿಲಿಗೆ ವಿರುದ್ಧ ದಿಕ್ಕಿನಲ್ಲಿ ಜೋಡಿಸಿ ಎಂದ ಅವರು, ದಿವ್ಯಾಂಗ ಮಕ್ಕಳಿಗೆ, ಸೋಂಕಿತರಿಗೆ ಪ್ರತ್ಯೇಕವಾಗಿ 2 ಕೊಠಡಿ ಕಾಯ್ದಿರಿಸಿ ಎಂದು ಸಲಹೆ ನೀಡಿದರು.

ಮೊಬೈಲ್‌ ಸ್ವಾಧೀನಕ್ಕೆ ಅಧಿಕಾರಿ ನೇಮಕ: ಇದೇ ಮೊದಲ ಬಾರಿಗೆ ಮೊಬೈಲ್‌ ಸ್ವಾಧೀನಾಧಿಕಾರಿಯನ್ನು ನೇಮಿಸಲಾಗಿದ್ದು, ಅವರು, ವಿದ್ಯಾರ್ಥಿಗಳಿಂದ, ಕೊಠಡಿ ಮೇಲ್ವಿಚಾರಕರಿಂದ ಮೊಬೈಲ್‌ ಸ್ವಾಧೀನ ಪಡಿಸಿಕೊಂಡು ಪರೀಕ್ಷೆ ನಂತರ ವಾಪಸ್‌ ನೀಡುವ ಕಾರ್ಯ ಮಾಡಲಿದ್ದಾರೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next