ಕಾರವಾರ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವುದೇ ರೀತಿಯ ವಿಘ್ನ ಬರದಂತೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಕಾರವಾರ-ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ಶುಕ್ರವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕೊರೊನಾ ಇರುವ ಕಾರಣಕ್ಕೆ ಪರೀಕ್ಷೆ ಎದುರಿಸುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ಶಿಕ್ಷಕರು ಕಾಳಜಿ ವಹಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡಬೇಕು. ಅಲ್ಲದೇ, ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಒಂದು ವೇಳೆ ಮಕ್ಕಳಲ್ಲಿ ಕೊರೊನಾ ದೃಢಪಟ್ಟರೆ ಅವರಿಗೆ ಪ್ರತ್ಯೇಕವಾದ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಹೆಚ್ಚುವರಿಯಾಗಿ ಕೊಠಡಿಗಳನ್ನು ಕಾಯ್ದಿರಿಸಬೇಕು. ಸೋಂಕು ದೃಢಪಟ್ಟ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ವೈದ್ಯರನ್ನು ನಿಯೋಜಿಸಲು ತಾಲ್ಲೂಕು ವೈದ್ಯಾಧಿಕಾರಿಗೆ ಸೂಚಿಸಿದರು.
ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 2748 ಸೋಂಕಿತರು ಗುಣಮುಖ; 1806 ಹೊಸ ಪ್ರಕರಣ ಪತ್ತೆ
ಹಳ್ಳಿಗಳಿಂದ ಬಸ್‌ನಲ್ಲಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಸುಸಜ್ಜಿತ ಬಸ್‌ಗಳ ವ್ಯವಸ್ಥೆ ಮಾಡಬೇಕು. ಕೆಲವು ಕಡೆಗಳಲ್ಲಿ ವಿಶೇಷ ಬಸ್‌ಗಳನ್ನು ಬಿಡಬೇಕು. ಬಸ್ಸಿನಲ್ಲಿ ಪರೀಕ್ಷೆಗೆ ಬರುವಾಗ ಮಕ್ಕಳಲ್ಲಿ ಕೊರೊನಾ ಭಯ ಹೋಗಲಾಡಿಸಲು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸವಾಗಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಮಾಹಿತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಇರಬೇಕು. ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿ ಪಾಲಕರಲ್ಲಿ ಭಯ ಹೊಗಲಾಡಿಸಬೇಕು. ಹಿಂದಿನ ವರ್ಷ ಪರೀಕ್ಷೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಿದ್ದಿರಿ ಅದೇ ರೀತಿ ಈ ಬಾರಿಯೂ ಯಶಸ್ವಿ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ವಿದ್ಯಾರ್ಥಿಗಳು ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವಂತೆ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಬಂದೋಬಸ್ತನ್ನು ಪೊಲೀಸ್ ಇಲಾಖೆ ಒದಗಿಸಬೇಕು. ಬಸ್ ಚಾಲಕರು, ನಿರ್ವಾಹಕರ ಹೆಸರು ಮತ್ತು ದೂರವಾಣಿ ಸಂಖ್ಯೆಯ ಮಾಹಿತಿಯನ್ನು ಶಾಲಾ ಶಿಕ್ಷಕರಿಗೆ ಪೊಲೀಸ್ ಇಲಾಖೆಗೆ ನೀಡಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ :ಮಂಡ್ಯ : ಅತ್ತೆಯನ್ನೇ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅಳಿಯಂದಿರ ಬಂಧನ
ಗೋವಾದಲ್ಲಿರುವ ಕನ್ನಡ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅಲ್ಲಿಯ ವಿದ್ಯಾರ್ಥಿಗಳಿಗೆ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿಯನ್ನು ತೆಗೆದುಕೊಂಡು ಬರುವಂತೆ ಕೇಳಿಕೊಂಡಿದ್ದು , ಅಲ್ಲಿಯ ಅಧಿಕಾರಿಗಳು ಮಕ್ಕಳ ಪರೀಕ್ಷೆ ಬರೆಯಲು ಸಹಕರಿಸುವುದಾಗಿ ಹೇಳಿದ್ದಾರೆ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಕಾರವಾರ ಮತ್ತು ಅಂಕೋಲಾ ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳು, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ, ಸಾರಿಗೆ ಇಲಾಖೆ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.