Advertisement

ಎಸೆಸೆಲ್ಸಿ ಉತ್ತರ ಪತ್ರಿಕೆ ಸ್ವರೂಪ ಬದಲಾಗಬೇಕಿಲ್ಲ

03:45 AM Jan 15, 2017 | |

ವಿದ್ಯಾರ್ಥಿಗಳಿಗೂ, ಮೌಲ್ಯಮಾಪಕರಿಗೂ ಪ್ರಶ್ನೆಸಹಿತ ಉತ್ತರಪತ್ರಿಕೆ ಬಹಳ ಅನುಕೂಲಕರವಾಗಿತ್ತು. ಯಾವ ಕಾರಣಕ್ಕೆ ಇಲಾಖೆ ಈ ಪದ್ಧತಿಯನ್ನು ಕೈಬಿಟ್ಟು ಹಳೆಯದನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆಯೋ ಗೊತ್ತಿಲ್ಲ. ಮುಂದಕ್ಕಿಟ್ಟ ಹೆಜ್ಜೆಯನ್ನು ಹಿಂದಕ್ಕಿಡುವ ಬದಲು, ಮತ್ತಷ್ಟು ಹೊಸತನಗಳನ್ನು ತರಲು ಶಿಕ್ಷಣ ಇಲಾಖೆ ಪ್ರಯತ್ನಿಸಬೇಕಿದೆ.

Advertisement

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳು ಆಗಬೇಕು ನಿಜ. ಬದಲಾದ ಕಾಲಕ್ಕೆ ಶಿಕ್ಷಣ ಕ್ಷೇತ್ರವೂ ಸ್ಪಂದಿಸಬೇಕು. ಆದರೆ ಶಿಕ್ಷಣ ವ್ಯವಸ್ಥೆ ಮುಂದಕ್ಕೆ ಅಡಿಯಿಡುವ ಬದಲು, ಹಿಮ್ಮುಖ ಚಲನೆಗೆ ಶ್ರಮಿಸುತ್ತಿದೆಯೇ ಎಂಬ ಸಂದೇಹ ಬರುತ್ತಿದೆ. ಒಂದರ್ಥದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳು ಶಿಕ್ಷಣವೆಂಬ ಪ್ರಯೋಗಶಾಲೆಯ ಬಲಿಪಶುಗಳು. ಕಳೆದ ಹತ್ತು ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ  ಪರೀಕ್ಷಾ ಪದ್ಧತಿಯಲ್ಲಿ ಆದ ಪ್ರಯೋಗಗಳು ಇದಕ್ಕೆ ನಿದರ್ಶನದಂತಿವೆ. ಪ್ರತ್ಯೇಕ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ವ್ಯವಸ್ಥೆ ದೂರಮಾಡಿ, ಶೇ.60 ಬಹು ಆಯ್ಕೆ ಪ್ರಶ್ನೆಗಳನ್ನು ನೀಡಿದರು. ಅದು ಮೂರ್ಖತನದ ಪರಮಾವಧಿ ಎಂದು ಅರಿವಾದಾಗ ಉತ್ತರ ಸಹಿತ ಪ್ರಶ್ನೆಪತ್ರಿಕೆಯಲ್ಲಿ ಹಿಂದಿನಂತೆ ನೂರು ಅಂಕಗಳಿಗೆ ಉತ್ತರ ಬರೆಯುವ ಪದ್ಧತಿ ಬಂತು. ಹೊಸ ಸಿಲೆಬಸ್‌ ಜಾರಿಯಾದ ಮೇಲೆ ಕಳೆದ ಎರಡು ವರ್ಷಗಳಿಂದ ಎಂಬತ್ತು ಅಂಕಗಳ ಬಾಹ್ಯ ಮೌಲ್ಯಮಾಪನಕ್ಕೆ ಲಿಖೀತ ಪರೀಕ್ಷೆ, ಇಪ್ಪತ್ತು ಅಂಕಗಳ ಆಂತರಿಕ ಮೌಲ್ಯಮಾಪನ ಹೀಗೆ ಒಟ್ಟು ನೂರು ಅಂಕಗಳ ಪರೀಕ್ಷೆ ಬಂತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಹೊಸ ಪದ್ಧತಿಯನ್ನು ಸ್ವೀಕರಿಸಿ, ಅದಕ್ಕೆ ಒಗ್ಗಿಕೊಂಡು ಅದರನುಸಾರ ಪರೀಕ್ಷಾ ಸಿದ್ಧತೆ ಆರಂಭಿಸಿದ್ದಾರೆ. ಮುಂದಿನ ಮಾರ್ಚ್‌ನ ಪರೀಕ್ಷೆಗೆ ಹಳೆಯ ಕ್ರಮದಲ್ಲಿ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ನೀಡುವ ಶಿಕ್ಷಣ ಸಚಿವರ ಹೇಳಿಕೆ ಇದೀಗ ಎಲ್ಲರ ನಿದ್ದೆಗೆಡಿಸಿದೆ. ಪಾಠ ಬೋಧಿಸುವ, ಮೌಲ್ಯಮಾಪನ ಮಾಡುವ ಶಿಕ್ಷಕರ ಹಾಗೂ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹ ನಡೆಸಿ ಅನಂತರ ಈ ಕ್ರಮವನ್ನು ಪುನಃ ಅನುಷ್ಠಾನಕ್ಕೆ ತರಬೇಕಿತ್ತು. 

ಹಲವು ಲಾಭ
ಪ್ರಶ್ನೆ ಸಹಿತ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಕ್ರಮವಾಗಿ ಒಂದನೇ ಪ್ರಶ್ನೆಯಿಂದ ಉತ್ತರ ಬರೆಯಲು ಪ್ರಾರಂಭಿಸಬೇಕಾಗಿರಲಿಲ್ಲ. ತನಗೆ ಸರಿಯಾಗಿ ತಿಳಿದಿರುವ ಉತ್ತರಗಳನ್ನು ಮೊದಲು ಬರೆದು, ಕೊನೆಗೆ ಬಾಕಿ ಉಳಿದವಕ್ಕೆ ಪ್ರಯತ್ನಿಸಬಹುದಿತ್ತು. ಇದರಿಂದ ವಿದ್ಯಾರ್ಥಿಯ ಪರೀಕ್ಷಾ ಭಯ ಹಾಗೂ ಒತ್ತಡಗಳು ದೂರವಾಗಿದ್ದವು.

ಈ ಕ್ರಮದಲ್ಲಿ ಕಣ್ತಪ್ಪಿನಿಂದ ಯಾವುದಾದರೊಂದು ಪ್ರಶ್ನೆಗೆ ಉತ್ತರಿಸದೇ ಉಳಿಯುವ ಪ್ರಮೇಯವೇ ಇರಲಿಲ್ಲ. ಪ್ರಶ್ನೆಯ ಕೆಳಗಿನ ಖಾಲಿ ಜಾಗ ಕಂಡಾಗ ಉತ್ತರಿಸಲು ನೆನಪಾಗುತ್ತಿತ್ತು.

ಅಗತ್ಯವಿರುವಷ್ಟು ಮಾತ್ರ ಗೆರೆಗಳನ್ನು ಉತ್ತರಕ್ಕಾಗಿ ನೀಡಿದ್ದರಿಂದ ಅನಗತ್ಯ ಅಥವಾ ಸಂಬಂಧಪಡದ ಉತ್ತರ ಬರೆಯುವ ಪ್ರಮೇಯವೇ ಇರಲಿಲ್ಲ. ನಿರ್ದಿಷ್ಟ ಜಾಗದಲ್ಲಿ ಸಾಧ್ಯವಾದಷ್ಟು ಸ್ಪಷ್ಟ ಉತ್ತರಗಳಿರುತ್ತಿದ್ದವು. 

Advertisement

ನಿರ್ದಿಷ್ಟ ಅಳತೆಯ ಜಾಗವಷ್ಟೇ ಇದ್ದು, ಪ್ರತಿಯೊಂದು ಉತ್ತರವೂ ಪ್ರತ್ಯೇಕವಾಗಿ ಎದ್ದು ಕಾಣುತ್ತಿದ್ದುದರಿಂದ  ವಿದ್ಯಾರ್ಥಿಗಳು ಸಾಧ್ಯವಾದಷ್ಟು ಸು#ಟವಾಗಿ, ಸುಂದರವಾಗಿ ಬರೆಯುತ್ತಿದ್ದರು. ಪ್ರತ್ಯೇಕ ಉತ್ತರ ಹಾಳೆ ಕೊಟ್ಟಾಗ ಅನಗತ್ಯ ವಿವರಣೆ, ಬಹುದೊಡ್ಡ ಗಾತ್ರದಲ್ಲಿ, ಪುಟದಲ್ಲಿ ಹತ್ತು ಅಕ್ಷರವೆಂಬಂತೆ ಬರೆಯುವುದು, ಕೊಳಕಾಗಿ ಬರೆಯುವುದು ಇತ್ಯಾದಿಗೆ ಅವಕಾಶ ಹೆಚ್ಚು.

ಮೌಲ್ಯಮಾಪಕರಿಗೆ ಸುಲಭವಾಗಿ ಪ್ರಶ್ನೆ ಸಂಖ್ಯೆಗನುಸಾರ ಮುಖಪುಟದಲ್ಲಿ ಅಂಕಗಳನ್ನು ನಮೂದಿಸಲು ಸಾಧ್ಯವಾಗುತ್ತಿತ್ತು. ಆದರೆ ಪ್ರತ್ಯೇಕ ಉತ್ತರ ಪತ್ರಿಕೆಯಿ¨ªಾಗ ಕ್ರಮಾನುಗತವಲ್ಲದೆಯೂ ಉತ್ತರಿಸಿರಬಹುದಾದ ಸಾಧ್ಯತೆಯಿರುವುದರಿಂದ ಅಂಕಗಳ ದಾಖಲಾತಿ, ತಾಳೆ ನೋಡುವಿಕೆ  ಕಷ್ಟವಾಗುತ್ತದೆ.

ಪ್ರತ್ಯೇಕ ಉತ್ತರ ಪತ್ರಿಕೆಯಿದ್ದರೆ ಒಬ್ಬ ವಿದ್ಯಾರ್ಥಿ ತನಗೆ ಗೊತ್ತಿರುವ ಉತ್ತರವನ್ನು ಒಂದಕ್ಕಿಂತ ಹೆಚ್ಚು ಬಾರಿ ಬರೆಯುವ ಸಂಭವವಿದ್ದು ಮೌಲ್ಯಮಾಪಕರಿಗೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ.

ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ನೀಡಿದಾಗ ಕೆಲವು ವಿದ್ಯಾರ್ಥಿಗಳಾದರೂ ಕ್ರಮಸಂಖ್ಯೆಗಳನ್ನು ತಪ್ಪಾಗಿ ನಮೂದಿಸಿ ಅಂಕ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ತನಗೆ ಗೊತ್ತಿರುವ ಉತ್ತರಗಳನ್ನು ವಿದ್ಯಾರ್ಥಿ ಮೊದಲು ಬರೆಯುತ್ತಾ ಹೋದರೆ ವಿದ್ಯಾರ್ಥಿಗೂ ಮೌಲ್ಯಮಾಪಕರಿಗೂ ಕಷ್ಟ. ಸರಿಯಾಗಿ ಗೊತ್ತಿಲ್ಲದ ಪ್ರಶ್ನೆಗಳಿಗೆ ವಿದ್ಯಾರ್ಥಿ ಉತ್ತರಿಸುವ ಕನಿಷ್ಠ ಪ್ರಯತ್ನವನ್ನೂ ಮಾಡದಿರಬಹುದು.

ಪುಟ ತುಂಬಿಸುವುದೊಂದೇ ಕೆಲವು ವಿದ್ಯಾರ್ಥಿಗಳ ಗುರಿಯಾಗಿರುತ್ತದೆ. ಅದರಲ್ಲಿ ನಿಖರ ಉತ್ತರ ಎಲ್ಲಿದೆಯೆಂದು ಹುಡುಕಿ ಅಂಕ ಹಾಕುವುದು ಬಹಳ ಕಷ್ಟದ ಕೆಲಸ.

ಪ್ರಶ್ನೆ ಸಹಿತ ಉತ್ತರಪತ್ರಿಕೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಅನಿವಾರ್ಯತೆ ವಿದ್ಯಾರ್ಥಿಗಳಿಗಿತ್ತು.  ಮೊದಲೇ ಉತ್ತರಕ್ಕಾಗಿ ಕೊಟ್ಟಿರುವ ಜಾಗದಲ್ಲಿ ಖಾಲಿ ಉಳಿಯಬಾರದೆಂಬ ಕಾರಣಕ್ಕಾದರೂ ಬರೆದಾಗ ಅದು ಸರಿಯುತ್ತರವಾಗಿದ್ದು, ಅಂಕ ಲಭಿಸುವ ಸಾಧ್ಯತೆಯಿತ್ತು. 

ಪ್ರತ್ಯೇಕ ಉತ್ತರ ಪತ್ರಿಕೆಯಿದ್ದರೆ ಯಾವುದಾದರೊಂದು ಪ್ರಶ್ನೆಗೆ ಉತ್ತರ ಗೊತ್ತಿದೆಯೆಂದು ಅಗತ್ಯಕ್ಕಿಂತ ಹೆಚ್ಚು ಬರೆಯುವ ವಿದ್ಯಾರ್ಥಿಗೆ ಕೊನೆಯಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಸಾಕಾಗುವುದಿಲ್ಲ. 

ಯಾವುದೇ ವಿಷಯದಲ್ಲಿ ಪೂರ್ಣಾಂಕ ಗಳಿಸಲು ಸಾಧ್ಯತೆಗಳು ಕಡಿಮೆಯಾಗುತ್ತವೆ.

ಉತ್ತರಗಳ ವಸ್ತುನಿಷ್ಠತೆ, ನಿಖರತೆ ಕಡಿಮೆಯಾಗಬಹುದು.

ಅತ್ಯಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿ ತನಗೆ ಉತ್ತರ ಗೊತ್ತಿದ್ದರೂ ಕಣ್ತಪ್ಪಿನಿಂದ ಕೆಲವು ಪ್ರಶ್ನೆಗಳನ್ನು ಬಿಟ್ಟು ಅಂಕಗಳನ್ನು ಕಳೆದುಕೊಳ್ಳಬಹುದು. 

ತಮ್ಮ ಸುತ್ತಮುತ್ತ ಕುಳಿತ ವಿದ್ಯಾರ್ಥಿಗಳು ಬೇಗಬೇಗ ಪುಟಗಳನ್ನು ತುಂಬಿಸುತ್ತಾ ಹೋದಾಗ ಕಲಿಕೆಯಲ್ಲಿ ಹಿಂದುಳಿದ ಮಗು ಮತ್ತಷ್ಟು ಗೊಂದಲಕ್ಕೀಡಾಗಿ ತನಗೆ ಗೊತ್ತಿರುವ ಅಲ್ಪಸ್ವಲ್ಪ ಉತ್ತರವನ್ನೂ ಮರೆತುಬಿಡಬಹುದು. 

ಕೆಲವು ಮೌಲ್ಯಮಾಪಕರಾದರೂ ಉತ್ತರ ಓದಿ ನೋಡದೇ, ಉತ್ತರದ ಉದ್ದ, ಪುಟಗಳ ಲೆಕ್ಕ ನೋಡಿ ಅಂಕ ನೀಡಬಹುದು. ನಿಖರ ಉತ್ತರ ಬರೆದವನಿಗೆ ಕಡಿಮೆ ಅಂಕಗಳೂ ಏನೇನೋ ಬರೆದು ಪುಟ ತುಂಬಿಸಿದವನಿಗೆ ಹೆಚ್ಚು ಅಂಕವೂ ಬರಬಹುದು.

ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೂ ಮೌಲ್ಯಮಾಪಕರಿಗೂ ಪ್ರಶ್ನೆಸಹಿತ ಉತ್ತರಪತ್ರಿಕೆ ಬಹಳ ಅನುಕೂಲಕರವಾಗಿತ್ತು. ಯಾವ ಕಾರಣಕ್ಕೆ ಇಲಾಖೆ ಈ ಪದ್ಧತಿಯನ್ನು ಕೈಬಿಟ್ಟು ಹಳೆಯದನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆಯೋ ಗೊತ್ತಿಲ್ಲ. ಆದರೆ ಇದರಿಂದ ಹಲವು ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳಿಕೆಯ ಪ್ರಮಾಣ ಕುಸಿಯುತ್ತದೆ. ರಾಜ್ಯದ ಶೇಕಡಾವಾರು ಫ‌ಲಿತಾಂಶವೂ ಕುಸಿಯುತ್ತದೆ. ಕನಿಷ್ಠ ಅಂಕ ತೆಗೆದು ಪಾಸಾಗಬಹುದಾಗಿದ್ದ ಹಲವು ವಿದ್ಯಾರ್ಥಿಗಳು ನಪಾಸಾಗುವ ಸಾಧ್ಯತೆ ಹೆಚ್ಚು. ಮುಂದಕ್ಕಿಟ್ಟ ಹೆಜ್ಜೆಯನ್ನು ಹಿಂದಕ್ಕಿಡುವ ಬದಲು, ಮತ್ತಷ್ಟು ಹೊಸತನಗಳನ್ನು ತರಲು ಶಿಕ್ಷಣ ಇಲಾಖೆ ಪ್ರಯತ್ನಿಸಬೇಕಿದೆ. 

– ಜೆಸ್ಸಿ ಪಿ. ವಿ., ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next