Advertisement
ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸುವ ಕ್ರಮ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಆದರೆ ಈಗ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೂ ತಮ್ಮ ಫಲಿತಾಂಶ ಸುಧಾರಣೆಗೆ ಮತ್ತೆರಡು ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದೆ. ಇದರಿಂದ ವರ್ಷದ ನಾಲ್ಕು ತಿಂಗಳು ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ಮಕ್ಕಳು, ಶಿಕ್ಷಕರು ಪರೀಕ್ಷಾ ಚಟುವಟಿಕೆಯಲ್ಲೇ ವ್ಯಸ್ತರಾಗಿರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಚೈಲ್ಡ್ ರೈಟ್ಸ್ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ ರಾವ್ ಪ್ರಕಾರ, ಈ ಮೂರು ಪರೀಕ್ಷಾ ಪದ್ಧತಿಯನ್ನು ಜಾರಿಗೊಳಿಸುವ ಮೊದಲು ಸರಕಾರ ಮಕ್ಕಳು, ಶಿಕ್ಷಕರು ಮತ್ತು ಪಾಲಕರ ಅಭಿಪ್ರಾಯ ಪಡೆದಿಲ್ಲ. ಅವೈಜ್ಞಾನಿಕವಾಗಿ ಮೂರು ಪರೀಕ್ಷೆ ಪದ್ಧತಿಯನ್ನು ಅನುಷ್ಠಾನಕ್ಕೆ ತಂದಿದೆ. ಮೂರು ಪರೀಕ್ಷೆಗಳ ಪದ್ಧತಿ ಮಕ್ಕಳಲ್ಲಿ ಅನಗತ್ಯ ಒತ್ತಡಕ್ಕೆ ಕಾರಣವಾಗಿದೆ. ಹಿಂದಿನ ಪದ್ಧತಿಯಿದ್ದಾಗ ಶಿಕ್ಷಕರು ಮುಂದಿನ ಶೈಕ್ಷಣಿಕ ವರ್ಷಕ್ಕೆ ತಯಾ ರಾಗಿ ಬರಲು, ಪುನಃಶ್ಚೇತನಗೊಳ್ಳಲು ಸಮಯಾವಕಾಶ ಇರುತ್ತಿತ್ತು. ಆದರೆ ಈಗ ಹಾಗಿಲ್ಲ, ಆದ್ದರಿಂದ ಸರಕಾರ ಮೂರು ವರ್ಷಗಳ ಪರೀಕ್ಷಾ ಕ್ರಮದ ಬಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಸಮೀಕ್ಷೆ ನಡೆಸಬೇಕು ಎಂದು ಹೇಳುತ್ತಾರೆ.
Related Articles
ಕರ್ನಾಟಕ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಯೋಗಾನಂದ ಪ್ರಕಾರ, ಸರಕಾರದ ಮೂರು ಪರೀಕ್ಷೆ ಪದ್ಧತಿಯು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಮುದ್ರಕರಿಗೆ ಮಾತ್ರ ಲಾಭ ತರುವಂತಿದೆ. ಹೊಸ ಪದ್ಧತಿಯಿಂದ ಫೆಬ್ರವರಿಯಿಂದ ಜುಲೈವರೆಗೆ ಅಂದರೆ 6 ತಿಂಗಳು ಮಕ್ಕಳು ಪರೀಕ್ಷಾ ಮೂಡ್‌ನಲ್ಲೇ ಇರುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
Advertisement
ಉತ್ತೀರ್ಣಗೊಂಡವರ ಮೇಲೆಯೇ ಹೆಚ್ಚಿನ ಒತ್ತಡ ಖಾಸಗಿ ಶಾಲೆಗಳ ಸಂಘಟನೆ ಕ್ಯಾಮ್ಸ್‌ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಈಗ ಶೇ. 89 ಅಂಕ ಪಡೆದವರು ಕೂಡ ನನಗೆ ಯಾಕೆ ಶೇ. 90 ಬಂದಿಲ್ಲ ಎಂದು ಪರೀಕ್ಷೆ ಬರೆಯು ವಂತೆ ಆಗಿದೆ. ಅದೇ ರೀತಿ ಮುಂದಿನ ಪರೀಕ್ಷೆಗಳಲ್ಲಿ ಮೊದಲ ಪರೀಕ್ಷೆಗಿಂತ ಕಡಿಮೆ ಅಂಕ ಬಂದರೆ ಅನಾವಶ್ಯಕ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾರೆ. ನನಗಿರುವ ಮಾಹಿತಿ ಪ್ರಕಾರ ಅನುತ್ತೀರ್ಣ ಗೊಂಡವರಿಗಿಂತ ಉತ್ತೀರ್ಣಗೊಂಡ ವಿದ್ಯಾರ್ಥಿಗಳೇ ಪರೀಕ್ಷೆ 2 ಬರೆಯುವ ಒತ್ತಡ ಅನುಭವಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಡುತ್ತಾರೆ. ಹೊಸ ಪರೀಕ್ಷಾ ಪದ್ಧತಿ ಅಪಾಯಕಾರಿ ಸ್ಥಿತಿಯನ್ನು ಸೃಷ್ಟಿಸಿದೆ. ಮಕ್ಕಳು ಓದಿನ ಕಡೆ ತೀವ್ರ ನಿರಾಸಕ್ತಿ ಧೋರಣೆ ತಾಳುತ್ತಿದ್ದಾರೆ. ಶಿಕ್ಷಕರು ಹೊಸ ಶೈಕ್ಷಣಿಕ ವರ್ಷ ಪ್ರಾರಂಭಗೊಂಡರೂ ಹಿಂದಿನ ಶೈಕ್ಷಣಿಕ ವರ್ಷದ ಕೆಲಸದಲ್ಲೇ ವ್ಯಸ್ತರಾಗುವಂತಾದರೆ ಅದರ ದುಷ್ಪರಿಣಾಮ ಹೊಸ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಮೇಲಾಗುತ್ತದೆ. ಶಿಕ್ಷಕರಿಗೆ ಕೆಲಸದ ತೀವ್ರ ಒತ್ತಡ ಸೃಷ್ಟಿಯಾಗಿದೆ. ಈ ಹಿಂದಿನ ಪದ್ಧತಿಯೇ ಉತ್ತಮವಾಗಿತ್ತು.
-ಎಂ.ಕೆ.ಬಿರಾದಾರ, ಕರ್ನಾಟಕ ರಾಜ್ಯ ಪ್ರೌಢಶಾಲಾ
ಸಹ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ -ರಾಕೇಶ್ ಎನ್.ಎಸ್.