Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಶುರು; 310 ಮಂದಿ ಗೈರು

02:54 PM Mar 29, 2022 | Team Udayavani |

ಗದಗ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಸೋಮವಾರದಿಂದ ಆರಂಭಗೊಂಡಿತು. ನಗರದ ಸಿ.ಎಸ್‌. ಪಾಟೀಲ ಪ್ರೌಢಶಾಲಾ ಪರೀಕ್ಷಾ ಕೇಂದ್ರ ಹೊರತುಪಡಿಸಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ಪರೀಕ್ಷೆ ನಡೆಯಿತು.

Advertisement

ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಿತು. ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಹೆಸರು ನೋಂದಾಯಿಸಿಕೊಂಡಿದ್ದ 16,476 ಪೈಕಿ 8048 ಗಂಡು, 8118 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 16166 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.

ಜಿಲ್ಲೆಯ 66 ಪರೀಕ್ಷಾ ಕೇಂದ್ರಗಳ ಪೈಕಿ ಗದಗ ಶಹರ ವಲಯದಲ್ಲಿ 121 ವಿದ್ಯಾರ್ಥಿಗಳು, ಗ್ರಾಮೀಣ ವ್ಯಾಪ್ತಿಯಲ್ಲಿ 37, ಮುಂಡರಗಿ ತಾಲೂಕಿನಲ್ಲಿ 50, ನರಗುಂದ ತಾಲೂಕಿನಲ್ಲಿ 9, ರೋಣ ತಾಲೂಕಿನಲ್ಲಿ 43 ಮತ್ತು ಶಿರಹಟ್ಟಿ ತಾಲೂಕಿನಲ್ಲಿ 48 ವಿದ್ಯಾರ್ಥಿಗಳು ಸೇರಿ ಒಟ್ಟು 310 ಗೈರಾಗಿದ್ದಾರೆ.

ಪರೀಕ್ಷಾ ಅಕ್ರಮಗಳ ತಡೆಗಾಗಿ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜಿಲ್ಲಾದ್ಯಂತ ಬಿಗಿ ಭದ್ರತೆಯಲ್ಲಿ ಸುಗಮವಾಗಿ ಪರೀಕ್ಷೆ ನಡೆಯಿತು. ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ಡಿಬಾರ್‌ ಮತ್ತು ನಕಲು ಅವ್ಯವಹಾರ ನಡೆದಿಲ್ಲವೆಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ರುದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಹಿಜಾಬ್‌ ತೆಗೆದಿಟ್ಟ ವಿದ್ಯಾರ್ಥಿನಿಯರು: ನಗರದ ಸಿ.ಎಸ್‌. ಪಾಟೀಲ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಹಾಕಿಕೊಂಡು ಬಂದು ಪರೀಕ್ಷೆ ಬರೆಯುತ್ತಿದ್ದರು ಎಂಬ ಆರೋಪ ಕೇಳಿ ಬಂದಿತು. ಆದರೆ, ಪರೀಕ್ಷೆ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಇರುವ ಮೇಜುಗಳಲ್ಲಿ ಕುಳಿತಿದ್ದರು. ಆ ವೇಳೆಗೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ವಿತರಿಸಲಾಗಿರಲಿಲ್ಲ. ಬೆಲ್‌ ಕೂಡಾ ಆಗಿರಲಿಲ್ಲ. ಬೆಲ್‌ ಆಗುವ ಮುನ್ನವೇ ಹಿಜಾಬ್‌ ತೆಗೆಯುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸಲಾಯಿತು. ಹಿಜಾಬ್‌ ಧರಿಸಲು ಹಾಗೂ ತೆಗೆದಿರಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.

 

ಸಿ.ಎಸ್‌.ಪಾಟೀಲ ಶಾಲೆಯಲ್ಲಿ ಹಿಜಾಬ್‌ ಧರಿಸಿದ್ದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಡಿಡಿಪಿಐ ಅವರೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಸರಕಾರದ ನಿಯಮಗಳನ್ನು ಯಥಾವತ್ತಾಗಿ ಪಾಲಿಸಲಾಗಿದೆ.

-ಆರ್‌.ಎಲ್‌.ಮ್ಯಾಗೇರಿ, ಶಹರ ಬಿಇಒ

 

ಸಿ.ಎಸ್‌.ಪಾಟೀಲ ಪ್ರೌಢಶಾಲೆಯಲ್ಲಿ ಪರೀಕ್ಷೆ ಪೂರ್ವದಲ್ಲಿ ವಿದ್ಯಾರ್ಥಿಗಳು ಹಿಜಾಬ್‌ ಹಾಕಿಕೊಂಡು ಬಂದಿದ್ದರು. ನಂತರ ಶಿಕ್ಷಕರು ಹಿಜಾಬ್‌ ತೆಗೆಸಿ ಪರೀಕ್ಷೆ ಬರೆಸಿದ್ದಾರೆ. ಶಾಲೆಯ ವಿಡಿಯೋಗಳ ಪರಿಶೀಲನೆ ಮಾಡಲಾಗಿದೆ. ವಿದ್ಯಾರ್ಥಿಗಳು ನಂತರ ಹಿಜಾಬ್‌ ತೆಗೆದು ಪರೀಕ್ಷೆ ಬರೆದಿದ್ದು ಕಂಡುಬಂದಿದೆ. ಸರಕಾರದ ಆದೇಶಕ್ಕೆ ಎಲ್ಲೂ ಧಕ್ಕೆಯಾಗಿಲ್ಲ.

-ಜಿ.ಎಂ. ಬಸವಲಿಂಗಪ್ಪ, ಡಿಡಿಪಿಐ

 

ಏಕಾಗ್ರತೆ ಹೆಚ್ಚಿಸಲು ಧ್ಯಾನ: ಭೂಮರೆಡ್ಡಿ ಸರ್ಕಲ್‌ ಸಮೀಪದ ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಲು ಮೂರು ನಿಮಿಷಗಳ ಕಾಲ ಧ್ಯಾನ ಮಾಡಿಸಲಾಯಿತು. ಪರೀಕ್ಷೆ ಆರಂಭಕ್ಕೂ ಅರ್ಧ ಗಂಟೆ ಮುನ್ನವೇ ಬಂದಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಲು ಶಾಲೆಯ ಮುಖ್ಯಗುರು ಕೊಟ್ರೇಶ್‌ ಮೆಣಸಿನಕಾಯಿ ಹಾಗೂ ಸಹ ಶಿಕ್ಷಕರು ಪ್ರೇರಣಾದಾಯಕ ಮಾತುಗಳನ್ನಾಡಿದರು. ಯಾವುದೇ ಕಾರಣಕ್ಕೂ ವಿಚಿಲಿತರಾಗಬಾರದು. ಪ್ರತಿಯೊಂದು ಪ್ರಶ್ನೆಗಳಿಗೂ ಸಮಚಿತ್ತ ಉತ್ತರಿಸಬೇಕು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next